VB-G-RAM-G ಕಾಯ್ದೆ; ಗ್ರಾಮೀಣಾಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ: ಟೀಕೆಗಳನ್ನು ತಳ್ಳಿಹಾಕಿದ ಕೇಂದ್ರ!

VB-G-RAM-G Act
VB-G-RAM-G Act
Published on
ನವದೆಹಲಿ: ಗ್ರಾಮೀಣ ಭಾರತದ ಆರ್ಥಿಕ ಚೌಕಟ್ಟನ್ನು ಮರುರೂಪಿಸುವ ಉದ್ದೇಶದ 'ವಿಕ್ಷಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಅಥವಾ VB-G-RAM-G ಕಾಯ್ದೆಯ ಕುರಿತಾದ ಟೀಕೆಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಹೊಸ ಕಾಯ್ದೆಯು ಕೇವಲ ಸಾಂಕೇತಿಕ ಬದಲಾವಣೆಯಲ್ಲ, ಬದಲಿಗೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗ್ರಾಮೀಣ ಕಾರ್ಮಿಕರ ಘನತೆಯನ್ನು ಹೆಚ್ಚಿಸುವ ದೀರ್ಘಕಾಲೀನ ಕಲ್ಯಾಣ ವಾಸ್ತುಶಿಲ್ಪವಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಉದ್ಯೋಗ ಖಾತರಿ ಮತ್ತು ಸುಧಾರಿತ ನಿಯಮಗಳು

ಈ ಕಾಯ್ದೆಯಡಿ ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ರಾಜ್ಯಗಳು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಮಿತಿಯನ್ನು ಇನ್ನಷ್ಟು ವಿಸ್ತರಿಸಲು ಅವಕಾಶವಿದೆ. 15 ದಿನಗಳಲ್ಲಿ ಕೆಲಸ ಒದಗಿಸದಿದ್ದರೆ 'ನಿರುದ್ಯೋಗ ಭತ್ಯೆ' ನೀಡುವ ಮೂಲಕ ಕಾರ್ಮಿಕರ ಕಾನೂನು ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ವೈಜ್ಞಾನಿಕ ಕೆಲಸದ ವಿರಾಮ ಮತ್ತು ರಾಜ್ಯಗಳ ಅಧಿಕಾರ

ಕೃಷಿ ಚಟುವಟಿಕೆಗಳ ಗರಿಷ್ಠ ಅವಧಿಯಲ್ಲಿ (Peak Season) ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 60 ದಿನಗಳ ಕೆಲಸದ ವಿರಾಮವನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಶರದ್ ಪವಾರ್ ಅವರಂತಹ ನಾಯಕರು ಸಹ ಇಂತಹ ರಜೆ ಅವಧಿಯ ಅಗತ್ಯವನ್ನು ಪ್ರತಿಪಾದಿಸಿದ್ದರು. ಈ 60 ದಿನಗಳನ್ನು ಬಿತ್ತನೆ ಅಥವಾ ಕೊಯ್ಲು ಅವಧಿಗೆ ಅನುಗುಣವಾಗಿ ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೇ ನೀಡಲಾಗಿದೆ.

ಹಣಕಾಸಿನ ಶಿಸ್ತು ಮತ್ತು ಪಾರದರ್ಶಕತೆ

ಪಿ. ಚಿದಂಬರಂ ಅವರಂತಹ ಮಾಜಿ ಸಚಿವರು ಈ ಹಿಂದೆ ಪ್ರತಿಪಾದಿಸಿದ್ದಂತೆ, ರಾಜ್ಯಗಳು ವೆಚ್ಚದ ನಿರ್ದಿಷ್ಟ ಪಾಲನ್ನು ಭರಿಸುವುದರಿಂದ ಯೋಜನೆಯಲ್ಲಿ 'ಮಾಲೀಕತ್ವದ ಭಾವನೆ' ಹೆಚ್ಚುತ್ತದೆ. ಇದರಿಂದ ಸ್ವತ್ತುಗಳ ನಿರ್ವಹಣೆ ಮತ್ತು ಯೋಜನೆಯ ಜಾರಿಯಲ್ಲಿ ರಾಜ್ಯಗಳ ಹೊಣೆಗಾರಿಕೆ ಹೆಚ್ಚಲಿದೆ ಎಂದು ಹೇಳಿದೆ

ಪ್ರಮುಖ ತಾಂತ್ರಿಕ ಸುಧಾರಣೆಗಳು

ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್: ಪೂರೈಕೆ ಆಧಾರಿತ ವ್ಯವಸ್ಥೆಯ ಮೂಲಕ ಗ್ರಾಮ ಪಂಚಾಯತ್ ಮಟ್ಟದ ಯೋಜನೆಗಳನ್ನು ರಾಷ್ಟ್ರೀಯ ದತ್ತಾಂಶದೊಂದಿಗೆ ವಿಲೀನಗೊಳಿಸಲಾಗುತ್ತದೆ.
ನೇರ ನಗದು ವರ್ಗಾವಣೆ (DBT): ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (NeFMS) ಮೂಲಕ ವೇತನ ನೇರವಾಗಿ ಕಾರ್ಮಿಕರ ಖಾತೆಗೆ ಜಮೆಯಾಗುತ್ತದೆ.
ಹಳೆ ಫಲಾನುಭವಿಗಳ ತಡೆ: ಬಯೋಮೆಟ್ರಿಕ್ ಹಾಜರಾತಿ ಮತ್ತು ಇಂಡಿಯಾ-ಸ್ಟ್ಯಾಕ್ ಏಕೀಕರಣದಿಂದಾಗಿ 'ಹಳೆ ಫಲಾನುಭವಿಗಳ' ಹೆಸರಿನಲ್ಲಿ ಆಗುತ್ತಿದ್ದ ಹಣದ ಸೋರಿಕೆ ತಪ್ಪಲಿದೆ.

ಬಡತನ ಇಳಿಕೆ ಮತ್ತು ಆಧುನೀಕರಣ

ಗ್ರಾಮೀಣ ಬಡತನವು 2011-12ರಲ್ಲಿ ಶೇ. 25.7ರಷ್ಟಿದ್ದದ್ದು 2023-24ರ ವೇಳೆಗೆ ಶೇ. 4.86ಕ್ಕೆ ಇಳಿದಿರುವುದು ಗ್ರಾಮೀಣ ಉದ್ಯೋಗ ಮಾದರಿಯನ್ನು ಪುನರ್ರಚಿಸುವ ಅಗತ್ಯವನ್ನು ಸೂಚಿಸುತ್ತದೆ. ಜಾಬ್ ಕಾರ್ಡ್‌ಗಳ ದುರುಪಯೋಗ ತಡೆಯಲು ಆಧಾರ್ ಸೀಡಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಹೇಳಿದೆ.

ಟೀಕೆಗಳಿಗೆ ಸ್ಪಷ್ಟನೆ

ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದರಿಂದ "ನೈತಿಕ ಅಧಿಕಾರ" ಕುಂದುತ್ತದೆ ಎಂಬುದು ಕೇವಲ ವ್ಯಕ್ತಿನಿಷ್ಠ ಅಭಿಪ್ರಾಯವಾಗಿದೆ. ಕಾಯ್ದೆಯ ಮೂಲ ಉದ್ದೇಶಗಳಾದ ಉದ್ಯೋಗ ಭದ್ರತೆ ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆಗಳು ಬದಲಾಗಿಲ್ಲ. ವೇತನ ದರಗಳನ್ನು ಚಾಲ್ತಿ ದರಕ್ಕಿಂತ ಕಡಿಮೆ ಇರದಂತೆ ನೋಡಿಕೊಳ್ಳಲು ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೇಂದ್ರಕ್ಕೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net