ವಿಜಯಪುರ: ಗ್ರಾಮೀಣರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸುತ್ತಿರುವ ಮಹತ್ವಾಕಾಂಕ್ಷಿ ಯೋಜನೆಗಳೆಲ್ಲವೂ ಮಣ್ಣು ಪಾಲಾಗುತ್ತಿವೆ ಎಂಬುದಕ್ಕೆ ಹಂದಿಗನೂರ ಗ್ರಾಮ ಪಂಚಾಯಿತಿಯೇ ಸಾಕ್ಷಿ !
ಹೌದು, ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮ ಅಕ್ಷರಶಃ ಹಂದಿಗಳ ತಾಣವಾಗಿ ಕಂಗೊಳಿಸುತ್ತಿದೆ. ಎಲ್ಲೆಂದರಲ್ಲಿ ಹರಿಯುವ ಚರಂಡಿ ನೀರು, ಕಲುಷಿತ ವಾತಾವರಣ, ವಿಲೇವಾರಿಯಾಗದ ತ್ಯಾಜ್ಯ, ಗಬ್ಬೆದ್ದು ನಾರುವ ಘನ ತ್ಯಾಜ್ಯ, ಶುದ್ಧ ಕುಡಿಯುವ ನೀರಿನ ಅಭಾವ ಹೀಗೆ ಮುಂತಾದ ಸಮಸ್ಯೆಗಳಿಂದಾಗ ಗ್ರಾಮ ನರಕ ಸದೃಶವಾಗಿ ಗೋಚರಿಸುತ್ತಿದೆ. ಇನ್ನು ಕಳಪೆ ಗುಣಮಟ್ಟದಿಂದ ಕೂಡಿರುವ ಕಾಮಗಾರಿಗಳು ಲಕ್ಷಾಂತರ ರೂಪಾಯಿ ಹಗರಣ ನಡೆದಿರುವ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೈಗೊಳ್ಳಲಾದ ನೀರು ಶುದ್ಧೀಕರಿಸುವ ಯೋಜನೆ ಅಕ್ಷರಶಃ ಹಳ್ಳ ಹಿಡಿದಿದ್ದು, ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿ ಮಾತ್ರ ಸಮರ್ಥನೆ ಮಾಡಿಕೊಳ್ಳುವ ರೀತಿ ನೋಡಿದರೆ ಯೋಜನೆಯ ಲಾಭ ಗ್ರಾಮಸ್ಥರಿಗಿಂತ ಹೆಚ್ಚಾಗಿ ತಮಗೇ ಸಿಕ್ಕಂತೆ ಕಾಣುತ್ತಿದೆ.
ಏನಿದು ಯೋಜನೆ?
ಕಲುಷಿತ ನೀರು ಶುದ್ಧೀಕರಿಸಿ ಪೂರೈಸುವ ಉದ್ಧೇಶದಿಂದ ಸ್ವಚ್ಛ ಭಾರತ ಯೋಜನೆ ಎಲ್‌ಡಬ್ಲೂೃಎಂ (ಲಿಕ್ವಿಡ್ ವೇಸ್ಟ್ ಮ್ಯಾನೇಜ್‌ಮೆಂಟ್) ಅಡಿ ನೀರು ಶುದ್ಧೀಕರಿಸುವ ಕಾಮಗಾರಿ ಕೈಗೊಳ್ಳಲಾಗಿದೆ. 2023-24ನೇ ಸಾಲಿನ ಒಟ್ಟು 9 ಲಕ್ಷ ರೂಪಾಯಿ ಅನುದಾನದಡಿ ಕೈಗೊಂಡ ಈ ಕಾಮಗಾರಿ ಗುರುತಿಸುವುದೇ ಕಷ್ಟಸಾಧ್ಯ. ಗ್ರಾಮದ ಹೊರವಲಯದಲ್ಲಿ ಕೈಗೊಂಡ ಈ ಕಾಮಗಾರಿಯ ಸಿಮೆಂಟ್ ಕಳಚಿ ಕೇವಲ ಕಲ್ಲುಗಳು ಗೋಚರಿಸುತ್ತಿವೆ. ಸದ್ಯ ನಿರುಪಯುಕ್ತವಾಗಿರುವ ಈ ಕಾಮಗಾರಿ ಕೈಗೊಂಡಿದ್ದಾದರೂ ಏಕೆ? ಎಂಬುದೇ ಗ್ರಾಮಸ್ಥರ ಪಾಲಿನ ನಿಗೂಢ ಸಂಗತಿಯಾಗಿದೆ.
ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಬಿಲ್ ಸಹ ಪಾವತಿಸಲಾಗಿದೆ. ಆದರೆ, ಕಾಮಗಾರಿ ಉದ್ಧೇಶ ಮಾತ್ರ ಈಡೇರಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಪಿಡಿಒ ವೀರುಪಾಕ್ಷಿ ನಾಡಗೌಡರು ಮಾತ್ರ ಎಲ್ಲವೂ ಸರಿಯಾಗಿದೆ ಎನ್ನುತ್ತಾರೆ. ಆದರೆ, ಈ ಪಿಡಿಒ ಕೂಡ ಸಮರ್ಪಕವಾಗಿ ಗ್ರಾಮಕ್ಕೆ ಬರುವುದಿಲ್ಲ, ಸಾರ್ವಜನಿಕರ ಸಂಪರ್ಕಕ್ಕೆ ಸಿಗುವುದಿಲ್ಲವೆಂಬ ಆರೋಪ ಸ್ಥಳೀಯ ನಿವಾಸಿಗಳದ್ದು.
ಸಿಇಒಗೂ ಮನವಿ
ಕಾಮಗಾರಿ ಕಳಪೆಯಾಗಿರುವ ಕುರಿತು ಗ್ರಾಮದ ಸಾಮಾಜಿಕ ಹೋರಾಟಗಾರ ಸಿದ್ದಲಿಂಗ ಕೆ ಎಂಬುವವರು ಈಗಾಗಲೇ ಸಿಇಒ ರಿಷಿ ಆನಂದ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ‘ಈ ಯೋಜನೆ ಬಗ್ಗೆ ಗ್ರಾಪಂನ ಯಾರೊಬ್ಬರಿಗೂ ಗೊತ್ತಿಲ್ಲದ ಹಾಗೆ ಪಿಡಿಒ ಹಾಗೂ ಇತರೆ ವ್ಯಕ್ತಿಗಳು ಸುಮಾರು 11,50,000 ರೂ. ಬಿಲ್ ಮಂಜೂರಿಸಿದ್ದಾರೆ. ಸಂಪೂರ್ಣ ಕಾಮಗಾರಿ ಮುಗಿಸದೇ ಟೆಂಡರ್ ಕರೆಯದೇ ಕೊಟೇಶನ್ ಇಲ್ಲದೇ ಡಿಪಿಆರ್‌ಗೆ ಅನುಮೋದನೆ ನೀಡಲಾಗಿದೆ. ಇಂಜನಿಯರ್ ‘ಎಂ.ಬಿ ಬುಕ್’ ಸಹ ಬರೆದಿಲ್ಲ. ಇದರಲ್ಲಿ ಜಿಲ್ಲಾ ಪಂಚಾಯ್ತಿಯವರು ಸಹ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂದಿದ್ದಾರೆ.
ಗ್ರಾಮದಲ್ಲಿ ಹರಿಯುತ್ತಿರುವ ಕೊಳಚೆ ನೀರು ಶುದ್ಧೀಕರಣ ಮಾಡಿ ದನಕರಗಳು ಮತ್ತು ಪ್ರಾಣಿ ಪಕ್ಷಿಗಳು ಕುಡಿಯಲು ಉಪಯೋಗವಾಗಲೆಂದು ಚರಂಡಿ ನೀರು ಶುದ್ಧೀಕರಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ ಯೋಜನೆಯ ಉದ್ದೇಶಗಳನ್ನು ಗಾಳಿಗೆ ತೂರಿ ತಮ್ಮ ಮನಸೋ ಇಚ್ಛೆ ಬಂದಂತೆ ಕಾಮಗಾರಿ ನಿರ್ವಹಿಸಿ ಅಧಿಕಾರಿಗಳು ಹಣ ದುರುಪಯೋಗ ಪಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪಿಡಿಒ ಹೇಳುವುದೇನು?
ಕಾಮಗಾರಿ ಕಳಪೆ ಗುಣಮಟ್ಟದ್ದಿಂದ ಕೂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದರೂ ಪಿಡಿಒ ವಿರೂಪಾಕ್ಷಿ ಎಲ್ಲವೂ ಸರಿಯಾಗಿದೆ ಎನ್ನುತ್ತಾರೆ. ಈ ಬಗ್ಗೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಂಡಿದ್ದು ಬಿಲ್ ಪಾವತಿಸಲಾಗಿದೆ. ಗ್ರಾಮಸ್ಥರು ಇನ್ನೂ ಕಾಮಗಾರಿ ಆಗಬೇಕು ಅಂತಿದ್ದಾರೆ. ಈ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳು ಕೂಡ ಬರುತ್ತಿದ್ದಾರೆ ಎಂದರು.
ಆದರೆ, ಗ್ರಾಮಸ್ಥರು ಮಾತ್ರ ಇಂಥ ಅನೇಕ ಯೋಜನೆಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಮಗ್ರ ತನಿಖೆಯಾಗಬೇಕು. ಲೋಕಾಯುಕ್ತದಂಥ ತನಿಖಾ ಸಂಸ್ಥೆಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.