

03-05-2020 ರಿಂದ 09-05-2020
ಮೇಷ: ಈ ವಾರದಲ್ಲಿ 4.5.2020ರಂದು ಅಂಗಾರಕನು ಕುಂಭ ರಾಶಿಯಲ್ಲಿ ಸಂಚರಿಸುತ್ತಾನೆ. ಗುರುಬಲ ಪರಿಪೂರ್ಣವಾಗಿಲ್ಲದಿದ್ದರೂ ನಿಮ್ಮ ದೈನಂದಿನ ವ್ಯವಹಾರಗಳಿಗೆ ಅಡೆತಡೆ ಇರುವುದಿಲ್ಲ. ನೌಕರಿಯಲ್ಲಿ ಕಿರಿಕಿರಿ ಬೇಡ. ವರ್ಗಾವಣೆ ಆಗುವ ಸಂಭವ. ವ್ಯವಸಾಯದಲ್ಲಿ ಮೇ 15ರ ನಂತರ ಲಾಭಕಾಣುವಿರಿ. ಅಮಾವಾಸ್ಯೆ ನಂತರ ಶುಭ.
ವೃಷಭ: ಗುರು, ಶನಿ ಗ್ರಹಗಳು ನವಮದಲ್ಲಿದ್ದು ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಶುಭಕಾರ್ಯಗಳು ನಡೆಯುತ್ತವೆ. ಶಿಕ್ಷಣ, ನೌಕರಿಯಲ್ಲಿ ಯಶಸ್ಸು. ಜ್ಯೇಷ್ಠ ಶುದ್ಧ ಪೌರ್ಣಮಿ ನಂತರದಲ್ಲಿ ರಾಷ್ಟ್ರಕ್ಕೆ ಬಂದಿರುವ ವ್ಯಾಧಿಯು ದೂರವಾಗಿ ನೀವು ವ್ಯಾಪಾರದಲ್ಲಿ ಹೂಡಿಕೆ, ಸ್ಥಾನಮಾನ ಕಾಣುವ ಸಮಯ ಬರುತ್ತದೆ.
ಮಿಥುನ: ನ್ಯಾಯದ ಹಾದಿ, ಧರ್ಮ ಚಿಂತನೆ ನಿಮ್ಮ ಬಾಳಿನ ಧ್ಯೇಯವಾಗಲಿ. ಅನಿರೀಕ್ಷಿತ ಬೆಳವಣಿಗೆಗಳು, ಕಾನೂನು ಸಮಸ್ಯೆಗಳಿಂದ ತೊಡಕಾಗಬಹುದು. ಶನಿಯು ನ್ಯಾಯವಿದ್ದೆಡೆ ಇರುತ್ತಾನೆ. ಖರ್ಚು-ವೆಚ್ಚಗಳು ಜಾಸ್ತಿಯಾಗಬಹುದು. ಶುಭಕಾರ್ಯಗಳು ನಡೆಯುತ್ತವೆ. ಋಣದಲ್ಲಿರದೆ ವ್ಯವಹಾರಗಳನ್ನು ಸುಗಮವಾಗಿ ನಡೆಸಿ. ಗೌರವ ಕಾಪಾಡಿಕೊಳ್ಳಿ. ಶ್ರೀರಾಮಮಂತ್ರವೇ ನಿಮಗೆ ಶ್ರೀರಕ್ಷೆ.
ಕಟಕ: ಸಪ್ತಮದಲ್ಲಿ ಗುರುವಿದ್ದು, ಶುಭಕರನಾಗಿರುತ್ತಾನೆ. ದಶಮದ ರವಿ ಮತ್ತು ಬುಧ ಗ್ರಹಗಳು ಸಾಮಾಜಿಕ ಜೀವನದಲ್ಲಿ ಪ್ರತಿಷ್ಠೆ ಹಾಗೂ ಗೌರವವನ್ನು ತರುವ ಸಮಯ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಒಳ್ಳೆಯದ್ದನ್ನು ನೆನಪಿಸಿಕೊಳ್ಳಿ. ಇಲ್ಲದ್ದಕ್ಕೆ ಮರುಗಬೇಡಿ.
ಸಿಂಹ: ಶನಿಯ ಆರನೇ ಮನೆಯ ಸಂಚಾರದಲ್ಲಿ ಹಲವಾರು ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಸಮಸ್ಯೆಗಳು ಮುಗಿಯಲಿವೆ. ಸಂಧಾನಗಳಿಂದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಶುಭದ ಲಕ್ಷಣ. ಸೂರ್ಯ ಕವಚ ಪಠಿಸಿ. ಬಾಲಸೂರ್ಯ (ಉದಯ ಸೂರ್ಯ)ನ ದರ್ಶನ ಮಾಡಿ. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಿ. ಜೂನ್ 29ರವರೆಗೂ ಕಾದಿರಿ.
ಕನ್ಯಾ: ಅಷ್ಟಮ ಸೂರ್ಯ, ಪಂಚಮಶನಿ ತಾಪಗಳಿಂದ ಸಮಸ್ಯೆಗಳುದ್ಭವಿಸಿ ಬರುತ್ತಿರುವ ವರಮಾನಕ್ಕೆ ತೊಡಕಾಗಬಹುದು. ಮನಸ್ಸಿನ ಸ್ಥಿತಿಯಿಂದ ಅನಾರೋಗ್ಯವುಂಟಾಗಬಹುದು. ಹೇಳುವುದು ಒಂದು ಮಾಡುವುದು ಮತ್ತೊಂದಾಗಬಾರದು. ನುಡಿದಂತೆ ನಡೆದರೆ ಶನಿಯು ನಿಮ್ಮನ್ನು ಉಳಿಸುತ್ತಾನೆ. ಹಿರಿಯರಾಗಿ ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ. ಹಾಗಾಗದಿದ್ದಲ್ಲಿ ಉಳಿವು ಅಳಿವುಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ಮನೆದೇವರನ್ನು ಪ್ರಾರ್ಥಿಸಿ.
ತುಲಾ: ತುಲಾ ರಾಶಿಗೆ ಅಧಿಪತಿಯಾದ ಶುಕ್ರನು ವೃಷಭದಲ್ಲೇ ಇದ್ದಾನೆ. ಶುಭಕಾರಕನಾಗಿದ್ದಾನೆ. ಮನುಕುಲಕ್ಕೆ ಘೋರ ಕಾಯಿಲೆಯು ಸಮಸ್ಯೆ ತಂದೊಡ್ಡಿದೆ. ನಿಸರ್ಗದ ಅಸಹಕಾರಗಳಿಂದ ಕೆಲಸ-ಕಾರ್ಯ ವಿಳಂಬವಾಗಿದೆ. ಚಿಂತಿಸಬೇಡಿ. ದೈವಶಕ್ತಿಯು ಕಾಪಾಡಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಲಕ್ಷಿ್ಮೕನರಸಿಂಹ ಆರಾಧನೆ ಮಾಡಿ. ಲಲಿತಾತ್ರಿಷತಿ ಪಾರಾಯಣ ಅಥವಾ ಶ್ರವಣ ಮಾಡಿ. ಭಗವಂತನು ನಿಮ್ಮ ಬದುಕನ್ನು ಸಂತೋಷವಾಗಿಡುವುದರಲ್ಲಿ ಸಂದೇಹವಿಲ್ಲ.
ವೃಶ್ಚಿಕ: ತೃತೀಯ ಶನಿಗೆ ಬಾರದ್ದನ್ನು ತಂದುಕೊಡುವ ಶಕ್ತಿ ಇದೆ. ದೈವವೇ ನಿಮ್ಮ ಬಾಳಿಗೆ ಮೂಲ. ಚೇಳಿನ ಚಿಹ್ನೆಯು ವಿಷಪೂರ್ಣ ವಾದದ್ದು. ಅದಕ್ಕೆ ಸಮನಾದ ಔಷಧ ಸಮುದ್ರ ಮಂಥನದಲ್ಲಿ ದೊರೆತ ಅಮೃತ. ನಿಮ್ಮ ಧನದ ಗಂಟು ಬಂದು ಸೇರುತ್ತದೆ. ಆಕಾಂಕ್ಷೆಗೂ ಮೀರಿ ದೇವರು ಕೊಡುತ್ತಾನೆ. ಮಹತ್ವಾಕಾಂಕ್ಷೆ ದೇವರ ಸೇವೆ ಮಾಡುವುದು. ಕಾರ್ಯಗಳನ್ನು ಮುಂದೂಡಬಾರದು. ಸುಖ-ಸಂತೋಷವೇ ನಿಮ್ಮ ಜೀವನವಾಗಿರಲಿ.
ಧನಸ್ಸು: ಕಾನೂನಾತ್ಮಕ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಕಂಡುಕೊಳ್ಳಬೇಕು. ಆದ್ದರಿಂದ ಶಿಸ್ತುಬದ್ಧ ನಿಯಮ ಪಾಲಿಸಿ. ಹಾಗೆಯೇ ವ್ಯಕ್ತಿತ್ವವನ್ನು ಉತ್ತುಂಗಕ್ಕೆ ಕೊಂಡೊಯ್ಯಿರಿ. ಕಾಲು-ಕೀಲು ಮಾಂಸಖಂಡಗಳಿಗೆ ಸಂಬಂಧಿಸಿದ ನೋವುಗಳಿಗೆ ವಿಶ್ರಾಂತಿಯೇ ಔಷಧ. ಮತ್ತೆ ಮರುಕಳಿಸಲು ಅವಕಾಶ ಕೊಡದಿರಿ. ಉದ್ಯೋಗ, ಯಶಸ್ಸು, ಉತ್ತಮರಾದ ವ್ಯಕ್ತಿಗಳ ಸಂದರ್ಶನದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಅಶುಭ ನುಡಿಯಬೇಡಿ.
ಮಕರ: ಜನ್ಮಶನಿ ನ್ಯಾಯಪ್ರಿಯ. ನಿಮಗೆ ನೀವೇ ಹಾಗೂ ಮತ್ತೊಬ್ಬರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಿ. ಧರ್ಮಬುದ್ಧಿ ಇಲ್ಲದಿದ್ದರೂ ದಾನ ಮಾಡುವುದು. ಮನೆಯಲ್ಲಿ ಮಡದಿ-ಮಕ್ಕಳು ಸುಖವಾಗಿರಬೇಕೆಂದು ಸಾಲವನ್ನು ತರಬೇಡಿ. ಮುಂದೆ ರವಿ,ಗುರು ಸಂಯೋಗದಿಂದ ನಿಮ್ಮ ಮನಸ್ಸು ಉಲ್ಲಾಸಕ್ಕೆ ತಿರುಗುತ್ತದೆ. ಮನೆಯೇ ಮಂದಿರ. ಆದರೆ ಕಾಯಕವೇ ಕೈಲಾಸ. ಶನಿ ಅಷ್ಟೋತ್ತರವನ್ನು ಹತ್ತುಬಾರಿ ಪಠಿಸಿ.
ಕುಂಭ: ಚಿಂತೆಯನ್ನು ಬಿಟ್ಟು ಕಾರ್ಯಮಗ್ನರಾಗಿರಿ. ಸಂಕಷ್ಟನಾಶನ ಗಣೇಶ ಸ್ತೋತ್ರ ಪಠಿಸಿ. ಕೆಲಸವನ್ನು ಮುಗಿಸಿ ಯಶಸ್ಸನ್ನು ಕಾಣಲು ಸೂಕ್ತ ಸಮಯ. ರಾಜಕೀಯ ಹಾಗೂ ಕೆಲವು ವ್ಯಕ್ತಿಗಳಿಂದ ದೂರವಿರಿ. ನಿಮಗಾಗಿಯೇ ನೀವು ಶ್ರಮಪಟ್ಟಲ್ಲಿ ಸುಖ, ಧನಲಾಭ ಯಶಸ್ಸು, ಕೀರ್ತಿ. ನ್ಯಾಯಸಮ್ಮತವಾದ ಋಣಗಳನ್ನು ಪರಿಹರಿಸಿ. ಶಿವನ ಪೂಜೆ ಮಾಡಿರಿ. ಪ್ರದೋಷ ದಂದು ಅಭಿಷೇಕ, ಅರ್ಚನೆ ಮಾಡಿ ದೈವಬಲ ಹೆಚ್ಚಿಸಿಕೊಳ್ಳಿ.
ಮೀನ: ಈ ವಾರದಲ್ಲಿ ವಿಚಿತ್ರವಾದ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಪರಿಚಿತರು ಒಳ್ಳೆಯದನ್ನು ಮಾಡಲಿದ್ದಾರೆ. ಏಕಾದಶ ಶನಿ, ಗುರು ಕುಜನ ಸ್ಥಾನಪಲ್ಲಟದೊಂದಿಗೆ ಶುಭವನ್ನು ಮಾಡುತ್ತಾರೆ. ಸರಸ್ವತಿಯ ಮೂಲಮಂತ್ರವನ್ನು ಪಠಿಸಿ. ಚಂದ್ರಲಾಪರಮೇಶ್ವರಿ ಅಷ್ಟೋತ್ತರ ನಾಮವನ್ನು ಪಾರಾಯಣ ಮಾಡಿ. ಸರ್ವಾಂತರ್ಯಾಮಿಯಾದ ಶ್ರೀರಾಮ, ದತ್ತಾತ್ರೇಯನನ್ನು ಆರಾಧಿಸಿ.