More

    ಭಟ್ಕಳಕ್ಕೆ ಬಂದನೇ ಬಾಂಬರ್? ತನಿಖೆ ಚುರುಕುಗೊಳಿಸಿದ ಪೊಲೀಸರು ಹೋಟೆಲ್, ವಸತಿಗೃಹ, ಚಹಾ ಅಂಗಡಿಗಳಲ್ಲೂ ಶೋಧ

    ಭಟ್ಕಳ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದ ಆರೋಪಿ ಭಟ್ಕಳಕ್ಕೆ ಬಂದು ತಲೆಮರೆಸಿಕೊಂಡಿರಬಹುದೇ ಎನ್ನುವ ಸಂಶಯದ ಮೇಲೆ ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪಟ್ಟಣ ಹಾಗೂ ತಾಲೂಕಿನ ಎಲ್ಲ ವಸತಿಗೃಹ ಸೇರಿ ಇತರೆಡೆ ತಪಾಸಣೆ ನಡೆಸುತ್ತಿದ್ದಾರೆ.

    ಬೆಂಗಳೂರಿನ ಸುಜಾತಾ ಸರ್ಕಲ್​ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದಾನೆ. ತುಮಕೂರಿನಿಂದ ಬಳ್ಳಾರಿಗೆ ಬಂದು ನಂತರ ಮಂತ್ರಾಲಯ- ಗೋಕರ್ಣ ಬಸ್ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಬಳ್ಳಾರಿ ಮತ್ತು ತುಮಕೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ. ಬಳಿಕ ಅಂಕೋಲಾದಲ್ಲೂ ರಾಷ್ಟ್ರೀಯ ತನಿಖಾ ದಳದ ತಂಡ ವಿಚಾರಣೆ ನಡೆಸಿದೆ. ಭಟ್ಕಳದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಉಪಾಹಾರ ಮಂದಿರ, ಹೋಟೆಲ್, ವಸತಿ ಗೃಹ, ಅನುಮಾನಾಸ್ಪದ ಸ್ಥಳ, ಸೂಕ್ಷ್ಮ ಪ್ರದೇಶಗಳ ಜಾಡು ಹಿಡಿದು ಶೋಧನೆ ನಡೆಸುತ್ತಿದ್ದಾರೆ. ನಸುಕಿನ ಜಾವದಿಂದಲೇ ಪೊಲೀಸರು ಸಿವಿಲ್ ವಸ್ತ್ರದಲ್ಲಿ ಚಹಾ, ಬೀಡಾ ಅಂಗಡಿ ಮುಂದೆ ನಿಂತು ಅನುಮಾನಾಸ್ಪದ ಅಥವಾ ಹೊಸ ಮುಖಗಳ ಶೋಧ ನಡೆಸುತ್ತಿರುವುದು ಕಂಡು ಬಂದಿದೆ. ಗುರುವಾರ ಸಂಜೆಯವರೆಗೂ ಅನುಮಾನಾಸ್ಪದ ವ್ಯಕ್ತಿಗಳ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

    ಭಟ್ಕಳಕ್ಕೆ ಬರುವ ಸಾಧ್ಯತೆ ಕಡಿಮೆ ಎಂದ ಅಧಿಕಾರಿಗಳು: ಭಟ್ಕಳಕ್ಕೂ ಹಾಗೂ ಉಗ್ರರಿಗೂ ನಂಟು ಇರುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ದೇಶದ ಎಲ್ಲೇ ಭಯೋತ್ಪಾದನೆ ನಡೆದರೂ ಭಟ್ಕಳದ ಹೆಸರು ತಳಕು ಹಾಕಿಕೊಳ್ಳುತ್ತಿರುವುದು ಹೊಸದೇನಲ್ಲ. ಈ ಹಿಂದೆ ಭಟ್ಕಳದ ರಿಯಾಜ್ ಮತ್ತು ಇಕ್ಬಾಲ್ ಸಹೋದರರನ್ನು ಕೇಂದ್ರ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಹಲವರು ತನಿಖಾ ತಂಡದ ನಿಗ್ರಹದಲ್ಲೇ ಇದ್ದಾರೆ. ಇದೇ ಜನವರಿ ಕೊನೆಯ ವಾರದಲ್ಲಿ ಮುಂಬೈನಲ್ಲಿ ಬಂಧಿತನಾದ ಶಂಕಿತ ಉಗ್ರನೊಬ್ಬನ ಜತೆ ನಂಟು ಹೊಂದಿರುವ ಆರೋಪದಡಿ ಭಟ್ಕಳದ ಮಹಿಳೆಯ ಮನೆಯ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ದಾಳಿ ಮಾಡಿ ವಶಕ್ಕೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಬಂದು ಬಾಂಬರ್ ತಲೆಮರೆಸಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆೆ. ಆದರೆ, ಇದನ್ನು ಅಲ್ಲಗಳೆದ ಭಟ್ಕಳ ಪೊಲೀಸ್ ಅಧಿಕಾರಿಗಳು ಆತ ಭಟ್ಕಳಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಬೆಂಗಳೂರಿನ ಬಾಂಬರ್ ಚಾಲಾಕಿಯಾಗಿದ್ದು, ಪೊಲೀಸರ ಕಣ್ತಪ್ಪಿಸಲು ಈಗಾಗಲೇ ಹಲವು ತಂತ್ರ ಉಪಯೋಗಿಸಿದ್ದಾನೆ. ಈಗಾಗಲೇ ಇಲ್ಲಿ ರಾಷ್ಟ್ರೀಯ ತನಿಖಾ ತಂಡ, ಬೇಹುಗಾರಿಕೆ ಇಲಾಖೆ ಎಲ್ಲವನ್ನೂ ಗಮನಿಸುತ್ತಿದ್ದು, ಇಲ್ಲಿಗೆ ಆಗಮಿಸುವ ಸಾಧ್ಯತೆ ಕಡಿಮೆ. ಆದರೂ ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.

    ಫೋಟೋ ಬಿಡುಗಡೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೊಷಣೆ ಮಾಡಲಾಗಿದೆ. ಎನ್​ಐಎ 10 ಲಕ್ಷ ರೂ. ಬಹುಮಾನ ಘೊಷಣೆ ಮಾಡಿದ್ದು, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಇಲ್ಲಿಯವರೆಗೆ ಆರೋಪಿ ಚಹರೆ ಕಾಣುವ ಫೋಟೋ ಇರಲಿಲ್ಲ. ಎನ್​ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಕಾಣಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts