'ಸ್ಟಾಲಿನ್​ ಸರ್​​ ಬಾಯ್ಬಿಡಿ, ಇದ್ರಲ್ಲೂ AIADMK ಜೊತೆ ರಾಜಿನಾ?'; ವೀರಮಣಿ POCSO ಕೇಸ್​ನಲ್ಲಿ DMK ಮೌನದ ವಿರುದ್ಧ ಸಿಎಂ ವಿಜಯ್ ಕಿಡಿ

'ಸ್ಟಾಲಿನ್​ ಸರ್​​ ಬಾಯ್ಬಿಡಿ, ಇದ್ರಲ್ಲೂ AIADMK ಜೊತೆ ರಾಜಿನಾ?'; ವೀರಮಣಿ POCSO ಕೇಸ್​ನಲ್ಲಿ DMK ಮೌನದ ವಿರುದ್ಧ ಸಿಎಂ ವಿಜಯ್ ಕಿಡಿ
Published on: 
  • ಗ್ರಾನೈಟ್​ ಉದ್ಯಮಿ ಪೋಕ್ಸೋ ಕೇಸ್ ವಿಚಾರದಲ್ಲಿ ಡಿಎಂಕೆ ಮೌನ?

  • ಮಾಜಿ ಸಿಎಂ ಸ್ಟಾಲಿನ್​ ವಿರುದ್ಧ ಹಾಲಿ ಸಿಎಂ ವಿಜಯ್​ ವಾಗ್ದಾಳಿ

  • ಎಐಎಡಿಎಂಕೆ, ಡಿಎಂಕೆ ನಾಯಕರು ಮಾತನಾಡದಿರಲು ರಾಜಿ ಮಾಡಿಕೊಂಡಿದ್ದೀರಾ ಎಂದು ಪ್ರಶ್ನೆ

ತೇನಂ ಪೇಟೆಯ ಗೆಸ್ಟ್​​ ಹೌಸ್​ನಲ್ಲಿ ಬಡ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಚೆನ್ನೈನ ಗ್ರಾನೈಟ್​ ಉದ್ಯಮಿ ಹಾಗೂ ಜೆಮ್​ ಗ್ರೂಪ್​ನ ವೀರಮಣಿಯನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಏನೂ ಮಾತನಾಡದೆ ಮೌನವಾಗಿರುವ ಡಿಎಂಕೆ ಹಾಗೂ ಎಐಎಡಿಎಂಕೆ ವಿರುದ್ಧ ಸಿಎಂ ಸಿ. ಜೋಸೆಫ್​ ವಿಜಯ್ ಕಿಡಿಕಾರಿದ್ದಾರೆ. 'ಸ್ಟಾಲಿನ್​ ಸರ್ ಮಾತನಾಡಿ, ಯಾಕಾಗಿ ಸುಮ್ಮನಿದ್ದೀರಿ' ಎಂದು ಗುಡುಗಿದ್ದಾರೆ.

ಅಕ್ಟೋಬರ್​​​ 6ರಂದು ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ದಿನಾಂಕ ಫಿಕ್ಸ್​ ಮಾಡಲಾಗಿದೆ. ಈ ಪ್ರಚಾರದ ವೇಳೆ ಮಾತನಾಡಿದ ಅವರು, ಗ್ರಾನೈಟ್ ಉದ್ಯಮಿ ವೀರಮಣಿ ಭಾಗಿಯಾಗಿದ್ದಾರೆನ್ನಲಾದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂದಿನ ಡಿಎಂಕೆ ಸರ್ಕಾರ ಸಂಪೂರ್ಣವಾಗಿ ಮುಚ್ಚಿಹಾಕಿತ್ತು ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ.

ಏನಿದು ಕೇಸ್​​?

​ಅಕ್ಟೋಬರ್ 2025 ರಲ್ಲಿ ಬಾಲಕರ ಹಕ್ಕುಗಳ ಹೋರಾಟಗಾರರೊಬ್ಬರು ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯದ ವೀಡಿಯೊ ತುಣುಕನ್ನೊಳಗೊಂಡ ಪೆನ್ ಡ್ರೈವ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಡಿಎಂಕೆ ಆಡಳಿತಾವಧಿಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ನೆಪವೊಡ್ಡಿ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು.

​ಆದರೆ, ನೂತನ ಟಿವಿಕೆ ಸರ್ಕಾರದ ಅವಧಿಯಲ್ಲಿ ವಿಶೇಷ ಪೋಕ್ಸೊ ನ್ಯಾಯಾಲಯವು ಈ 'ಬಿ-ರಿಪೋರ್ಟ್' ಅನ್ನು ತಿರಸ್ಕರಿಸಿ, ಮರು ತನಿಖೆಗೆ ಆದೇಶಿಸಿತು. ತನಿಖೆ ಚುರುಕುಗೊಳಿಸಿದ ಪೊಲೀಸರು ಪ್ರಮುಖ ಆರೋಪಿ ವೀರಮಣಿಯನ್ನು ಬಂಧಿಸಿದ್ದು, ಸಂತ್ರಸ್ತೆಯನ್ನು ಪತ್ತೆಹಚ್ಚಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗೆ ನೆರವು ನೀಡಿದ ಆರೋಪದ ಮೇಲೆ ಶಾಂತಿ ಮತ್ತು ಮಹೇಂದ್ರ ಸಿಂಹನ್ ವಿರುದ್ಧವೂ ತನಿಖೆ ವಿಸ್ತರಿಸಲಾಗಿದೆ.

ವಿಜಯ್​ ಏನಂದ್ರು?

'ಸ್ಟಾಲಿನ್​ ಸರ್ ಜನರು, ಉದ್ಯಮಿ ವೀರಮಣಿ​ ಲೈಂಗಿಕ ದೌರ್ಜನ್ಯ ಕೇಸ್​​ ಬಗ್ಗೆ ಉತ್ತರ ಕೇಳುತ್ತಿದ್ದಾರೆ. ಬಾಯ್ಬಿಟ್ಟು ಮಾತನಾಡಿ. ನಿಮ್ಮೊಂದಿಗೆ ಸೇರಿ ಎಐಎಡಿಎಂಕೆ ನಾಯಕರು ಸಹ ಬಾಯಿ ಬಿಡುತ್ತಿಲ್ಲ. ಈ ವಿಚಾರದಲ್ಲಿಯೂ ಎರಡೂ ಪಕ್ಷದ ನಾಯಕರು ಮಾತನಾಡಬಾರದು ಎಂದು ರಾಜಿ ಮಾಡಿಕೊಂಡಿದ್ದೀರಾ?' ಎಂದು ಲೇವಡಿ ಮಾಡಿದ್ದಾರೆ.

'ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗಲೂ ನಾನು ಸಹಿಸಿಕೊಂಡಿದ್ದೆ. ಆದರೆ ತಮಿಳುನಾಡಿನ ನನ್ನ ಅಕ್ಕ-ತಂಗಿಯರು ಮತ್ತು ತಾಯಂದಿರ ಬಗ್ಗೆ ಆಕ್ಷೇಪಾರ್ಹ ಹಾಗೂ ಅಶ್ಲೀಲವಾಗಿ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ' ಎಂದು ವಿಜಯ್ ಗುಡುಗಿದ್ದಾರೆ.

​ಡಿಎಂಕೆ ಹಾಗೂ ಎಂ.ಕೆ. ಸ್ಟಾಲಿನ್‌ ಸ್ಪಷ್ಟನೆ

ನಮ್ಮ ಪಕ್ಷವು ಆಡಳಿತದಲ್ಲಿದ್ದಾಗ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಗ್ರಾನೈಟ್ ಉದ್ಯಮಿಯನ್ನು ರಕ್ಷಿಸುವ ಪ್ರಯತ್ನ ಮಾಡಿಲ್ಲ ಎಂದು ಸಿಎಂ ವಿಜಯ್​ ಅವರ ಸಾಲು ಸಾಲು ಆರೋಪಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಟಾಂಗ್​ ಕೊಟ್ಟಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net