ರೇವಣಸಿದ್ಧೇಶ್ವರ ಏತ ನೀರಾವರಿಗೆ ಯೋಜನೆ, ಕೊಲ್ಹಾರ ಬಳಿ ಕಾಮಗಾರಿ ಪರಿಶೀಲಿಸಿದ ಸಂಸದ ರಮೇಶ ಜಿಗಜಿಣಗಿ ಹೇಳಿದ್ದೇನು?

JIGJINAGI VIJIT JOCKWELL
ಕೊಲ್ಹಾರ ಬಳಿಯ ಕೃಷ್ಣಾ ನದಿಯ ಹಿನ್ನೀರಿನಿಂದ ಆರಂಭಗೊಂಡ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆಯ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸಂಸದ ರಮೇಶ ಜಿಗಜಿಣಗಿ ಪರಿಶೀಲಿಸಿದರು. ರೈತ ಮುಖಂಡ ಅಣ್ಣಪ್ಪ ಖೈನೂರ ಹಾಗೂ ಅಧಿಕಾರಿಗಳಿದ್ದಾರೆ.
Published on

ವಿಜಯಪುರ: ರೈತರ ನಿರಂತರ ಹೋರಾಟ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ರೂಪುಗೊಂಡ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಕೂಡಲೇ ಮುಂದಿನ ಎರಡು ಮತ್ತು ಮೂರನೇ ಹಂತದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕೆಂದು ಸಂಸದರ ರಮೇಶ ಜಿಗಜಿಣಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕೊಲ್ಹಾರ ಬಳಿಯ ಕೃಷ್ಣಾ ನದಿಯ ಹಿನ್ನೀರಿನಿಂದ ಆರಂಭಗೊಂಡ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆಯ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರು ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು. ಇಂಡಿ ಭಾಗದ ರೈತರ ಹೋರಾಟಕ್ಕೆ ಬೆಲೆ ಕೊಟ್ಟು ಯೋಜನೆ ಜಾರಿಗೊಳಿಸಲು ಸಾಕಷ್ಟು ಒತ್ತಾಯ ಮಾಡಿದ್ದೆ. ರೈತರ ಹೋರಾಟಕ್ಕೂ ಬೆಂಬಲ ಸೂಚಿಸಿದ್ದೆ. ಬಳಿಕ ನಮ್ಮ ಸರ್ಕಾರದ ಸಿಎಂ ಆಗಿದ್ದ ಬೊಮ್ಮಾಯಿ ಮತ್ತು ನೀರಾವರಿ ಮಂತ್ರಿ ಕಾರಜೋಳರ ಮೂಲಕ ಯೋಜನೆ ಅನುಷ್ಟಾನಗೊಳಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ ಫಲವಾಗಿ ಯೋಜನೆ ಅನುಷ್ಟಾನಕ್ಕೆ ಬಂದಿದೆ. ಇದೀಗ ಮೊದಲ ಹಂತದ ಕಾಮಗಾರಿ ಅಂತಿಮ ಘಟ್ಟ ತಲುಪಿದೆ. ಹೀಗಾಗಿ ಕೂಡಲೇ ಮುಂದಿನ ಹಂತದ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಮಗಾರಿ ವಿವರ

ಒಟ್ಟು ಮೂರು ಹಂತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಅಂದಾಜು 2969 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಯ ಮೊದಲ ಹಂತಕ್ಕೆ 812 ಕೋಟಿ ರೂಪಾಯಿ ಒದಗಿಸಲಾಗಿದೆ. ಕೊಲ್ಹಾರ ಬಳಿಯ ಕೃಷ್ಣಾ ನದಿಯ ಹಿನ್ನೀರಿನಿಂದ ಕಾಮಗಾರಿ ಆರಂಭವಾಗಿದ್ದು ಜಾಕ್‌ವೆಲ್ ಮೂಲಕ ಇಂಡಿ, ಬಬಲೇಶ್ವರ ಹಾಗೂ ನಾಗಠಾಣ ಭಾಗದ ಹಳ್ಳಿಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಪ್ಯಾಕೇಜ್ ಒಂದರಲ್ಲಿ 25.860 ಕಿಮೀ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಬೇಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ 839 ಕೋಟಿ ರೂಪಾಯಿ ಹಾಗೂ ಹಂತ ಮೂರರಲ್ಲಿ 1348 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ ಎಂದು ಜಿಗಜಿಣಗಿ ವಿವರಿಸಿದರು.

ನೀರಾವರಿ ಸೌಲಭ್ಯ

ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಿಂದ ಇಂಡಿ ಭಾಗದ 42 ಹಳ್ಳಿಗಳಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಗಲಿದೆ. ಅಲ್ಲದೇ, ಬಬಲೇಶ್ವರ ಹಾಗೂ ನಾಗಠಾಣ ಭಾಗದ ಕೆಲವು ಹಳ್ಳಿಗಳು ನೀರಾವರಿಗೆ ಒಳಪಡಲಿವೆ ಎಂದ ಜಿಗಜಿಣಗಿ, ಈ ಯೋಜನೆಗಾಗಿ ಸುದೀರ್ಘ ಹೋರಾಟ ನಡೆದಿದೆ. ಅನೇಕ ರೈತರು ಮನೆ-ಮಠ ತ್ಯಾಗ ಮಾಡಿ ನಿರಂತರ ಹೋರಾಟ ನಡೆಸಿದ್ದಾರೆ. ನಾನು ಸಹ ಹೋರಾಟಕ್ಕೆ ಬೆಂಬಲಿಸಿದ್ದೇನೆ. ಸ್ಪಂದಿಸಿದ್ದೇನೆ. ಫಲವಾಗಿ ನಮ್ಮದೇ ಸರ್ಕಾರದಲ್ಲಿ ಯೋಜನೆ ಅನುಷ್ಟಾನಗೊಂಡಿದೆ. ಆದರೆ, ಇಂದಿನ ಸರ್ಕಾರ ಯೋಜನೆ ಪೂರ್ಣಗೊಳಿಸಲು ಶ್ರಮಿಸಬೇಕಿದೆ ಎಂದರು.

ರೈತ ಮುಖಂಡ ಅಣ್ಣಪ್ಪ ಖೈನೂರ ಹಾಗೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net