ಮತ್ತಾವುಗೆ ಸೇತುವೆ ಮತ್ಯಾವಾಗ? ಜೀವಪಣಕ್ಕಿಟ್ಟು ಸಂಚಾರ ; 40 ವರ್ಷದ ಬೇಡಿಕೆಗಿಲ್ಲ ಸ್ಪಂದನೆ

matthavu
ಅಪಾಯಕಾರಿ ಮತ್ತಾವು ಹೊಳೆ
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಮತ್ತಾವು ಭಾಗದ ಜನರ 40 ವರ್ಷಗಳ ಸೇತುವೆ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಮಳೆಗಾಲದಲ್ಲಿ 6 ತಿಂಗಳು ಸಂಪರ್ಕಕ್ಕೆ ಕೃತಕ ಕಾಲುಸಂಕವೇ ಆಧಾರ. ಇದರಲ್ಲಿ ಸಂಚರಿಸುವುದೇ ಸವಾಲು. ಸ್ವಲ್ಪ ಎಡವಿದರೂ ಹೊಳೆ ಪಾಲಾಗುವ ಭೀತಿ. ಶಾಲೆ, ಅಗತ್ಯ ವಸ್ತುಗಳ ಸಾಗಾಟ, ಆರೋಗ್ಯ ಹದಗೆಟ್ಟರೆ, ಕೃಷಿ ಉತ್ಪನ್ನ ಮಾರಾಟಕ್ಕೆ ಮಳೆಗಾಲದಲ್ಲಿ ಅಸಾಧ್ಯವಾಗಿದ್ದು, ಸೇತುವೆ ನಿರ್ಮಾಣವಾಗಬೇಕೆಂದು ಒತ್ತಾಯಿಸಿದರೂ ಫಲ ಮಾತ್ರ ಶೂನ್ಯ.

ಪ್ರಸ್ತುತ ಮತ್ತಾವಿನಲ್ಲಿ 11 ಮಲೆಕುಡಿಯ ಕುಟುಂಬಗಳ 40 ಮಂದಿ ವಾಸಿಸುತ್ತಿದ್ದಾರೆ. ಬಹುತೇಕರು ಕೂಲಿ ಕಾರ್ಮಿಕರು. ಕಾರ್ಕಳ, ಹೆಬ್ರಿ ಸಂಪರ್ಕಿಸಬೇಕಾದರೆ ಮತ್ತಾವು ಹೊಳೆ ದಾಟುವುದು ಅನಿವಾರ್ಯ. ಮಳೆಗಾಲದಲ್ಲಿ ಸಂಪರ್ಕಕ್ಕಾಗಿ ಸ್ಥಳೀಯರೇ ತಾತ್ಕಾಲಿಕ ಕಾಲು ಸಂಕ ನಿರ್ಮಿಸುತ್ತಾರೆ. ಕೆಲವೊಮ್ಮೆ ತೀವ್ರ ಮಳೆಗೆ ಈ ಸಂಕ ಕೊಚ್ಚಿ ಹೋಗುತ್ತದೆ.

ಆರೋಗ್ಯ ಹದಗೆಟ್ಟರೆ ದೇವರೇ ಗತಿ

ಆರೋಗ್ಯ ಹದಗೆಟ್ಟರೆ ಇಲ್ಲಿನ ಜನರನ್ನು ದೇವರೇ ಕಾಪಾಡಬೇಕು. ರೋಗಿಗಳನ್ನು ಹೊತ್ತುಕೊಂಡೇ ಹೋಗಬೇಕು. ಗರ್ಭಿಣಿಯರು ಹೆರಿಗೆಗೆ ನಿಗದಿಪಡಿಸಿದ ದಿನಕ್ಕಿಂತ ಮೊದಲೇ ಹೋಗಿ ಆಸ್ಪತ್ರೆ ಸೇರುತ್ತಾರೆ.

ವಾಹನ ಕಳವಿನ ಭೀತಿ

ಮೊದಲೆಲ್ಲ ಅಲ್ಲಲ್ಲಿ ಟೆಂಟ್ ಹಾಕಿ ವಾಹನ ನಿಲ್ಲಿಸಲಾಗುತ್ತಿತ್ತು. ಆದರೆ ಈಗ ಅರಣ್ಯ ಇಲಾಖೆಯಿಂದ ತಡೆ ಇರುವುದರಿಂದ ಎಲ್ಲೆಂದರಲ್ಲಿ ವಾಹನ ಬೇಕಾಬಿಟ್ಟಿಯಾಗಿ ನಿಲ್ಲಿಸಿ ಬರಲಾಗುತ್ತದೆ. ಇದರಿಂದ ಜನರಲ್ಲಿ ವಾಹನ ಕಳವಾಗುವ ಭೀತಿ ಎದುರಾಗಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ

ವಿದ್ಯಾರ್ಥಿಗಳು ಶಾಲೆಗೆ ದೂರದ ಹೆಬ್ರಿ ಅಥವಾ ಕಾರ್ಕಳ ಹೋಗಬೇಕು. ಮಕ್ಕಳನ್ನು ಕಾಲುಸಂಕದ ಮೇಲೆ ಕಳುಹಿಸಲು ಹೆದರಿ ದೂರದ ಹಾಸ್ಟೆಲಿಗೆ ಸೇರಿಸಿದ್ದಾರೆ. ವಿಪರೀತ ಮಳೆಯಾದಾಗ ಯಾವಾಗ ಬೇಕಾದರೂ ಕಾಲುಸಂಕ ತುಂಡಾಗಬಹುದು. ಬೆಳಗ್ಗೆ ಸಂಜೆ ಪಾಲಕರು ಮಕ್ಕಳೊಂದಿಗಿರಬೇಕಾದ ಅನಿವಾರ್ಯತೆಯಿಂದ ಹಾಸ್ಟೆಲ್ ವರದಾನವಾಗಿದೆ.

ಲೆಕ್ಕಕ್ಕಿಲ್ಲದ ಅರಣ್ಯ ಹಕ್ಕು ಪತ್ರ

ಈ ಭಾಗದ ಜನರಿಗೆ ಕಾಡುತ್ಪತಿಯೇ ಮೂಲಾಧಾರ. ಕೃಷಿಗೆ ಕಾಡೆಮ್ಮೆ, ಜಿಂಕೆ, ಹಂದಿ ಹಾಗೂ ನವಿಲುಗಳ ಕಾಟವಿದೆ. ಕಾಡುತ್ಪತ್ತಿಯನ್ನು ಮುಖ್ಯ ಕಸುಬಾಗಿ ಮಾಡಿಕೊಂಡಿದ್ದಾರೆ. ಅರಣ್ಯ ಹಕ್ಕುಪತ್ರದಿಂದ ಯಾವುದೇ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗುವುದಿಲ್ಲ. ಅಡಮಾನ, ವರ್ಗಾಯಿಸಲು ಸಾಧ್ಯವಿಲ್ಲದಿರುವುದರಿಂದ ಅನೇಕ ಸಮಸ್ಯೆ ಇದೆ. ಕನಿಷ್ಠ ಒಂದು ಟಾರ್ಪಾಲ್ ಪಡೆಯಲಾಗುವುದಿಲ್ಲ.

ನಕ್ಸಲ್ ಬಾಂಬ್ ದಾಳಿಗೆ 19 ವರ್ಷ

ಮತ್ತಾವು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಗೆ ನಕ್ಸಲರು ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದರು. 2005ರ ಜುಲೈ 28ರಂದು ಮತ್ತಾವು ಸಮೀಪದಲ್ಲಿ ನಕ್ಸಲರು ನೆಲಬಾಂಬ್ ಸ್ಫೋಟಿಸಿದಾಗ ಹಲವು ಪೊಲೀಸರು ಗಂಭೀರ ಗಾಯಗೊಂಡಿದ್ದರು. ಈ ಘಟನೆ ದೇಶದ ಗಮನ ಸೆಳೆದಿತ್ತು. ಇಂದಿಗೆ (ಜುಲೈ 28) ನಕ್ಸಲ್ ದಾಳಿ ನಡೆದು 19 ವರ್ಷ ಕಳೆದರೂ ಮೂಲಸೌಕರ್ಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿ ಉಳಿದಿದೆ.

ಸಂಬಂಧ ಕುದುರಿಸುವುದೇ ಸವಾಲು

ಸಮರ್ಪಕ ಸಂಪರ್ಕ ಸೌಲಭ್ಯ ಇಲ್ಲದ ಕಾರಣ ಇಲ್ಲಿನ ಯುವಕ - ಯುವತಿಯರಿಗೆ ವೈವಾಹಿಕ ಸಂಬಂಧ ಬೆಸೆಯುವುದು ಕಷ್ಟವಾಗಿದೆ. ಇಷ್ಟು ದೂರ ನಡೆಯುವುದು ಹೇಗೆ ಎಂಬುದು ವಿವಾಹ ಸಂಬಂಧ ಬಂದಾಗ ಎದುರಾಗುವ ಮೊದಲ ಪ್ರಶ್ನೆ.

ಕಬ್ಬಿನಾಲೆ ಮತ್ತಾವು ಸೇತುವೆ ನಿರ್ಮಾಣದ ಬೇಡಿಕೆ ಹಲವು ದಶಕಗಳಿಂದ ಬೇಡಿಕೆ ಇದೆ. ನಾನಾ ಆಯಾಮಗಳಲ್ಲಿ ಸಂಘಟನೆ ಮುಖಾಂತರ ಹಕ್ಕೋತ್ತಾಯ ಮಂಡಿಸಿದರೂ ಸರ್ಕಾರ ಸ್ಪಂದಿಸದೆ ಇರುವುದು ನೋವಿನ ಸಂಗತಿ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು.-ಗಂಗಾಧರ ಗೌಡ, ಅಧ್ಯಕ್ಷ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘ

ಸ್ಟೇಟ್ ಬೋರ್ಡ್ ಫಾರ್ ವೈಲ್ಡ್‌ಲೈಫ್ ವತಿಯಿಂದ ಸೇತುವೆ ನಿರ್ಮಾಣಕ್ಕೆ ಮನ್ನಣೆ ಸಿಕ್ಕಿದೆ. ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ ವತಿಯಿಂದ ಸೇತುವೆ ನಿರ್ಮಾಣ ಮಾಡಲು ಅನುಮೋದನೆ ಸಿಗಬೇಕಾಗಿದೆ. ಅವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ಉತ್ತರ ನೀಡಿ ಶೀಘ್ರದಲ್ಲಿ ನಮ್ಮ ಕೆಲಸ ಮುಗಿಸುತ್ತೇವೆ.-ಶಿವನಂದ ಬಾಬು, ಡಿಸಿಎಫ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿಭಾಗ

ನಾನು ಕೆಲವು ಸಮಯಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಊರಿನ ಜನರು ಸೇತುವೆ ಮಾಡಿಕೊಡಲು ನಿವೇದನೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯೊಂದಿಗೆ ಸಮಗ್ರವಾಗಿ ಇದರ ಬಗ್ಗೆ ಚರ್ಚೆ ನಡೆಸಿ ಏನಾಗಿದೆ ಎಂಬುದು ತಿಳಿದುಕೊಳ್ಳುತ್ತೇನೆ.-ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net