ಸಂಪಾದಕೀಯ: ಭಯಾನಕ ಮಾಫಿಯಾ

ಪಂಜಾಬ್​ನ ಮಾನ್ಸಾದಲ್ಲಿ ಮಾದಕದ್ರವ್ಯ ಜಾಲವನ್ನು ಬಯಲಿಗೆಳೆಯಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಪರ್ವಿುಂದರ್ ಸಿಂಗ್ ಝೆೊಟಾ ಅವರನ್ನು ಮಂಗಳವಾರದಂದು ಹಾಡಹಗಲೇ, ಫೇಸ್​ಬುಕ್ ಲೈವ್ ನಡೆಯುತ್ತಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.
ಸಂಪಾದಕೀಯ: ಭಯಾನಕ ಮಾಫಿಯಾ
Published on: 

ಪಂಜಾಬ್​ನ ಮಾನ್ಸಾದಲ್ಲಿ ಮಾದಕದ್ರವ್ಯ ಜಾಲವನ್ನು ಬಯಲಿಗೆಳೆಯಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಪರ್ವಿುಂದರ್ ಸಿಂಗ್ ಝೆೊಟಾ ಅವರನ್ನು ಮಂಗಳವಾರದಂದು ಹಾಡಹಗಲೇ, ಫೇಸ್​ಬುಕ್ ಲೈವ್ ನಡೆಯುತ್ತಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಕಾನೂನು-ಸುವ್ಯವಸ್ಥೆಯ ಮೂಗು ಮುರಿದು, ಸಾರ್ವಜನಿಕವಾಗಿ ನಡೆಯುತ್ತಿರುವ ಈ ದುಷ್ಕೃತ್ಯಗಳು ಡ್ರಗ್ಸ್ ಮಾಫಿಯಾದ ಭೀಕರತೆಯನ್ನು ಎತ್ತಿ ತೋರಿಸುತ್ತವೆ.

ಭಾರತದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಧ್ವನಿಯೆತ್ತುವ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಗ್ರಾಮಸ್ಥರು ಹಾಗೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ನಡೆಯುವ ದೌರ್ಜನ್ಯಗಳು ಗಂಭೀರ ಸಾಮಾಜಿಕ ಹಾಗೂ ಕಾನೂನು ಸುವ್ಯವಸ್ಥೆಯ ಸವಾಲಾಗಿ ಪರಿಣಮಿಸಿವೆ. ನೂರಾರು ಕೋಟಿ ರೂಪಾಯಿಗಳ ಅಕ್ರಮ ಜಾಲವನ್ನು ರಕ್ಷಿಸಿಕೊಳ್ಳಲು ಮಾದಕದ್ರವ್ಯ ದಂಧೆಕೋರರು ಮತ್ತು ಅವರ ಹಿನ್ನೆಲೆಯಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಹೋರಾಟಗಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿವೆ. ಪಂಜಾಬ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಾದಕವಸ್ತು ಜಾಲವು ಕೇವಲ ವ್ಯಸನಿಗಳನ್ನು ಸೃಷ್ಟಿಸುತ್ತಿಲ್ಲ; ಬದಲಿಗೆ ತನ್ನ ಕಬಂಧಬಾಹುಗಳನ್ನು ಧಿಕ್ಕರಿಸುವ ಯಾರನ್ನಾದರೂ ಜೀವಸಹಿತ ಇಲ್ಲವಾಗಿಸುವ ಕ್ರಿಮಿನಲ್ ಸಾಮ್ರಾಜ್ಯವಾಗಿ ಬೆಳೆದುನಿಂತಿದೆ. ಔಷಧ ಅಂಗಡಿಗಳ ಮುಸುಕಿನಲ್ಲಿ ಯುವಜನತೆಗೆ ವಿಷ ಉಣಿಸುವ ವ್ಯಾಪಾರ ರಾಜಾರೋಷವಾಗಿ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ.

ಪಂಜಾಬ್, ಮಣಿಪುರ, ಮಿಜೋರಾಂ ಮತ್ತು ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಸ್ಥಳೀಯ ಯುವಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ವಿಜಿಲೆನ್ಸ್ ಸಮಿತಿಗಳು ಅಥವಾ ಸ್ಥಳೀಯ ಸಂಘಟನೆಗಳು ರಚನೆಯಾಗಿವೆ. ಆದರೆ, ಇಂತಹ ಸಂಘಟನೆಗಳ ಸದಸ್ಯರು ಡ್ರಗ್ ಪೆಡ್ಲರ್​ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಅಥವಾ ಪೆಡ್ಲಿಂಗ್ ತಡೆದಾಗ, ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವುದು, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಹತ್ಯೆಗೈಯುವ ಘಟನೆಗಳು ವರದಿಯಾಗುತ್ತಲೇ ಇವೆ.

ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನು ಪ್ರಾಣದ ಹಂಗು ತೊರೆದು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮಾಡುತ್ತಿದ್ದಾರೆ. ಆದರೆ, ಇಂತಹ ಜಾಲಗಳನ್ನು ಬಯಲಿಗೆಳೆಯಲು ಮುಂದೆ ಬರುವವರಿಗೆ ರಕ್ಷಣೆ ನೀಡುವಲ್ಲಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ದುಷ್ಟಶಕ್ತಿಗಳ ವಿರುದ್ಧ ಧ್ವನಿ ಎತ್ತುವವರೇ ಬಲಿಯಾಗುತ್ತಿದ್ದರೆ, ಸಮಾಜದಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಯಾರಲ್ಲೂ ಉಳಿಯುವುದಿಲ್ಲ. ಡ್ರಗ್ಸ್ ದಂಧೆಯ ವಿರುದ್ಧ ಹೋರಾಡುವ ಕಾರ್ಯಕರ್ತರು, ದೂರುದಾರರು ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವ ವ್ಯವಸ್ಥೆ ತುರ್ತಾಗಿ ಜಾರಿಯಾಗಬೇಕು. ಯುವ ಪೀಳಿಗೆಯನ್ನು ನಾಶಮಾಡುತ್ತಿರುವ ಮಾದಕದ್ರವ್ಯ ಮಾಫಿಯಾವನ್ನು ಮಟ್ಟಹಾಕಲು ಸರ್ಕಾರಗಳು ಕೇವಲ ಅಂಕಿಅಂಶಗಳ ಲೆಕ್ಕ ನೀಡಿದರೆ ಸಾಲದು; ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net