

ಮೆಲ್ಬೋರ್ನ್: ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರನ್ನು ಸೋಮವಾರ ಹಿಂದು-ತಮಿಳು ಬ್ರಾಹ್ಮಣರ ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಕಳೆದ ವಾರವಷ್ಟೇ ಕಿಶ್ಚಿಯನ್ ಸಂಪ್ರದಾಯದ ಪ್ರಕಾರ ಇವರಿಬ್ಬರು ವಿವಾಹವಾಗಿದ್ದರು.
33 ವರ್ಷದ ಮ್ಯಾಕ್ಸ್‌ವೆಲ್ ಶೆರ್ವಾನಿ ಮತ್ತು ಭಾರತ ಮೂಲದ ವಿನಿ ಸೀರೆ ಧರಿಸಿ ಹಾರ ಬದಲಾಯಿಸಿಕೊಂಡಿರುವ ಮತ್ತು ಈ ವೇಳೆ ಮ್ಯಾಕ್ಸ್‌ವೆಲ್ ಹಾರ ಹಿಡಿದು ಭಾರತೀಯ ವಾದ್ಯ ಸಂಗೀತಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮುನ್ನ ತಮಿಳು ಭಾಷೆಯಲ್ಲಿದ್ದ ಅವರ ಮದುವೆಯ ಆಮಂತ್ರಣ ಪತ್ರಿಕೆಯೂ ವೈರಲ್ ಆಗಿತ್ತು.
ವಿವಾಹದಿಂದಾಗಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿರುವ ಮ್ಯಾಕ್ಸ್‌ವೆಲ್, ಏಪ್ರಿಲ್ 5ರಂದು ರಾಜಸ್ಥಾನ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ. ಮ್ಯಾಕ್ಸ್‌ವೆಲ್ 11 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ತಂಡದಲ್ಲಿ ರಿಟೇನ್ ಆಗಿದ್ದರು. 2020ರ ಫೆಬ್ರವರಿಯಲ್ಲಿ ಮ್ಯಾಕ್ಸ್‌ವೆಲ್-ವಿನಿ ಅವರ ನಿಶ್ಚಿತಾರ್ಥವೂ ಕ್ರಿಶ್ಚಿಯನ್ ಮತ್ತು ಹಿಂದು ಸಂಪ್ರದಾಯದ ಪ್ರಕಾರ ನಡೆದಿತ್ತು.