

ಬೆಂಗಳೂರು ಜನಸಂಖ್ಯೆ, ಶಾಸಕರ ವಲಸೆ ಕುರಿತು ಸಿಎಂ ಡಿಕೆ ಶಿವಕುಮಾರ್ ಮಾತು.
ಬೆಂಗಳೂರಿಗೆ ಬಂದ ಶಾಸಕರು ಎರಡು ಮದುವೆ ಆಗಿದ್ದಾರೆ, ಪಟ್ಟಿ ಕೊಡ್ತೇನೆ ಎಂದ ಸಿಎಂ
ಡಿಕೆಶಿ ಹೇಳಿಕೆ ಅನಾವಶ್ಯಕ ಎಂದ ಆರ್ ಅಶೋಕ್, ಹೆಸರು ಬಹಿರಂಗಪಡಿಸಲು ಆಗ್ರಹ.
'ಬೆಂಗಳೂರಿಗೆ ಬರುವ ನಮ್ಮ ಶಾಸಕರು ವಾಪಸ್ ತಮ್ಮ ಊರಿಗೆ ಹೊರಡುತ್ತಿಲ್ಲ. ಬಂದವರೆ ಎರಡೆರಡು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಿ ಬೇಕಿದ್ರೆ ಕೊಡ್ತೇನೆ' ಎಂದು ಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಟ್ಟು ಹಾಕಿದೆ.
ವಿಧಾನಸಭೆಯ ಕಲಾಪದಲ್ಲಿ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನೀರಿನ ಸಮಸ್ಯೆ, ನಗರೀಕರಣದ ಬಗ್ಗೆ ಮಾತನಾಡುವ ವೇಳೆ ಶಾಸಕರು ಎರೆಡೆರಡು ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುತ್ತಿರುವ ಬಗ್ಗೆ ಹೇಳಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಬೆಂಗಳೂರಿಗೆ ಬರುವ ಜನರು ವಾಪಸ್ ಅವರವರ ಊರುಗಳಿಗೆ ಹೋಗ್ತಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಅವರು, ಬೆಂಗಳೂರಿಗೆ ಬರುವ ಎಂಎಲ್‌ಎಗಳು ವಾಪಸ್ ಹೋಗುವುದಿಲ್ಲ. ಬಂದವರೆಲ್ಲರೂ ಎರಡು ಮದುವೆ ಮಾಡಿಕೊಂಡಿದ್ದಾರೆ. ಇಂತಹ ಡಜನ್ ಉದಾಹರಣೆಗಳಿವೆ. ಅದಕ್ಕೆ ಪಟ್ಟಿಯನ್ನು ಸಹ ನಾನು ಕೊಡಬಲ್ಲೆ. ನನಗೆ 40 ವರ್ಷ ಅನುಭವ ಇದೆ. ನಾನು ಯಾರ್ಯಾರು ಬೆಂಗಳೂರು ಬಿಟ್ಟು ಹೋಗ್ತಿಲ್ಲ ಎನ್ನುವ ಉದಾಹರಣೆ ಕೊಡ್ತೇನೆ' ಎಂದು ಹೇಳಿದರು.
'ಬೆಂಗಳೂರಿಗೆ ಬರುವ ವಕೀಲರು ಸಹ ತಮ್ಮ ಊರಿಗೆ ತೆರಳುತ್ತಿಲ್ಲ. ಬಂದೋರು ಯಾರು ಬೆಂಗಳೂರನ್ನು ಬಿಟ್ಟು ಹೋಗ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗ್ತಾನೆ ಇದೆ. ಶೇಕಡಾ 33 ಇದ್ದ ಬೆಂಗಳೂರಿನ ಜನಸಂಖ್ಯೆ ಈಗ ರಿಂದ ಶೇಕಡಾ.47ಕ್ಕೆ ಏರಿದೆ. ಇದಕ್ಕೆ ವಲಸಿಗರೇ ಕಾರಣ' ಎಂದು ಹೇಳಿದರು.
ಮುಂದುವರೆದು, 'ಧಾರವಾಡ ಮತ್ತು ದಕ್ಷಿಣ ಕನ್ನಡ, ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರ ಹೆಸರನ್ನು ಹೇಳಬಲ್ಲೆ' ಎಂಬ ಸುಳಿವನ್ನು ಡಿಕೆಶಿ ನೀಡಿದರಾದರೂ, ಸದನದಲ್ಲಿ ಯಾರ ಹೆಸರನ್ನೂ ಬಹಿರಂಗಪಡಿಸಲಿಲ್ಲ. ಹೀಗಾಗಿ ಬಿಜೆಪಿ ನಾಯಕರು ಕಿಡಿಕಾರಿದರು. ಹೆಸರುಗಳನ್ನು ಉಲ್ಲೇಖಿಸಿ ಎಂದು ಪಟ್ಟು ಹಿಡಿದರು.
'ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು. ಸಿಎಂ ಡಿಕೆ ಶಿವಕುಮಾರ್ ಹೇಳಿಕೆಯು ಅನಾವಶ್ಯಕ. ಯಾರು ಎರಡು ಮದುವೆ ಮಾಡಿಕೊಂಡಿದ್ದಾರೋ ಪಟ್ಟಿ ಕೊಡಿ. ಸಿಎಂಗೆ ಧೈರ್ಯ ಇದ್ದರೆ ಹೆಸರು ಉಲ್ಲೇಖ ಮಾಡಲಿ. ಸಿಎಂ ಅವರು ಕೊಟ್ಟ ಈ ಹೇಳಿಕೆ ಬೆಂಗಳೂರಿಗೆ ಬಂದು ನೆಲೆಸಿರುವ ಎಲ್ಲ ಶಾಸಕರ ಮೇಲೂ ಅನಗತ್ಯ ಅನುಮಾನ ಮೂಡುವಂತೆ ಮಾಡಿದೆ' ಎಂದು ಕಿಡಿಕಾರಿದರು.
ಹಿರಿಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮಾತನಾಡಿ, 'ಡಿಕೆ ಶಿವಕುಮಾರ್ ಅವರ ಈ ಹೇಳಿಕೆಯಿಂದಾಗಿ ಸದ್ಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಅನಾರೋಗ್ಯಕರ ಕುತೂಹಲ ಉಂಟಾಗುತ್ತದೆ. ಡಿಕೆಶಿ ಇದನ್ನು ಕೇವಲ ಹಾಸ್ಯಕ್ಕಾಗಿ ಹೇಳಿದ್ದರೂ ಕೂಡ, ವಿಧಾನಸಭೆಯಂತಹ ಪವಿತ್ರ ಸದನದಲ್ಲಿ ಇಂತಹ ಹೇಳಿಕೆ ನೀಡುವುದು ಒಪ್ಪಿತವಲ್ಲ. ಶಾಸಕರ ಹೆಸರು ಉಲ್ಲೇಖಿಸಿ' ಎಂದು ಪಟ್ಟು ಹಿಡಿದರು, (ಏಜೆನ್ಸೀಸ್).