ಇಂದಿನ ಯುವಪೀಳಿಗೆ ಪ್ರತಿಭೆ, ಕೌಶಲವನ್ನು ಹೊಂದಿದ್ದು, ಸಾಮಾಜಿಕ ವಿಷಯಗಳ ಬಗ್ಗೆ ಉತ್ತಮ ತಿಳಿವಳಿಕೆ ಹೊಂದಿದೆ. ಕೆಲ ಹಾದಿತಪ್ಪಿದ ಯುವಕರೂ ಇದ್ದಾರೆ. ಅಂಥವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ, ಇಡೀ ಯುವಸಮೂಹವನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಅಥವಾ ಅವರ ದನಿಯನ್ನು ತಡೆಯಲು ಯತ್ನಿಸುವುದು ಸರಿಯಾದ ನಡೆಯಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿಲುವನ್ನು ತಳೆದಿರುವುದು ಸ್ವಾಗತಾರ್ಹ. ಸಂವಾದದ ಮಾರ್ಗವನ್ನು ಪ್ರಶಸ್ತಗೊಳಿಸಬೇಕು. ಹೊಸ ಪೀಳಿಗೆಯ ಯುವಕ/ಯುವತಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿದರೆ, ಅವರ ನಿಜವಾದ ಸಮಸ್ಯೆ, ಆತಂಕ ಏನೆಂಬುದು ಅರ್ಥವಾಗಿ, ಪರಿಹಾರದ ದಾರಿಯೂ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಲಿ.