ತಾಯ್ನಾಡಿಗೆ ಮರಳಿದ ಯೋಧನಿಗೆ ಸ್ವಾಗತ

pdb (5)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಭೂಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಾಯಕ್ ಸುಭೇದಾರ್ ಪದವಿಯೊಂದಿಗೆ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಕಾಪು ಪಡು ಗ್ರಾಮದ ದೇವದಾಸ್ ಮೆಂಡನ್ (42) ಅವರನ್ನು ಹುಟ್ಟೂರು ಕಾಪುವಿನಲ್ಲಿ ಭಾನುವಾರ ಸ್ವಾಗತಿಸಿ, ಅಭಿನಂದಿಸಲಾಯಿತು. ಕಾಪು ಪಡು ಗ್ರಾಮದ ರಾಮನಗರ ನಿವಾಸಿಗಳಾದ ದಿ. ಗಣಪ ಸುವರ್ಣ ಮತ್ತು ದಿ. ವಿಮಲ ಮೆಂಡನ್ ದಂಪತಿ ಪುತ್ರನಾಗಿರುವ ದೇವದಾಸ್ ಮೆಂಡನ್ 2002ರಿಂದ ಭಾರತೀಯ ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಸೇವೆ ಆರಂಭಿಸಿದ್ದರು. 24 ವರ್ಷಗಳ ಸೇವಾ ಅವಧಿಯಲ್ಲಿ ಮಹಾರಾಷ್ಟ್ರದ ನಾಸಿಕ್, ಉತ್ತರ ಪ್ರದೇಶದ ಅಲಹಾಬಾದ್, ಜಮ್ಮು ಕಾಶ್ಮೀರದ ತಂಗಾಧರ್, ಅನಂತ್‌ನಾಗ್, ತಂಗ್ಸೆ, ಉತ್ತರಾಖಂಡ್‌ನ ಡೆಹರಾಡೂನ್, ತ್ರಿಪುರಾದ ಅಗರ್ತಲ, ರಾಜಸ್ಥಾನದ ನಾಸಿರಾಬಾದ್, ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಅಸ್ಸಾಂನ ಹಟ್ಟಿಗೋರ್ ಸಹಿತ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. 2020ರಲ್ಲಿ ಲಡಾನ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಭಾರತ ಮತ್ತು ಚೀನಾ ಗಡಿ ಪ್ರದೇಶ ಗಾಲ್ವಾನ್ ಕಣಿವೆಯಲ್ಲಿ ನಡೆದ ರ್ಷಣೆಯಲ್ಲಿ ಅವರೊಂದಿಗೆ ಕರ್ತವ್ಯದಲ್ಲಿದ್ದ ಹಲವು ಮಂದಿ ಯೋಧರು ಹುತಾತ್ಮರಾಗಿದ್ದರು. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿಯೂ ಭಾಗವಹಿಸಿದ್ದರು. ಕಾಪು ತಹಸೀಲ್ದಾರ್ ಪ್ರತಿಭಾ ಆರ್., ವಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ನಿವೃತ್ತ ಯೋಧರಾದ ಕುಶ ಸಾಲ್ಯಾನ್, ಶ್ರೀಕಾಂತ್ ಕರ್ಕೇರ, ಕಾಪು ಪಡು ರಾಮನಗರ ನಗರ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಪುತ್ರನ್, ಪುರಸಭಾ ಸದಸ್ಯ ನಿತಿನ್ ಕುವಾರ್, ಉದ್ಯಾವರ ಗ್ರಾಪಂ ವಾಜಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ, ಪ್ರಮುಖರಾದ ನವೀನ್ ಅಮೀನ್, ಲಾಲಾಜಿ ಪುತ್ರನ್, ಅನಿಲ್ ಶೆಟ್ಟಿ, ಉಮೇಶ್ ಪೂಜಾರಿ ಸಹಿತ ವಿವಿಧ ಸಂಟನೆಗಳವರು ಉಪಸ್ಥಿತರಿದ್ದರು.

ಇಂದಿನ ಯುವಜನತೆ ಮಿಲಿಟರಿ ಸೇವೆಗಾಗಿ ದೈಹಿಕ ಮತ್ತು ವಾನಸಿಕವಾಗಿ ಸಿದ್ಧತೆ ನಡೆಸಬೇಕಿದೆ. ಎಲ್ಲ ಕಡೆ ರಿಸ್ಕ್ ಇದ್ದೇ ಇರುತ್ತದೆ. ಊರಿನಲ್ಲಿಯೂ, ಹೊರ ದೇಶದಲ್ಲಿಯೂ, ಮಿಲಿಟರಿಯಲ್ಲಿಯೂ ಇರುತ್ತದೆ. ಆದರೆ ದೇಶಕ್ಕಾಗಿ ಸೇವೆ ಸಲ್ಲಿಸುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಯುವಕರು ಮುಂದೆ ಬಂದಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಿ ಮುನ್ನಡೆಸಲು ಬದ್ಧನಿದ್ದೇನೆ. ದೇವದಾಸ್ ಮೆಂಡನ್, ಕಾಪು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net