ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಹೋದ ದಂಪತಿಗೆ ಸಿಕ್ಕಿದ್ದು ಮರಣ ಪ್ರಮಾಣ ಪತ್ರ! Birth certificate

Birth certificate
Published on

Birth certificate : ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನಾಲ್ಕು ವರ್ಷದ ಬಾಲಕಿಗೆ ಮರಣ ಪ್ರಮಾಣಪತ್ರ ನೀಡಿದ ತಾಲೂಕ ಕಚೇರಿ ನೌಕರರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.

ಉಪೇಂದರ್ ಮತ್ತು ಮಮತಾ ದಂಪತಿ ಕುಸುಮಂಚಿ ಮಂಡಲದ ಗಟ್ಟುಸಿಂಗಾರಂ ಗ್ರಾಮದ ನಿವಾಸಿಗಳು. ಕಳೆದ ವರ್ಷ ಡಿಸೆಂಬರ್ 17 ರಂದು ತಮ್ಮ ನಾಲ್ಕು ವರ್ಷದ ಮಗಳಿಗೆ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ, ತಾಲೂಕು ಕಚೇರಿ ನೌಕರರು ವಿವಿಧ ನೆಪಗಳನ್ನು ಹೇಳುತ್ತಾ ದಿನಗಳನ್ನು ದೂಡಿದರು. ಕೊನೆಗೆ ಈ ತಿಂಗಳ 4 ರಂದು ಪ್ರಮಾಣಪತ್ರವನ್ನು ನೀಡಿದ್ದಾರೆ.

ಆಘಾತಕಾರಿ ಸಂಗತಿ ಏನೆಂದರೆ, ತಾಲೂಕು ನೌಕರರು ನೀಡಿದ್ದು ಮರಣ ಪ್ರಮಾಣಪತ್ರವಾಗಿತ್ತು. ಅದನ್ನು ನೋಡಿ ಮಗುವಿನ ಪಾಲಕರು ಆಕ್ರೋಶ ವ್ಯಕ್ತಪಡಿಸಿದಾಗ, ಉದ್ಯೋಗಿ ಅದನ್ನು ಹಿಂದಕ್ಕೆ ತೆಗೆದುಕೊಂಡು ಹರಿದು ಹಾಕಿದರು. ಬಳಿಕ ಜನನ ಪ್ರಮಾಣಪತ್ರವನ್ನು ನೀಡಿದರು. ಆದರೆ, ಅದರಲ್ಲಿ ಸಿಕ್ಕಾಪಟ್ಟೆ ತಪ್ಪುಗಳಿದ್ದವು. ಸರಿಯಾದ ವಿವರಗಳಿಲ್ಲದ ಕಾರಣ ದಂಪತಿ ಮತ್ತೆ ಪ್ರಶ್ನಿಸಿದರು.

ಈ ವೇಳೆ ತಾಲೂಕು ಕಚೇರಿ ನೌಕರ ಸಮಾಧಾನವಾಗಿ ಉತ್ತರಿಸಿದೇ ಇದೇ ಅಸಲಿ ಪ್ರಮಾಣಪತ್ರ, ನೀವು ಮತ್ತೆ ಕೇಳುತ್ತೀರಾ? ಎಂದು ಗದರಿದ್ದಾರೆ. ಯಾವಾಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿ, ಭಾರಿ ಟೀಕೆಗಳು ವ್ಯಕ್ತವಾಯಿತೋ, ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ರವಿಕುಮಾರ್, ತನಿಖೆ ನಡೆಸಲಾಗುವುದು, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಸರಿಯಾದ ದಾಖಲೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರ ಇಷ್ಟೊಂದು ಬೇಜವಾಬ್ದಾರಿತನ ಒಳ್ಳೆಯದಲ್ಲ ಎಂಬ ಜನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net