ವಿರುಷ್ಕಾ ದಂಪತಿಯ ಪುತ್ರ ಅಕಾಯ್​ ಹೆಸರಿನ ಅರ್ಥವೇನು? RCB ಕುಟುಂಬದ ಕಿರಿಯ ಸದಸ್ಯನಿಗೆ ಸ್ವಾಗತ

Akaay
Published on

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರು ಫೆ.15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ನಿನ್ನೆ (ಫೆ.20) ಅಧಿಕೃತವಾಗಿ ಕೊಹ್ಲಿ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ. ಇದೀಗ ವಿರುಷ್ಕಾ ದಂಪತಿ ಕುಟುಂಬದಲ್ಲಿ ಸಂತಸ ನೂರ್ಮಡಿಯಾಗಿದೆ.

ಫೆಬ್ರವರಿ 15ರಂದು ನಾವು ನಮ್ಮ ಮನೆಗೆ ವಮಿಕಾಳ ಕಿರಿಯ ಸಹೋದರ ಅಕಾಯ್​ನನ್ನು ಸ್ವಾಗತಿಸಿದ್ದೇವೆಂದು ಎಲ್ಲರಿಗೂ ತಿಳಿಸಲು ಸಂತಸವಾಗಿದೆ. ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ. ಇದೇ ಸಂದರ್ಭದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಿಮ್ಮಲ್ಲಿ ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆಗಳು. ವಿರಾಟ್​ ಮತ್ತು ಅನುಷ್ಕಾ ಎಂದು ದಂಪತಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಗಂಡು ಮಗು ಹುಟ್ಟಿರುವ ಬಗ್ಗೆ ಘೋಷಣೆ ಮಾಡಿದಾಗಿನಿಂದ 'ಅಕಾಯ್​' ಎಂಬ ವಿಶೇಷ ಹೆಸರಿನ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಅಕಾಯ್​ ಹೆಸರಲ್ಲಿ ಕಾಯ್​ ಎಂಬ ಪದವನ್ನು ಹಿಂದಿಯಿಂದ ಪಡೆಯಲಾಗಿದೆ. ಇದರ ಅರ್ಥ ದೇಹ. ಅಕಾಯ್ ಎಂದರೆ ಅವನ ಭೌತಿಕ ದೇಹಕ್ಕಿಂತಲೂ ಹೆಚ್ಚಿನವನು ಎಂಬರ್ಥವಿದೆ. ಅಕಾಯ್​ ಎಂಬುದು ಟರ್ಕಿಯ ಪದವಾಗಿದ್ದು, ಅದರರ್ಥ ಹೊಳೆಯುವ ಚಂದ್ರ ಎಂದರ್ಥ.

ಮಗನಿಗೆ ಹೆಸರಿಡುವ ಮೊದಲು ಅವರು ಯೋಚಿಸಿದ ಪದದ ಮೂಲವನ್ನು ವಿರುಷ್ಕಾ ದಂಪತಿ ಇನ್ನೂ ಖಚಿತಪಡಿಸಿಲ್ಲ. ಅಕಾಯ್​ ಈಗಲೇ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಖ್ಯಾತಿ ಗಳಿಸಿದ್ದಾರೆ. ವಿರಾಟ್​ ಕೊಹ್ಲಿ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​, ಒಂದೇ ಗಂಟೆಯಲ್ಲಿ 5 ಮಿಲಿಯನ್​ಗೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ.

ಮಗು ಜನನದ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ಮತ್ತು ಕ್ರಿಕೆಟ್ ಲೋಕದ ಅಭಿಮಾನಿಗಳು ಕಾಮೆಂಟ್​ ವಿಭಾಗದಲ್ಲಿ ಶುಭಾ ಹಾರೈಸುತ್ತಿದ್ದಾರೆ. RCB ಕುಟುಂಬದ ಕಿರಿಯ ಸದಸ್ಯ ಅಕಾಯ್‌ಗೆ ದೊಡ್ಡ ಸ್ವಾಗತ. ಇದೊಂದು ಸಂತಸದ ಸುದ್ದಿ ಮತ್ತು ಭಾರತ ಇಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಲಿದೆ ಎಂದು ಕೊಹ್ಲಿ ನೇತೃತ್ವದ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಕೋರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net