More

    ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…

    ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಪ್ರಾಥಮಿಕ ಗೃಹೋಪಯೋಗಿ ವಸ್ತುಗಳನ್ನು ಬಳಸಿ ನಿರ್ಮಿಸಿದ ಕಚ್ಚಾ ಬಾಂಬ್‌ಗಳು ಬಳಕೆಯಾಗುವುದನ್ನು ನೋಡಿದ್ದೇವೆ. ಇತ್ತೀಚೆಗೆ ಒಂದು ಸಲ ಬಾಂಬ್ ಆಗಿ ಪರಿವರ್ತಿಸಲಾದ ಎಲ್‌ಪಿಜಿ ಸಿಲಿಂಡರ್ ಒಂದು ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟಗೊಂಡಿತು. ಆ ಬಾಂಬ್ ತಯಾರಕನೂ ಸೇರಿದಂತೆ, ಕಾರಿನಲ್ಲಿದ್ದ ಪ್ರಯಾಣಿಕರು ಆ ಸ್ಫೋಟದಲ್ಲಿ ಮೃತಪಟ್ಟಿದ್ದರು. ಈ ಬಾರಿ, ಅದೇ ರೀತಿಯಲ್ಲಿ ನಡೆದ ಸ್ಫೋಟ ಒಂದರಲ್ಲಿ ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಚಾಲಕ ಮತ್ತು ಪ್ರಯಾಣಿಕ ತೀವ್ರ ಪ್ರಮಾಣದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ಮಾರ್ಪಡಿಸಲಾದ ಪ್ರೆಷರ್ ಕುಕರ್ ಒಳಗೆ ಸ್ಫೋಟಕ ಸಾಮಗ್ರಿಗಳನ್ನು ಇಟ್ಟುಕೊಂಡು ತೆರಳುತ್ತಿದ್ದ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ರಿಕ್ಷಾ ಪ್ರಯಾಣಿಕ ಮಂಗಳೂರು ರೈಲ್ವೇ ನಿಲ್ದಾಣದಿಂದ ನಾಗುರಿಗೆ ತೆರಳುತ್ತಿದ್ದ. ಪ್ರೆಷರ್ ಕುಕರ್ ಬಾಂಬನ್ನು ರಿಕ್ಷಾದಲ್ಲಿ ಒಯ್ಯುತ್ತಿದ್ದ ಆ ವ್ಯಕ್ತಿಯ ಬಳಿ ನಕಲಿ ಆಧಾರ್ ಕಾರ್ಡ್ ಸಹ ಇತ್ತು ಎನ್ನಲಾಗುತ್ತದೆ.

    ಪೊಲೀಸರು ಆ ದುಷ್ಕರ್ಮಿಯನ್ನು ಶಾರೀಕ್ ಎಂದು ಗುರುತಿಸಿದ್ದಾರೆ. ಆ ವ್ಯಕ್ತಿ ಕೆಲ ಕಾಲ ಮೈಸೂರಿನಲ್ಲಿ ಇದ್ದ ಎನ್ನಲಾಗಿದ್ದು, ಲೋಕನಾಯಕ ನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ ಎನ್ನಲಾಗಿದೆ. ಆ ಮನೆಯಲ್ಲಿ ಪೊಲೀಸರಿಗೆ ಬಾಂಬ್ ನಿರ್ಮಾಣಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ಸರ್ಕ್ಯುಟ್ ಬೋರ್ಡ್, ಸಣ್ಣ ಬೋಲ್ಟ್, ಬ್ಯಾಟರಿ, ಮರದ ಹುಡಿ, ಅಲ್ಯುಮಿನಿಯಮ್, ಮಲ್ಟಿ ಮೀಟರ್, ವೈರ್‌ಗಳು, ಮಿಕ್ಸರ್ ಜಾರ್‌ಗಳು, ಪ್ರೆಷರ್ ಕುಕರ್ ಹಾಗೂ ಇತ್ಯಾದಿ ವಸ್ತುಗಳು ದೊರಕಿದ್ದವು.

    ಇನ್ನೋರ್ವ ಶಂಕಿತ, ಸೈಯದ್ ಅಹ್ಮದ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದ್ದು, ಆತ ಶಾರೀಕ್‌ಗೆ ಹತ್ತಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ನೀಡಿದ್ದ ಎನ್ನಲಾಗಿದೆ. ಮಂಗಳೂರಿನಲ್ಲಿ ನಡೆದ ಈ ಬಾಂಬ್ ದಾಳಿಯ ಗುರಿ ಇತಿಹಾಸ ಪ್ರಸಿದ್ಧ ಕದ್ರಿ ದೇವಾಲಯ ಎನ್ನಲಾಗಿದೆ. ಈ ಕುರಿತಾಗಿ ಕದ್ರಿ ದೇವಾಲಯದ ಆಡಳಿತ ಮಂಡಳಿ ಪೊಲೀಸ್ ದೂರನ್ನೂ ದಾಖಲಿಸಿದೆ. ಇದರ ಮಧ್ಯೆ ಇದೀಗ ಆರೋಪಿ ಶಾರೀಕ್​​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದೆ.

    ಹೇಳಿಕೆಯಲ್ಲಿ ಎಡಿಜಿಪಿ ಅಲೋಕ್​ ಕುಮಾರ್​ಗೂ ಎಚ್ಚರಿಕೆ ನೀಡಿದ್ದು, ಶಾರೀಕ್​ ಬಂಧಿಸಿ ಖುಷಿಪಡುತ್ತಿದ್ದೀರಿ, ಇದು ಶಾಶ್ವತವಲ್ಲ. ನೀವು ನಿಮ್ಮ ಫಲವನ್ನು ಶೀಘ್ರದಲ್ಲೇ ಪಡೆಯುತ್ತೀರಿ. ನೀವು ನಮ್ಮ ದೃಷ್ಟಿಯಲ್ಲೇ ಇದ್ದೀರಿ, ನಿಮ್ಮನ್ನು ನಾವು ತಲುಪುತ್ತೇವೆ. ಆದರೆ ಯಾವಾಗ ಅನ್ನೋದು ಮುಖ್ಯವಲ್ಲ ಎಂದು ಐಆರ್​​ಸಿ ಎಡಿಜಿಪಿ ಅಲೋಕ್​ ಕುಮಾರ್​ಗೆ ಬೆದರಿಕೆ ಸಂದೇಶ ನೀಡಿದೆ.

    ಅಡುಗೆ ಮಾಡುವುದರಿಂದ ಮೂಲಭೂತ ಸಿದ್ಧಾಂತ ಬಡಿಸುವ ತನಕ

    ಪ್ರೆಷರ್ ಕುಕರ್ ಆಯುಧವಾದ ಹಾದಿ ಭಾರತದಲ್ಲಿ ಭಯೋತ್ಪಾದನೆಯ ಇತಿಹಾಸ ಅತ್ಯಂತ ದೀರ್ಘವೂ, ಯಾತನಾದಾಯಕವೂ ಆಗಿದೆ. ಮೂಲಭೂತ ಸಿದ್ಧಾಂತಗಳ ಹಂಚಿಕೆಯಲ್ಲಿ ಮುಗ್ಧರನ್ನು ತಲೆ ಕೆಡಿಸಿ, ತಪ್ಪು ದಾರಿಗೆ ಎಳೆಯಲಾಯಿತು. ಸುಲಭವಾಗಿ ಪುಸಲಾಯಿಸಬಹುದಾದ ಮಕ್ಕಳಿಗೆ ತಪ್ಪು ಹಾದಿಯಲ್ಲಿ ನಡೆಯುವ ಉಪದೇಶ ನೀಡಿ, ಯುವ ಜನತೆಗೆ ಪ್ರೆಷರ್ ಕುಕರ್ ಅಥವಾ ಎಲ್‌ಪಿಜಿ ಸಿಲಿಂಡರ್ ಬಾಂಬ್ ಆಗಿ ಪರಿವರ್ತಿಸುವಂತಹ ಪಾಠಗಳನ್ನು ಮಾಡುವ ಮೂಲಕ ಭಯೋತ್ಪಾದಕರು ಈಗಾಗಲೇ ಹಲವು ಜೀವಗಳನ್ನು ನಾಶ ಪಡಿಸಿದ್ದಾರೆ. ಆದರೆ ವಿಜ್ಞಾನ ಸದಾ ವಿಜ್ಞಾನವೇ ಆಗಿದ್ದು, ಅದು ನೈತಿಕತೆ ಮತ್ತು ಮೌಲ್ಯಗಳಿಗೆ ಒಳಗಾಗಿ ಬದಲಾಗುವುದಿಲ್ಲ.

    ಪ್ರೆಷರ್ ಕುಕರ್ ಪರಿಕಲ್ಪನೆ ಯಾವುದೇ ಒಂದು ವಸ್ತು ಬೇರೆ ಬೇರೆ ರೂಪದಲ್ಲಿ ಎಷ್ಟು ಗಾತ್ರವನ್ನು ಪಡೆದುಕೊಳ್ಳುತ್ತದೆ ಎಂಬ ಮೂಲಭೂತ ಕಲ್ಪನೆಯ ಆಧಾರದಲ್ಲಿ ನಡೆಯುತ್ತದೆ. ಘನ ರೂಪದ ಐಸ್ ಗಟ್ಟಿಯಾಗಿದ್ದು, ಒಂದು ನಿರ್ದಿಷ್ಟ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ ಅದಕ್ಕೆ ಬಿಸಿ ತಾಗಿದಂತೆ ಮಂಜುಗಡ್ಡೆ ಕರಗಿ ನೀರಾಗುತ್ತದೆ. ನೀರು ಹರಿದು ಹೋಗುವ ಕಾರಣ ಮಂಜುಗಡ್ಡೆಗಿಂತಲೂ ಹೆಚ್ಚು ಜಾಗ ಪಡೆದುಕೊಳ್ಳುತ್ತದೆ. ಒಂದು ವೇಳೆ ಅದು ಆವಿಯಾದರೆ ಆ ಉಗಿ ಇನ್ನಷ್ಡು ಜಾಗವನ್ನು ಆವರಿಸುತ್ತದೆ.

    ಒಂದು ಪ್ರೆಷರ್ ಕುಕರ್ ಒಳಗಡೆ ನೀರು ಕುದಿಯತೊಡಗಿದಾಗ ಉಂಟಾಗುವ ಆವಿಗೆ ಹೆಚ್ಚು ಜಾಗವನ್ನು ಆವರಿಸಬೇಕಾಗುತ್ತದೆ. ಆದರೆ ಪ್ರೆಷರ್ ಕುಕರ್ ಒಳಗಿನ ಜಾಗ ನಿರ್ದಿಷ್ಟವಾಗಿರುತ್ತದೆ. ಆದ್ದರಿಂದ ಕುಕರ್ ಒಳಭಾಗದ ಒತ್ತಡ ಹೆಚ್ಚಾಗುತ್ತದೆ. ಈ ಹಂತದಲ್ಲಿ, ಸಾಂಪ್ರದಾಯಿಕ ಪ್ರೆಷರ್ ಕುಕರ್ ಗಳಲ್ಲಿ ಒಂದು ವಿಷಲ್ ಅಳವಡಿಸಲಾಗಿರುತ್ತದೆ. ಕುಕರ್ ಒಳಗಿನ ಒತ್ತಡ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಳವಾದಾಗ ಆ ವಿಷಲ್ ಮೇಲಕ್ಕೆತ್ತಿ ಒಳಗಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಆ ವಿಷಲ್ ತೆಗೆದು ಹಾಕಿದರೆ, ಒಳಗಿನ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಕ್ರಮೇಣ ಪ್ರೆಷರ್ ಕುಕರ್ ಗೋಡೆಗಳು ಶಕ್ತಿಹೀನವಾಗುತ್ತವೆ.

    ಹಾಗೆಂದು ಪ್ರೆಷರ್ ಕುಕರ್ ಬಾಂಬ್ ನಿರ್ಮಾಣ ಮಾಡುವುದು ಸುಲಭವಾದ ಕಾರ್ಯವಲ್ಲ. ಜನರಿಗೆ ಮತ್ತು ಜಾಗಕ್ಕೆ ಅತಿಹೆಚ್ಚು ಹಾನಿ ಉಂಟುಮಾಡಬೇಕೆಂದು ಉಗ್ರಗಾಮಿಗಳು ಈ ಪ್ರೆಷರ್ ಕುಕರ್ ಒಳಭಾಗದಲ್ಲಿ ಚೂಪಾದ ವಸ್ತುಗಳಾದ ಮೊಳೆ, ನಟ್, ಸ್ಕ್ರ್ಯೂಗಳು, ಬಾಲ್ ಬೇರಿಂಗ್ ಇತ್ಯಾದಿಗಳನ್ನು ತುಂಬಿಸುತ್ತಾರೆ. ಅದರೊಡನೆ ಟಿಎನ್‌ಟಿಯಂತಹ ಸ್ಫೋಟಕಗಳನ್ನೂ ಕುಕರ್ ಒಳಗಡೆ ತುಂಬಿಸುತ್ತಾರೆ. ಇಲ್ಲಿ ಪ್ರೆಷರ್ ಕುಕರ್ ಸ್ಫೋಟವನ್ನು ಹೆಚ್ಚಿಸುತ್ತದೆ. ಸ್ಫೋಟಗೊಂಡಾಗ ಪ್ರೆಷರ್ ಕುಕರ್ ಹಲವು ಬದಲಾವಣೆಗಳನ್ನು ಹೊಂದುತ್ತದೆ. ಮೊದಲನೆಯದಾಗಿ ಪ್ರೆಷರ್ ಕುಕರ್ ಸ್ಫೋಟಗೊಂಡಾಗ ಅದರ ಅಲ್ಯುಮಿನಿಯಮ್ ಗೋಡೆಗಳು ಸಿಡಿದು, ಅತ್ಯಂತ ಚೂಪಾದ ಚೂರುಗಳಾಗಿ ಮಾರ್ಪಡುತ್ತವೆ. ಬಳಿಕ ಈ ಚೂರುಗಳು ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಗಾಳಿಯಲ್ಲಿ ಹಾರುತ್ತವೆ. ಈ ದಾಳಿಗೆ ತುತ್ತಾಗುವವರಿಗೆ ಸ್ಫೋಟದ ಶಬ್ದ ಕೇಳುವ ಮೊದಲೇ ಈ ಚೂಪಾದ ಚೂರುಗಳು ಅವರನ್ನು ಇರಿದಿರುತ್ತವೆ. ಸ್ಫೋಟದ ವೇಳೆ ಉಂಟಾಗುವ ಅಪಾರ ಬಿಸಿಯ ಪರಿಣಾಮವಾಗಿ ಈ ಚೂರುಗಳು ಸ್ವಲ್ಪ ಕರಗಿ, ಇರಿಯುವಾಗ ದೇಹದೊಳಗೆ ಪ್ರವೇಶಿಸುತ್ತವೆ. ಅದರೊಡನೆ ಪ್ರೆಷರ್ ಕುಕರ್ ಒಳಗಿನ ಅಲ್ಯುಮಿನಿಯಮ್ ಸಹ ದಹಿಸುತ್ತದೆ.

    ಅಂದಾಜು 3,000 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಪ್ರೆಷರ್ ಕುಕರ್ ಸಿಡಿಯುತ್ತದೆ. ಈ ಪರಿಣಾಮ ಗಂಟೆಗೆ 7,000 ಮೈಲಿ ವೇಗದಲ್ಲಿ ನಡೆಯುತ್ತದೆ. ಪ್ರೆಷರ್ ಕುಕರ್ ಬಾಂಬ್ ಮೂಲಕ ಎದುರಾಗುವ ಅಪಾಯ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ. ಯಾಕೆಂದರೆ ಇದನ್ನು ಬಹುತೇಕ ಗೃಹ ಬಳಕೆಯ ವಸ್ತುಗಳು ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಅದೂ ಅಲ್ಲದೆ ಪೊಲೀಸ್ ಪರಿಶೀಲನೆ, ಗಡಿ ತಪಾಸಣೆಗಳ ಸಂದರ್ಭದಲ್ಲಿ ಪ್ರೆಷರ್ ಕುಕರ್ ಮೇಲೆ ಯಾರೂ ಅನುಮಾನ ಪಡುವುದಿಲ್ಲ.

    ಆದರೆ ಭದ್ರತಾ ಸಂಸ್ಥೆಗಳು ಈ ಕುರಿತು ಸೂಕ್ತ ವಿಚಾರಣೆ ನಡೆಸಿ, ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್‌ಗಳನ್ನು ಶೀಘ್ರವಾಗಿ ಬಂಧಿಸಬೇಕಿದೆ. ಭಾರತದಲ್ಲಿ ಅತ್ಯಂತ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯಿದ್ದು, ದೇಶದ ನಾಗರಿಕರು ಇನ್ನಷ್ಟು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕಿದೆ. ಇನ್ನೊಂದು ರೀತಿ ನೋಡಿದರೆ, ಕಟ್ಟುನಿಟ್ಟಿನ ಕ್ರಮಗಳ ಪರಿಣಾಮವಾಗಿ ಭಯೋತ್ಪಾದಕರಿಗೆ ಏನೂ ಮಾಡಲು ಸಾಧ್ಯವಾಗದಿರುವುದರಿಂದ ಅವರು ಈ ರೀತಿ ಕಚ್ಚಾ ಬಾಂಬ್ ತಯಾರಿಸುವ ಹಂತಕ್ಕೆ ಬಂದಿದ್ದಾರೆ. ಆದರೆ ಇಂತಹ ಪ್ರಯತ್ನಗಳಲ್ಲಿ ಅವರೇ ಗಾಯಾಳುಗಳೂ ಆಗಿದ್ದಾರೆ. ಹಾಗೆಂದು ಯಾವಾಗಲೂ ಅದೃಷ್ಟ ದೇಶದ ಜನರ ಪರವಾಗಿಯೇ ಇರುತ್ತದೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ರಾಷ್ಟ್ರೀಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

    ‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

    ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts