ಬೇಕಿಂಗ್ ಇಲ್ಲ, ಮೊಟ್ಟೆಯೂ ಇಲ್ಲ! ಕೇವಲ 15 ನಿಮಿಷಗಳಲ್ಲಿ ಮಾಡಿ ರಿಚ್ ಇಟಾಲಿಯನ್ ತಿರಮಸು.. Tiramisu Recipe

Tiramisu Recipe  ಸಾಂದರ್ಭಿಕ ಚಿತ್ರ
Tiramisu Recipe ಸಾಂದರ್ಭಿಕ ಚಿತ್ರ
Published on
Tiramisu Recipe: ವೀಕೆಂಡ್ ಪಾರ್ಟಿ ಇರಲಿ ಅಥವಾ ದಿಢೀರ್ ಮನೆಗೆ ಬರುವ ಅತಿಥಿಗಳಿಗೆ ವಿಶೇಷವಾದದ್ದನ್ನು ನೀಡಬೇಕಿರಲಿ, ಎಲ್ಲರ ಮನಗೆಲ್ಲಲು ಇಟಾಲಿಯನ್ ಶೈಲಿಯ ಈ ಸಿಹಿ ತಿಂಡಿಗಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿಲ್ಲ. ಬೇಕಿಂಗ್ ಮಾಡುವ ಜಂಜಾಟವಿಲ್ಲದೆ, ಕೇವಲ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದಾದ ಈ ಡೆಸಾರ್ಟ್​ ಪ್ರತಿ ಕಾಫಿ ಪ್ರೇಮಿಯ ನೆಚ್ಚಿನ ಲಿಸ್ಟ್‌ನಲ್ಲಿ ಇರಲೇಬೇಕು. ಮೃದುವಾದ ಕ್ರೀಮ್ ಹಾಗೂ ಕಾಫಿಯ ಅದ್ಭುತ ಸಮ್ಮಿಶ್ರಣ ಹೊಂದಿರುವ, ಮೊಟ್ಟೆ ಬಳಸದೆ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ರಿಚ್ ಇಟಾಲಿಯನ್ ತಿರಮಸು ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು

* 1 ಕಪ್ ವಿಪ್ಪಿಂಗ್ ಕ್ರೀಮ್
* 1 ಕಪ್ ಮಸ್ಕಾರ್ಪೋನ್ ಚೀಸ್
* 1/2 ಕಪ್ ಸಕ್ಕರೆ ಪುಡಿ
* 1 ಟೀಚಮಚ ವೆನಿಲ್ಲಾ ಎಸೆನ್ಸ್
* 2 ಚಮಚ ಇನ್‌ಸ್ಟಂಟ್ ಕಾಫಿ ಪುಡಿ
* 1 ಕಪ್ ಬಿಸಿ ನೀರು
* 15-20 ಲೇಡಿಫಿಂಗರ್ ಬಿಸ್ಕತ್ತುಗಳು
* ಕೋಕೋ ಪೌಡರ್

ತಯಾರಿಸುವ ವಿಧಾನ

ಮೊದಲು ಒಂದು ಕಪ್ ಬಿಸಿ ನೀರಿಗೆ 2 ಚಮಚ ಕಾಫಿ ಪುಡಿ ಮತ್ತು 1 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿ, ಅದನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಿ.
ನಂತರ ಒಂದು ಬೌಲ್‌ನಲ್ಲಿ ತಣ್ಣಗಿರುವ ವಿಪ್ಪಿಂಗ್ ಕ್ರೀಮ್, ಸಕ್ಕರೆ ಪುಡಿ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್​ ಮಾಡಿ ಕ್ರೀಮ್​ ಗಟ್ಟಿಯಾಗುವವರೆಗೂ ಚೆನ್ನಾಗಿ ಬೀಟ್​ ಮಾಡಿ. ನಂತರ ಅದಕ್ಕೆ ಮಸ್ಕಾರ್ಫೋನ್​ ಚೀಸ್​ ಸೇರಿಸಿ ಮೃದುವಾಗಿ ಮಿಕ್ಸ್​ ಮಾಡಿಕೊಳ್ಳಿ.
ಈಗ ಒಂದು ಚೌಕಾಕಾರದ ಗಾಜಿನ ಪಾತ್ರೆ ಅಥವಾ ಟ್ರೇ ತೆಗೆದುಕೊಳ್ಳಿ. ಲೇಡಿಫಿಂಗರ್ ಬಿಸ್ಕತ್ತುಗಳನ್ನು ತಯಾರಿಸಿಟ್ಟುಕೊಂಡ ಕಾಫಿ ಕಷಾಯದಲ್ಲಿ ಕೇವಲ 1-2 ಸೆಕೆಂಡ್ ಅದ್ದಿ ತಕ್ಷಣ ತೆಗೆದು ಟ್ರೇಯ ತಳಭಾಗದಲ್ಲಿ ಸಾಲಾಗಿ ಜೋಡಿಸಿಕೊಳ್ಳಿ.
ಜೋಡಿಸಿದ ಬಿಸ್ಕತ್‌ಗಳ ಮೇಲೆ ಸಿದ್ಧಪಡಿಸಿದ ಕ್ರೀಮ್ ಮಿಶ್ರಣದ ಅರ್ಧದಷ್ಟು ಭಾಗವನ್ನು ಹಾಕಿ ಸಮನಾಗಿ ಹರಡಿ. ನಂತರ ಅದರ ಮೇಲೆ ಕಾಫಿಯಲ್ಲಿ ಅದ್ದಿದ ಬಿಸ್ಕತ್‌ಗಳ ಎರಡನೇ ಲೇಯರ್ ಜೋಡಿಸಿ. ಕೊನೆಯದಾಗಿ ಉಳಿದ ಕ್ರೀಮ್ ಅನ್ನು ಅದರ ಮೇಲೆ ಹಾಕಿ ಮೇಲ್ಭಾಗವನ್ನು ನಯಗೊಳಿಸಿಕೊಳ್ಳಿ.
ಈ ಪಾತ್ರೆಯನ್ನು ಪ್ಲಾಸ್ಟಿಕ್ ರಾಪ್‌ನಿಂದ ಮುಚ್ಚಿ ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಸರ್ವ್ ಮಾಡುವ ಮುನ್ನ ಮೇಲ್ಭಾಗಕ್ಕೆ ಜರಡಿಯ ಸಹಾಯದಿಂದ ಕೋಕೋ ಪೌಡರ್ ಅನ್ನು ಲಘುವಾಗಿ ಉದುರಿಸಿ, ಚೌಕಾಕಾರವಾಗಿ ಕಟ್ ಮಾಡಿ ತಣ್ಣಗಿರುವಾಗಲೇ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net