

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮುಂಜಾನೆ ರಾಷ್ಟ್ರಗೀತೆ ಜೊತೆ ರವೀಂದ್ರನಾಥ್ ಟ್ಯಾಗೋರ್ ಅವರೇ ಬರೆದ 'ಬಂಗ್ಲಾರ್ ಮತಿ ಬಂಗ್ಲಾರ್ ಜೋಲ್' ಎಂಬ ರಾಜ್ಯಗೀತೆಯ್ನು(State anthem) ಕಡ್ಡಾಯವಾಗಿ ಹಾಡುವಂತೆ ಆದೇಶ ಮಾಡಿದೆ ಎಂದು ವರದಿಯಾಗಿದೆ.
ಈ ಕುರಿತು ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯು ಗುರುವಾರ ಹೊಸ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಶಾಲೆಗಳಿಗೆ ಅಧಿಸೂಚನೆ ಕಳುಹಿಸಿದೆ. ಬೆಳಿಗಿನ ಪ್ರಾರ್ಥನೆಯಲ್ಲಿ ಕಡ್ಡಾಯವಾಗಿ ರಾಜ್ಯ ಗೀತೆಯಾದ ಬಾಂಗ್ಲಾರ್ ಮತಿ, ಬಾಂಗ್ಲಾರ್ ಜೋಲ್ ಅನ್ನು ನಿಯಮಿತವಾಗಿ ಹಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.
ಕೊಲ್ಕೋತ್ತಾದಲ್ಲಿ ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು ಮಾತನಾಡಿ, ಸಿಎಂ ಬ್ಯಾನರ್ಜಿ ಅನುಮೋದನೆಯೊಂದಿಗೆ ಇಂದಿನಿಂದ ಪಶ್ಚಿಮ ಬಂಗಾಳದ ಪ್ರತಿಯೊಂದು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1905ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಪ್ರಸಿದ್ಧ ಗೀತೆ "ಬಾಂಗ್ಲಾರ್ ಮತಿ ಬಾಂಗ್ಲಾರ್ ಜೋಲ್" ಅನ್ನು ಶಾಲಾ ದಿನದ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಹಾಡಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
2023ರಲ್ಲಿ ಬಂಗಾಳಿ ಕ್ಯಾಲೆಂಡರ್ನ ಮೊದಲ ದಿನವಾದ ಪೊಯಿಲಾ ಬೈಶಾಖ್ ಅನ್ನು ರಾಜ್ಯೋತ್ಸವ ದಿನವೆಂದು ಆಚರಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರ, 'ಬಂಗ್ಲಾರ್ ಮತಿ ಬಂಗ್ಲಾರ್ ಜೋಲ್' (ಬಂಗ್ಲಾರ್ ಭೂಮಿ, ಬಂಗಾಳದ ನೀರು) ಎಂಬ ಹಾಡನ್ನು ರಾಜ್ಯಗೀತೆಯಾಗಿ ಘೋಷಿಸಿತ್ತು. ಟ್ಯಾಗೋರ್ರು ಈ ಹಾಡನ್ನು 1905ರಲ್ಲಿ ಬಂಗಾಳ ವಿಭಜನೆಯನ್ನು ಪ್ರತಿಭಟಿಸಲು ಬರೆದಿದ್ದರು.(ಏಜೆನ್ಸೀಸ್)