ಶಾಲೆಗೆ ಬರುವ ಮಕ್ಕಳಿಗೆ ಹಳೇ ಸೀರೆಗಳಿಂದ ರಕ್ಷಣೆ; ಶಿಕ್ಷಕರೋರ್ವರ ವಿನೂತನ ಐಡಿಯಾ

Old Saree
Published on

ಕರ್ನೂಲ್​: ಅವಶ್ಯಕತೆಯೆಂಬುದು ಆವಿಷ್ಕಾರದ ಹುಟ್ಟಿಗೆ ಕಾರಣವಾಗುತ್ತದೆ ಎಂಬ ಜನಪ್ರಿಯ ಮಾತಿದೆ. ಹಾಗೇ ಕರೊನಾ ಮಧ್ಯೆ ಮಕ್ಕಳಿಗೆ ಸುರಕ್ಷಿತವಾಗಿ ಪಾಠ ಮಾಡುವುದಕ್ಕೋಸ್ಕರ ಇಲ್ಲೊಂದು ಹೊಸ ಆವಿಷ್ಕಾರ ಮಾಡಲಾಗಿದೆ.

ಆಂಧ್ರಪ್ರದೇಶದಲ್ಲಿ ಶಾಲೆಗಳು ಪುನರಾರಂಭವೇನೋ ಆಗಿವೆ. ಆದರೆ ಇದರಿಂದಾಗಿ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಕರೊನಾ ಸೋಂಕಿಗೆ ಒಳಗಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಹೀಗಿರುವಾಗ ಗಡಿವೆಮುಲಾ ಜಿಲ್ಲೆಯ ಜಿಲ್ಲಾ ಪರಿಷದ್​ ಹೈಸ್ಕೂಲ್​ನ ಶಿಕ್ಷಕರೋರ್ವರು, ಮಕ್ಕಳನ್ನು ಕರೊನಾದಿಂದ ಕಾಪಾಡಲು, ಪಸರಿಸದಂತೆ ನಿಯಂತ್ರಣ ಮಾಡಲು ಹೊಸ ಐಡಿಯಾವನ್ನು ಮಾಡಿದ್ದಾರೆ. ಈ ಶಿಕ್ಷಕರು ಶಾಲೆಯ ಒಳಗೆ ಪಾಠ ಮಾಡುವ ಬದಲು ಹೊರಗೆ ಆವರಣದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ. ಒಬ್ಬರನ್ನೊಬ್ಬರನ್ನು ದೂರ ಕೂರಿಸಿದ್ದಲ್ಲದೆ, ಹಳೇ ಸೀರೆಗಳನ್ನು ಅಡ್ಡ ಕಟ್ಟಿದ್ದಾರೆ.

ಒಂದು ಸಾಲಿನಲ್ಲಿ ಮಕ್ಕಳನ್ನು ಒಬ್ಬರ ಹಿಂದೆ ಒಬ್ಬರನ್ನು ಅಂತರದಲ್ಲಿ ಕೂರಿಸಲಾಗಿದೆ. ಹಾಗೆ ಒಂದು ಸಾಲು ಹಾಗೂ ಮತ್ತೊಂದು ಸಾಲಿನ ಮಧ್ಯೆ ಹಳೇ ಸೀರೆಗಳನ್ನು ಕಟ್ಟಲಾಗಿದೆ.

ಈ ಶಾಲೆಯಲ್ಲಿ ಸುಮಾರು 390 ಮಕ್ಕಳಿದ್ದಾರೆ. ತೆಲುಗು, ಇಂಗ್ಲಿಷ್​, ಉರ್ದು ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ ಉರ್ದು ಮಾಧ್ಯಮದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠಗಳು ನಡೆಯುತ್ತಿದ್ದು, ಗಣಿತ ಶಿಕ್ಷಕ ಎಸ್​.ಅಬ್ದುಲ್​ ರಕ್ವೀಬ್​ ಅವರು ಈ ಐಡಿಯಾ ಕಂಡುಕೊಂಡಿದ್ದಾರೆ.

ರಕ್ವೀಬ್​ ಮತ್ತು ಇನ್ನೋರ್ವ ಶಿಕ್ಷಕಿ ನೂರುಲ್ಲಾ ತಮ್ಮ ಮನೆಯಲ್ಲಿದ್ದ ಹಳೇ ಸೀರೆಗಳನ್ನು ತಂದು ಹೀಗೆ ಕಟ್ಟಿದ್ದಾರೆ. ಇವರ ಈ ಐಡಿಯಾದಿಂದ ಮಕ್ಕಳೂ ಸಹ ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಪಾಲಕರಲ್ಲೂ ಧೈರ್ಯ ಮೂಡಿದ್ದು ರಕ್ವೀಬ್​ರನ್ನು ಹೊಗಳಿದ್ದಾರೆ. ಉಳಿದ ಶಿಕ್ಷಕರೂ ಸಹ ಈ ಕ್ರಮವನ್ನು ಸ್ವಾಗತಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net