ಭಾರತದ ನೆಲದಲ್ಲೂ ಯಶಸ್ಸು ಕಾಣುತ್ತ ಆಂಗ್ಲರ ಬಜ್​ಬಾಲ್​? ಏನಿದು ಬಜ್​ಬಾಲ್​ ತಂತ್ರಗಾರಿಕೆ?

bazball web
Published on

ಹೈದರಾಬಾದ್: ಆತಿಥೇಯ ಭಾರತ ಮತ್ತು ಇಂಗ್ಲೆಂಡ್​ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿಗೆ ವೇದಿಕೆ ಸಜ್ಜಾಗಿದ್ದು, ಗುರುವಾರದಿಂದ ಹೈದರಾಬಾದ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಸಮಯದಲ್ಲಿ 'ಬಜ್​ಬಾಲ್​' ಎಂಬ ಪದ ವ್ಯಾಪಕವಾಗಿ ಕೇಳಿಬರುತ್ತಿದೆ. ಹಾಗಾದರೆ ಏನಿದು 'ಬಜ್​ಬಾಲ್​' ಎಂಬ ಮಾಹಿತಿ ಇಲ್ಲಿದೆ.

ಇಂಗ್ಲೆಂಡ್​ ಟೆಸ್ಟ್​ ತಂಡಕ್ಕೆ 2022ರ ಮೇನಲ್ಲಿ ನ್ಯೂಜಿಲೆಂಡ್​ ಮಾಜಿ ನಾಯಕ ಬ್ರೆಂಡನ್​ ಮೆಕ್ಕಲಂ ಕೋಚ್​ ಮತ್ತು ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ನಾಯಕರಾಗಿ ನೇಮಕಗೊಂಡ ಬಳಿಕ ಆಕ್ರಮಣಕಾರಿ ಆಟವಾಡುತ್ತ ಬಂದಿದೆ. ವಿಕೆಟ್​ ಬೀಳುತ್ತಿದ್ದರೂ ತ್ವರಿತಗತಿಯಲ್ಲೇ ರನ್​ ಗಳಿಸುವುದು, ಟೆಸ್ಟ್​ನಲ್ಲೂ ಏಕದಿನದಂತೆ ಪ್ರತಿ ಓವರ್​ಗೆ 6-7ರ ಸರಾಸರಿಯಲ್ಲಿ ರನ್​ ಕಲೆಹಾಕುವುದು, ಸುರಕ್ಷಿತ ಸ್ಥಿತಿಯಲ್ಲಿರದಿದ್ದರೂ, ಇನಿಂಗ್ಸ್​ ಡಿಕ್ಲೇರ್​ ಘೋಷಿಸಿ ಪಂದ್ಯ ಗೆಲ್ಲುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಈ ಕಾರ್ಯತಂತ್ರದ ಪ್ರಮುಖಾಂಶ.

ಮೆಕ್ಕಲಂ 'ಬಜ್​' ಎಂಬ ನಿಕ್​ನೇಮ್​ ಹೊಂದಿರುವ ಕಾರಣ ಬ್ರಿಟಿಷ್​ ಮಾಧ್ಯಮಗಳು ಇದಕ್ಕೆ 'ಬಜ್​ಬಾಲ್​' ಎಂಬ ಹೆಸರು ನೀಡಿವೆ. ಈ ತಂತ್ರಗಾರಿಕೆ ಈಗಾಗಲೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿ ಎಬ್ಬಿಸಿದೆ. ಇಂಗ್ಲೆಂಡ್​ ಕಳೆದ 18 ಟೆಸ್ಟ್​ಗಳಲ್ಲಿ 13ರಲ್ಲಿ ಗೆದ್ದಿರುವುದು ಈ ಕಾರ್ಯತಂತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ. ಹೀಗಾಗಿ ಭಾರತದಲ್ಲೂ ಇದು ಯಶಸ್ಸು ಕಾಣುವುದೇ ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿದೆ ಮತ್ತು ಇದು ಸರಣಿ ಬಗೆಗಿನ ಕಾತರವನ್ನೂ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net