ಯಾರಿಗೆ ಯಾರುಂಟು, ಎರವಿನ 0+0+0=0 ರಕ್ಷಣಾ ಕೂಟ!

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು 2026ರ ಸೆಪ್ಟೆಂಬರ್ 24ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್​ಜಿಎ) 81ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು.
ಯಾರಿಗೆ ಯಾರುಂಟು, ಎರವಿನ 0+0+0=0 ರಕ್ಷಣಾ ಕೂಟ!
WEB
Published on: 
WEB

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು 2026ರ ಸೆಪ್ಟೆಂಬರ್ 24ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್​ಜಿಎ) 81ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆಗ ನಾಲ್ಕು ಮುಸ್ಲಿಂ ದೇಶಗಳ ಹೊರತಾಗಿ ಉಳಿದೆಲ್ಲ ಮುಸ್ಲಿಂ ದೇಶಗಳು ಮತ್ತು ಹಲವು ಇತರ (ಹೆಚ್ಚಾಗಿ ಆಫ್ರಿಕನ್ ದೇಶಗಳು) ದೇಶಗಳ ಪ್ರತಿನಿಧಿಗಳು ಸಭೆಯಿಂದ ಹೊರನಡೆದದ್ದನ್ನು ಇಡೀ ಜಗತ್ತೇ ಕಿರು ತೆರೆಗಳಲ್ಲಿ ನೋಡಿತು; ‘ಇಲ್ಲಿ ಇನ್ನೂ ನೈತಿಕ ಹೇಡಿಗಳೇನಾದರೂ ಉಳಿದಿದ್ದರೆ ಅವರೂ ಹೊರಹೋಗಬಹುದು’ ಎಂದು ‘ಬೀಬೀ’ ನೇತನ್ಯಾಹು ಹೇಳಿದ್ದನ್ನೂ ಜಗತ್ತು ಕೇಳಿಸಿಕೊಂಡು ದಂಗಾಯಿತು. ಕಟುನಿರ್ಧಾರಗಳಿಗೆ ಹೆಸರಾದ ಯೆಹೂದಿ ರಾಷ್ಟ್ರದ ಅ ಪ್ರಧಾನಮಂತ್ರಿಯ ಭಾಷಣವನ್ನು ಕೂತು ಆಲಿಸಿದ ನಾಲ್ಕು ಮುಸ್ಲಿಂ ದೇಶಗಳೆಂದರೆ ಯುಎಇ, ಬಹರೀನ್, ಮೊರಾಕ್ಕೋ ಮತ್ತು ಅಝುರ್​ಬೈಜಾನ್. ಮೊದಲ ಮೂರೂ ಅರಬ್ ದೇಶಗಳು ಮತ್ತವು ಅಮೆರಿಕಾದ ಮಧ್ಯಸ್ಥಿಕೆಯಲ್ಲಿ 2020-21ರಲ್ಲಿ ಇಸ್ರೇಲ್​ನೊಂದಿಗೆ ‘ಅಬ್ರಹಾಂ ಒಪ್ಪಂದ’ಗಳಿಗೆ ಸಹಿಹಾಕಿ ಆ ಯೆಹೂದಿ ರಾಷ್ಟ್ರದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡಿವೆ. ಹಾಗೇ ಮಾಡಿರುವ ನಾಲ್ಕನೆಯ ಹಾಗೂ ಇಲ್ಲಿಯವರೆಗೆ ಕೊನೆಯ ದೇಶವಾದ ಸುಡಾನ್ ಇತರ ಮೂವರ ದಾರಿ ಬಿಟ್ಟು ನೆತನ್ಯಾಹು ಭಾಷಣದ ಸಮಯದಲ್ಲಿ ಸಭಾತ್ಯಾಗ ಮಾಡಿತು.

ಅಝುರ್​ಬೈಜಾನ್​ನ ವಿದೇಶಮಂತ್ರಿಯವರು ‘ಬೀಬಿ’ ಭಾಷಣವನ್ನು ಜಾಗ ಬದಲಿಸದೇ ಕೂತು ಕೇಳಿದರು. ಮಾಜಿ ಸೋವಿಯತ್ ಯೂನಿಯನ್​ನ ಭಾಗವಾಗಿದ್ದ ಅಝುರ್​ಬೈಜಾನ್​ನ ಜನರು ಜನಾಂಗೀಯವಾಗಿ ತುರ್ಕೀಯರು, ಅಝೇರಿ ಭಾಷೆಯೂ ತುರ್ಕಿ ಭಾಷೆಯ ಮೂಲದ್ದೇ. ಆದರೆ ಈ ಜನ ಶಿಯಾ ಮುಸ್ಲಿಮರು. ಪ್ರಾಚೀನ ಅಝುರ್​ಬೈಜಾನ್​ನ ದಕ್ಷಿಣ ಭಾಗ ಉತ್ತರ ಇರಾನ್​ಗೆ ಸೇರಿಹೋಗಿದೆ. ಆ ಅಝೇರಿ ಜನ ಇರಾನಿ ಪ್ರಜೆಗಳು. ಅಂದರೆ ಅಝುರ್​ಬೈಜಾನ್ ಜನಾಂಗೀಯವಾಗಿ ಮತ್ತು ಭಾಷಿಕವಾಗಿ ತುರ್ಕಿಯೇಗೆ ಹತ್ತಿರ, ಧಾರ್ವಿುಕವಾಗಿ ಅವರಿಗೆ ಇರಾನ್​ನೊಂದಿಗೆ ಘನಿಷ್ಟ ಸಂಬಂಧ. ಇಸ್ರೇಲ್ ವಿರುದ್ಧ ಕಳೆದ 47 ವರ್ಷಗಳಿಂದ ಇರಾನ್, 12 ವರ್ಷಗಳಿಂದ ತುರ್ಕಿಯೇ ಕಾರುತ್ತಿರುವ ಉಗ್ರ ವಿಷಕ್ಕೆ ಅಝುರ್​ಬೈಜಾನ್ ಸಹ ತನ್ನದೊಂದಿಷ್ಟನ್ನು ಸೇರಿಸಿದರೆ ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಆ ದೇಶ ಹಾಗೆ ಮಾಡಲಿಲ್ಲ, ರಾಜತಾಂತ್ರಿಕ ಮರ್ಯಾದೆಗೆ ಬೆಲೆ ಕೊಟ್ಟು ಅಂತೆ. ಆದರೆ, ನಿಜವಾದ ಕಾರಣ ಬೇರೆಯೇ ಇದೆ.

ಅಝುರ್​ಬೈಜಾನ್ ತನ್ನ ಶಸ್ತ್ರಾಸ್ತ್ರ ಅಗತ್ಯದ ಬಹುದೊಡ್ಡ ಭಾಗಕ್ಕೆ ಅವಲಂಬಿತವಾಗಿರುವುದು ಯೆಹೂದಿ ರಾಷ್ಟ್ರ ಇಸ್ರೇಲ್ ಮೇಲೆ! ಮಿಸೈಲ್​ಗಳು, ಡ್ರೋನ್​ಗಳು ಮತ್ತು ಶಕ್ತಿಶಾಲಿ ರೆಡಾರ್​ಗಳೂ ಸೇರಿದಂತೆ ಬಗೆಬಗಯ ಯುದ್ಧೋಪಕರಣಗಳನ್ನು ಇಸ್ರೇಲಿಗಳು ಅಝೇರಿಗಳಿಗೆ ಕೊಡುತ್ತಿದ್ದಾರೆ, ಬದಲಿಗೆ ಕಚ್ಚಾತೈಲವನ್ನು ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ಹೀಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಾಕ್​ಔಟ್ ಮಾಡದಂತಹ ರಾಜತಾಂತ್ರಿಕ ಬೆಂಬಲ ಸಹ! ಇಷ್ಟಾಗಿಯೂ ಅಝೇರಿಗಳು ಸೌದಿಗಳಿಗಿಂತಲೂ ಹೆಚ್ಚು ಮರ್ಯಾದೆ ಉಳ್ಳವರು ಎಂದು ಹೇಳಲೇಬೇಕು. ಯೆಮೆನ್​ನ ಹೂತಿಗಳು ರಾಜಧಾನಿ ರಿಯಾಧ್, ಪಶ್ಚಿಮ ತೀರದ ಪ್ರಮುಖ ಬಂದರು ಯಾನ್​ಬು ಸೇರಿದಂತೆ ಹಲವಾರು ಕಡೆ ಹಿಗ್ಗಾಮುಗ್ಗಾ ಬಾರಿಸತೊಡಗಿದಾಗ ಸೌದಿಗಳು ಚೀನೀಯರಿಂದ ಕೊಂಡಿದ್ದ ದುಬಾರಿ ಬೆಲೆಯ ರೆಡಾರ್​ಗಳು ಯಾವ ಪ್ರಯೋಜನಕ್ಕೂ ಬರಲಿಲ್ಲ. ಅದು ಸಾಲದು ಎಂಬಂತೆ ಇರಾಕ್​ನಲ್ಲಿನ ಇರಾನ್​ಪರ ಶಿಯಾ ಭಯೋತ್ಪಾದಕರು ಹಾರಿಸಿದ ಡ್ರೋನ್ ಸೌದಿ ವಾಯುಪ್ರದೇಶದಲ್ಲಿ ನೂರಾರು ಕಿಲೋಮೀಟರ್ ಸಾಗಿಬಂದದ್ದೂ ಚೀನಿ ರೆಡಾರ್​ಗಳಿಗೆ ಕಾಣಲಿಲ್ಲ. ಅಂತಿಮವಾಗಿ ಸೌದಿಗಳಿಗೆ ಢಾಳಾಗಿ ಕಂಡದ್ದು ಕ್ಷತಿಗೊಂಡ ಆಯಕಟ್ಟಿನ ಈಸ್ಟ್-ವೆಸ್ಟ್ ಆಯಿಲ್ ಪೈಪ್​ಲೈನ್! ಚೀನಿ ಮಾಲು ಕೆಲಸಕ್ಕೆ ಬಾರದ್ದು ಎನ್ನುವುದನ್ನು ಕಳೆದ ವರ್ಷದ ‘ಆಪರೇಷನ್ ಸಿಂಧೂರ’ದಲ್ಲಿ ಪಾಕಿಸ್ತಾನವೇ ಅರಿತುಕೊಂಡು ಗೋಳಾಡಿತ್ತಲ್ಲ, ಸೌದಿಗಳಿಗೆ ಅದೂ ಕಂಡಿರಲಿಲ್ಲವೇ?

ಹೀಗೆ ಕಂಗೆಟ್ಟ ಮೇಲೆ ಸೌದಿ ಅರೇಬಿಯಾ ಮೊರೆಹೋದದ್ದು ಇಸ್ರೇಲ್ ಅನ್ನು. ಅದಕ್ಕೆ ಕಾರಣ ಅಮೆರಿಕಾದ ‘ಹಿತವಚನ’ ಎಂದು ಹೇಳಲಾಗುತ್ತದೆ. ಸೌದಿ ಪ್ರಧಾನಮಂತ್ರಿ ಎಂಬಿಎಸ್ ಇಸ್ರೇಲ್ ಮುಂದೆ ಗೋಳು ತೋಡಿಕೊಂಡದ್ದೇ ಆ ಯೆಹೂದಿ ರಾಷ್ಟ್ರವು ಸೌದಿ ಅರೇಬಿಯಾದ ಸುರಕ್ಷೆಗಾಗಿ ವಾಯು ಸುರಕ್ಷಾ ತಾಂತ್ರಿಕ ಸಹಕಾರವನ್ನು ಒದಗಿಸತೊಡಗಿದೆಯಂತೆ. ಈ ಸಹಕಾರಕ್ಕೆ ಸೌದಿಗಳು ಪ್ರತಿಯಾಗಿ ಕೊಟ್ಟದ್ದೇನು? ಯುಎನ್​ಜಿಎ ಅಧಿವೇಶನದಲ್ಲಿ ನೆತನ್ಯಾಹು ಭಾಷಣಕ್ಕೆ ಸೌದಿ ವಿದೇಶಾಂಗ ಮಂತ್ರಿ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಬೆನ್ನುಹಾಕಿ ಓಡಿದರು! ಪ್ರಧಾನಿ ಮಹಮದ್ ಬಿನ್ ಸಲ್ಮಾನ್ ಅಲ್-ಸೌದ್ (ಎಂಬಿಎಸ್) ಅವರಿಂದ ರಾಜತಾಂತ್ರಿಕವಾಗಿ ಈ ಋಣಾತ್ಮಕ ನಡೆ ಏಕೆ?

ಈಗ ಎಂಬಿಎಸ್​ರ ಇನ್ನೊಂದು ಸ್ವಹಿತಘಾತಕ ನಡೆಯತ್ತ ನೋಡೋಣ. ಉತ್ತರ ಯೆಮೆನ್​ನ ಶಿಯಾಗಳು, ದಕ್ಷಿಣ ಯೆಮೆನ್​ನ ಸುನ್ನಿಗಳು ಒಂದುಗೂಡಿ 1990ರಲ್ಲಿ ತಮ್ಮೆರಡೂ ದೇಶಗಳನ್ನು ಒಂದುಗೂಡಿಸಿ ‘ರಿಪಬ್ಲಿಕ್ ಆಫ್ ಯೆಮೆನ್’ ಅನ್ನು ಕಟ್ಟಿದರೇನೋ ಸರಿ, ಆದರೆ ಇಸ್ಲಾಂನ ಎರಡು ಪ್ರಮುಖ ವಿಭಾಗಗಳ ಜನರ ನಡುವಿನ ಒಗ್ಗಟ್ಟು ಹೆಚ್ಚುಕಾಲ ಉಳಿಯದೇ ನಾಲ್ಕೇ ವರ್ಷಗಳಲ್ಲಿ ಬಿರುಕು ಕಾಣಿಸಿಕೊಂಡು ದಿನೇದಿನೇ ಆಳವಾಗುತ್ತ ಹೋಯಿತು. ಅದಕ್ಕೆ ಮೂಲಕಾರಣ ಏಕೀಕರಣದ ನಂತರ ಯೆಮೆನ್​ನಲ್ಲಿ ವೃದ್ಧಿಸಲಾರಂಭಿಸಿದ ಸೌದಿ ಸುನ್ನಿ ವಹಾಬಿ ಪ್ರಭಾವ. ಅದರಿಂದಾಗಿ ತಮ್ಮ ಝೈದಿ ಶಿಯಾ ನಂಬಿಕೆಗಳಿಗೆ ಹಾನಿಯಾಗುತ್ತದೆಂದು ರ್ತಸಿದ ಉತ್ತರದ ಶಿಯಾಗಳ ಪ್ರಭಾವಿ ನಾಯಕ ಹುಸೇನ್ ಬದ್ರುದ್ದೀನ್ ಅಲ್-ಹೂತಿ ತಮ್ಮ ಧಾರ್ವಿುಕ ನಂಬಿಕೆಗಳ ರಕ್ಷಣೆಗಾಗಿ 1992ರಲ್ಲೇ ಅಲ್-ಶಬಾಬ್ ಅಲ್-ಮೊಮಿನ್ ಎಂಬ ಸಂಘಟನೆಯನ್ನು ಸ್ಥಾಪಿಸಿ ದೇಶದ ಸರ್ಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹೋರಾಟ ಆರಂಭಿಸಿದರು. ಮುಂದೆ ಅದೇ ಸಂಘಟನೆ ಅನ್ಸಾರಲ್ಲಾ ಎಂಬ ಹೆಸರಿನಲ್ಲಿ ಪ್ರಬಲ ಬಂಡುಕೋರ ಸೇನೆಯಾಗಿ ಬೆಳೆಯಿತು ಮತ್ತು ಹುಸೇನ್ ಬದ್ರುದ್ದೀನ್ ಅಲ್-ಹೀತಿ 2002ರಲ್ಲಿ ಸರ್ಕಾರಿ ಸೇನೆಯಿಂದ ಹತರಾದರು. ಅವರ ಅನುಯಾಯಿಗಳು ತಮ್ಮನ್ನು ಅನ್ಸಾರಲ್ಲಾ ಬದಲಿಗೆ ಮೃತ ನಾಯಕನ ಹೆಸರಿನಲ್ಲಿ ಹೂತಿಗಳು ಎಂದು ಕರೆದುಕೊಂಡು ಹೋರಾಟವನ್ನು ತೀವ್ರಗೊಳಿಸಿದರು ಮತ್ತು ಹತ್ತು ವರ್ಷಗಳ ನಂತರ 2014ರಲ್ಲಿ ರಾಜಧಾನಿ ಸನಾ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸರ್ಕಾರವನ್ನೇ ದಕ್ಷಿಣದ ಏಡನ್​ಗೆ ಎತ್ತಂಗಡಿ ಮಾಡಿಬಿಟ್ಟರು. ಹೀಗೆ ಯೆಮೆನ್​ನಲ್ಲಿ ಸೌದಿ ಪ್ರಭಾವ ಕುಗ್ಗಿ ಇರಾನ್ ಪರವಾದ ಶಿಯಾ ಹಿಡಿತ ಬಲವಾಗುತ್ತ ಹೋದದ್ದನ್ನು ಆಗ ಸೌದಿ ರಕ್ಷಣಾ ಮಂತ್ರಿಯಾಗಿದ್ದ ಎಂಬಿಎಸ್ ಸಹಿಸದೆ ಯೆಮೆನಿ ಅಂತರ್ಯುದ್ಧದಲ್ಲಿ ಮಧ್ಯಪ್ರವೇಶಿಸಿದರು. ಅಲ್ಲಿಗೆ ಹೂತಿಗಳು ಸೌದಿ ಅರೇಬಿಯಾವನ್ನು ತಮ್ಮ ಶತ್ರು ಎಂದು ಬಗೆದು ಅದರೊಂದಿಗೆ ನೇರ ಸಂಘರ್ಷಕ್ಕೆ ಮುಂದಾದರು. ಹೂತಿಗಳಿಗೆ ಕಳೆದುಕೊಳ್ಳಲು ದೊಡ್ಡದೇನೂ ಇಲ್ಲ. ಅವರಿಗೆ ದೊಡ್ಡ ನಗರಗಳಿಲ್ಲ, ಭಾರಿ ತೈಲನಿಕ್ಷೇಪಗಳಿಲ್ಲ, ತೈಲ ಸಂಸ್ಕರಣಾಗಾರಗಳಾಗಲೀ, ತೈಲ ನಿರ್ಯಾತಕ ಬಂದರುಗಳಾಗಲೀ ಇಲ್ಲ. ಅವೆಲ್ಲವೂ ಇರುವ ಸೌದಿ ಅರೇಬಿಯಾ ಪ್ರತಿದಿನವನ್ನೂ ಎಚ್ಚರಿಕೆಯಿಂದ ಕಳೆಯುವ ಸ್ಥಿತಿಯನ್ನು 2015ರಲ್ಲಿ ಕೇವಲ ಮೂವತ್ತು ವರ್ಷದವರಾಗಿದ್ದ ಎಂಬಿಎಸ್ ಹೀಗೆ ನಿರ್ವಿುಸಿಕೊಂಡುಬಿಟ್ಟರು. ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೆ ಕರೆತಂದ ನಡೆ ಇದು.

ಈ ನಡುವೆ ಎಂಬಿಎಸ್ ಮಾಡಿದ ಇನ್ನೊಂದು ತಪ್ಪೆಂದರೆ ಬಹುಕಾಲದ ಮಿತ್ರ ಯುಎಇ ಜತೆ ವಿರಸ ಕಟ್ಟಿಕೊಂಡದ್ದು. ರಾಜಧಾನಿ ಸನಾವನ್ನು ಕಳೆದುಕೊಂಡ ನಂತರ ದಕ್ಷಿಣದಲ್ಲಿ ನೆಲೆಯೂರಿದ ‘ಪ್ರೆಸಿಡೆನ್ಷಿಯಲ್ ಲಿಬರೇಷನ್ ಕೌನ್ಸಿಲ್’ (ಪೆಎಲ್​ಸಿ) ಹೂತಿಗಳನ್ನು ಎದುರಿಸುವಲ್ಲಿ ಸಮರ್ಥವಾಗಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಯುಎಇ ಮತ್ತು ಇಸ್ರೇಲ್​ಗಳೆರಡರಿಂದಲೂ ಬೆಂಬಲ ಪಡೆದ ‘ಸದರ್ನ್ ರೆಸಿಸ್ಟೆನ್ಸ್ ಕೌನ್ಸಿಲ್’ (ಎಸ್​ಆರ್​ಸಿ) ಸಂಘಟನೆ ಹಾಗೂ ಸೇನಾಶಕ್ತಿಗಳಲ್ಲಿ ಹೆಚ್ಚು ಸಕ್ಷಮವಾಗಿತ್ತು. ಆದರೆ ದೂರಗಾಮಿಯಾಗಿ ಯೆಮೆನ್​ಗೂ, ಸೌದಿಗೂ ಯಾವುದು ಅನುಕೂಲಕರ ಎನ್ನುವುದನ್ನು ಅರಿಯುವಲ್ಲಿ ಸೋತ ಎಂಬಿಎಸ್ ಪ್ರಬಲ ಎಸ್​ಆರ್​ಸಿಯನ್ನೇ ವಿರೋಧಿಸಿ ಪಿಎಲ್​ಸಿಗೇ ಅಂಟಿಕೊಂಡು ನಿಂತರು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ ಇದೇ ಫೆಬ್ರವರಿಯಲ್ಲಿ ಎಸ್​ಆರ್​ಸಿ ಠಿಕಾಣಿಗಳ ಮೇಲೇ ಸೌದಿ ವಾಯುಸೇನೆ ದಾಳಿಮಾಡಿತು. ಹಾಗೆ ಮಾಡುವಲ್ಲಿ ಘನಿಷ್ಟ ಮಿತ್ರದೇಶ ಯುಎಇ ಜತೆಗೇ ವಿರಸ ಕಟ್ಟಿಕೊಂಡು ಸುನ್ನಿ ಅರಬ್ ಪಾಳಯದಲ್ಲೇ ಒಡಕು ಮೂಡಿಸಲೂ ಎಂಬಿಎಸ್ ಹಿಂಜರಿಯಲಿಲ್ಲ. ಬೇಸತ್ತ ಯುಎಇ ಯೆಮೆನ್​ನಿಂದಲೇ ಹೊರನಡೆಯಿತು. ಹೀಗೆ ಪ್ರಬಲ ಪ್ರತಿಸ್ಪರ್ಧಿ ಎಸ್​ಆರ್​ಸಿ ಕುಸಿದದ್ದೇ ಹೂತಿಗಳ ಉಮೇದು ಉಗ್ರಗೊಂಡು ಯೆಮೆನ್​ನ ಕೆಂಪು ಸಮುದ್ರ ತೀರ ಮತ್ತು ಬಾಬ್ ಅಲ್-ಮಂದೇಬ್ ಜಲಸಂಧಿಯನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡು. ಜತೆಗೆ ಸೌದಿ ಅರೇಬಿಯಾ ಮೇಲೂ ಹಿಗ್ಗಾಮುಗ್ಗಾ ಮಿಸೈಲ್ ಮತ್ತು ಡ್ರೋನ್ ದಾಳಿಗಳು. ನಂಬಿಗಸ್ತ ಅರಬ್ ಸಹಯೋಗಿ ಯುಎಇ ಅನ್ನು ದೂರಮಾಡಿಕೊಂಡು ಅರಬ್ ಅಲ್ಲದ ತುರ್ಕಿಯೇ ಮತ್ತು ಪಾಕಿಸ್ತಾನಗಳ ತೆಕ್ಕೆಗೆ ಸೇರಿದ ಎಂಬಿಎಸ್ ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಆ ದೇಶಗಳೊಂದಿಗೆ ಅವರು ತಿಂಗಳ ಹಿಂದೆ ಕಟ್ಟಿಕೊಂಡ ‘ಮಕ್ಕಾ ರಕ್ಷಣಾ ಕೂಟ’ ತುರ್ಕಿಯೇ ಸಂಸತ್​ನಿಂದ ಇನ್ನೂ ಅನುಮೋದನೆಗೊಂಡಿಲ್ಲದ ಕಾರಣ ತಮ್ಮ ದೇಶ ಸೌದಿ ಅರೇಬಿಯಾದ ಪರವಾಗಿ ಈಗಲೇ ಹೂತಿಗಳೊಂದಿಗೆ ಘರ್ಷಣೆಗಿಳಿಯಲಾಗದು ಎಂದು ತುರ್ಕಿಯೇ ಸಂಸತ್​ನ ಅಧ್ಯಕ್ಷ ಸಬೂಬು ಹೇಳಿದರೆ, ಪಾಕಿಸ್ತಾನಿ ಸೇನೆ ‘ಏಕ್ ದೂಜೆ ಕೆ ದಿಲ್ ಹೋ ಜಾನ್’ ಎಂಬ ನಾಲ್ಕೂವರೆ ನಿಮಿಷದ ಹಾಡನ್ನು ರಚಿಸಿ ಹಾಡಿ ವಿಡಿಯೋ ಮಾಡಿ ಎಂಬಿಎಸ್​ಗೆ ಕಳುಹಿಸಿದೆ! ಕಟ್ಟಾ ಇಸ್ಲಾಮಿಕ್ ಮೂಲಭೂತವಾದಿ ಸೌದಿ ಅರೇಬಿಯಾದಲ್ಲಿ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ ಎಂಬಿಎಸ್​ಗೆ ಈ ಸಂಗೀತದ ವಿಡಿಯೋ ಸಾಕು, ಸೈನಿಕರಿಗೇನು ಕೆಲಸ ಅಲ್ಲಿ ಎಂದು ಮಿತ್ರವತ್ಸಲ ಪಾಕಿಗಳು ತಮ್ಮದೇ ವಿಶೇಷ ಛಾಪಿನ ‘ಭಾಯಿಚಾರಾ’ ತೋರಿಸುತ್ತಿದ್ದಾರೆ. ಯಾರಿಗೆ ಯಾರುಂಟು, ಎರವಿನ ರಕ್ಷಣಾ ಕೂಟ!

1956-57ರಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿದ್ದ ಎಚ್.ಎಸ್.ಸುಹ್ರವರ್ದಿ ಇಸ್ಲಾಮಿಕ್ ಮುಖ್ಯವಾಗಿ ಅರಬ್ ರಾಷ್ಟ್ರಗಳ ಶಕ್ತಿಸಾಮರ್ಥ್ಯವನ್ನು ಹೀಗಳೆಯುತ್ತ ‘0+0+0=0’ ಅಂದಿದ್ದರು! ಪಾಕಿಸ್ತಾನವೂ ಈಗ ಸೊನ್ನೆಯೇ ಎನ್ನುವುದನ್ನು ಇಂದಿನ ಪಾ(ತ)ಕಿ ನಾಯಕರು ತೋರಿಸುತ್ತಿದ್ದಾರೆ.

ಕೊನೇ ಕುಟುಕು- ಪ್ರಧಾನಿ ಸುಹ್ರವರ್ದಿ ಹಾಗೆ ಜರೆದಾಗ ಅರಬ್ ದೇಶಗಳು ಮುನಿಸು ತೋರಿದ್ದವು, ಈಜಿಪ್ತ್​ನ ಅಧ್ಯಕ್ಷ ನಾಸೆರ್ ಅಂತೂ ಕೆಂಡಾಮಂಡಲವಾಗಿ, ಪಾಕಿಸ್ತಾನದ ಜತೆ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗಾಣಿಸುವವರೆಗೂ ಹೋಗಿದ್ದರು. ಈಗ ಸೌದಿ ಅರೇಬಿಯಾ, ತುರ್ಕಿಯೇ ಮತ್ತು ಪಾಕಿಸ್ತಾನಗಳು ಮಾಡಿಕೊಂಡಿರುವ ‘ಮಕ್ಕಾ ರಕ್ಷಣಾ ಒಪ್ಪಂದ’ಕ್ಕೆ ಈಜಿಪ್್ತ ಸಹ ಸೇರಬೇಕೆಂದು ಎಂಬಿಎಸ್ ಆಹ್ವಾನಿಸಿದ್ದರು. ಇತ್ತೀಚಿನ ಸುದ್ದಿಗಳ ಪ್ರಕಾರ ತುರ್ಕಿಯೇನ ಪರಂಪರಾಗತ ಶತ್ರುಗಳಾದ ಗ್ರೀಸ್ ಮತ್ತು ಸೈಪ್ರಸ್​ಗಳ ಜತೆ ರಕ್ಷಣಾಸಹಯೋಗ ಸ್ಥಾಪಿಸಿಕೊಳ್ಳಲು ಈಜಿಪ್್ತ ಮಾತುಕತೆಗೆ ಮುಂದಾಗಿದೆಯಂತೆ! ಇಸ್ಲಾಮಿಕ್/ಅರಬ್ ರಾಷ್ಟ್ರಗಳಲ್ಲಿ ಇನ್ನೊಂದು ಸೊನ್ನೆ!

-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net