ವಿಕಸಿತ ಭಾರತ-2047 ಗುರಿ: ಜನಪ್ರತಿನಿಧಿಗಳಿಗೆ ನೀತಿ ಸಂಶೋಧನಾ ಕಾರ್ಯಾಗಾರ

NFPRC
NFPRC
Published on
ನವದೆಹಲಿ: ಸಂಸದರು ಮತ್ತು ಶಾಸಕರ ಆಡಳಿತ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಆ್ಯಂಡ್ ಚೇಂಜ್ ಫೌಂಡೇಶನ್ (NFPRC) ವತಿಯಿಂದ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಯಿತು. ಕಾರ್ಮಿಕರ ಔಪಚಾರಿಕೀಕರಣ, ಸಾಮಾಜಿಕ ಭದ್ರತೆ, ಕೌಶಲಾಭಿವೃದ್ಧಿ, ಡಿಜಿಟಲ್ ಆಡಳಿತ ಹಾಗೂ ಪರಿಣಾಮಕಾರಿ ಸಾರ್ವಜನಿಕ ಸಂವಹನ ಕುರಿತಂತೆ ಜನಪ್ರತಿನಿಧಿಗಳಿಗೆ ತಜ್ಞರು ಮಾಹಿತಿ ನೀಡಿದರು.
ಗುಲ್ಮೋಹರ್ ಹಾಲ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಲೋಕಸಭೆ, ರಾಜ್ಯಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 70 ಮಂದಿ ಜನಪ್ರತಿನಿಧಿಗಳು ಭಾಗವಹಿಸಿದರು.

ವಿಕಸಿತ ಭಾರತ ಗುರಿಗೆ ಒತ್ತು

ಎನ್‌ಎಫ್‌ಪಿಆರ್‌ಸಿ ಅಧ್ಯಕ್ಷ ತರುಣ್ ಚುಗ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಕಸಿತ ಭಾರತ-2047 ಗುರಿ ಸಾಧಿಸಲು ಕಾರ್ಮಿಕರ ಔಪಚಾರಿಕೀಕರಣ, ಸಾಮಾಜಿಕ ಭದ್ರತೆ ವಿಸ್ತರಣೆ, ಡಿಜಿಟಲ್ ಆಡಳಿತ ಹಾಗೂ ಕೌಶಲಾಭಿವೃದ್ಧಿ ಅತ್ಯಂತ ಪ್ರಮುಖ ಎಂದು ಹೇಳಿದರು. ಹರಿಯಾಣ ವಿಧಾನಸಭೆ ಸ್ಪೀಕರ್ ಹರವಿಂದರ್ ಕಲ್ಯಾಣ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಜನಪ್ರತಿನಿಧಿಗಳು ಸಾಕ್ಷ್ಯಾಧಾರಿತ ನೀತಿ ರೂಪಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ಕಾರ್ಮಿಕ ಕಲ್ಯಾಣ ಯೋಜನೆಗಳ ಮಾಹಿತಿ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು "ಸಾಮಾಜಿಕ ಭದ್ರತೆಯ ಸಾರ್ವತ್ರಿಕೀಕರಣ ಮತ್ತು ಕಾರ್ಮಿಕರ ಔಪಚಾರಿಕೀಕರಣ" ವಿಷಯದ ಕುರಿತು ಮಾತನಾಡಿದರು.
ಹೊಸ ಕಾರ್ಮಿಕ ಸಂಹಿತೆಗಳು, ಇ-ಶ್ರಮ್ ಪೋರ್ಟಲ್, ರಾಷ್ಟ್ರೀಯ ವೃತ್ತಿ ಸೇವೆ (NCS), ಡಿಜಿಟಲ್ ಲೇಬರ್ ಚೌಕ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳು ಅಸಂಘಟಿತ, ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿವೆ ಎಂದು ವಿವರಿಸಿದರು.
ಡಿಜಿಟಲ್ ಆಡಳಿತ, ಫಲಾನುಭವಿಗಳ ಗುರುತಿಸುವಿಕೆ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ಕಾರ್ಮಿಕರಿಗೆ ಯೋಜನೆಗಳ ಲಾಭ ಸುಲಭವಾಗಿ ತಲುಪುತ್ತಿದೆ ಎಂದು ಅವರು ತಿಳಿಸಿದರು.

ಡಿಜಿಟಲ್ ಸಂವಹನ ಮತ್ತು ಕೌಶಲಾಭಿವೃದ್ಧಿ

ರಾಜ್ಯಸಭಾ ಸದಸ್ಯ ವಿನೋದ್ ತಾವ್ಡೆ ಅವರು ಜನಪ್ರತಿನಿಧಿಗಳಿಗೆ ಪರಿಣಾಮಕಾರಿ ಸಾರ್ವಜನಿಕ ಸಂವಹನದ ಕುರಿತು ತರಬೇತಿ ನೀಡಿದರು. ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆ, ಸುಳ್ಳು ಸುದ್ದಿಗಳಿಗೆ ತಿರುಗೇಟು, ಮಾಧ್ಯಮ ನಿರ್ವಹಣೆ ಹಾಗೂ ಜನರೊಂದಿಗೆ ವಿಶ್ವಾಸದ ಸಂಬಂಧ ಬೆಳೆಸುವ ಬಗ್ಗೆ ಅವರು ವಿವರಿಸಿದರು.
ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ (NSDC) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್‌ಕುಮಾರ್ ಪಿಳ್ಳೈ ಅವರು ಜಾಗತಿಕ ಮಟ್ಟದ ಕೌಶಲಾಭಿವೃದ್ಧಿ ಮಾದರಿಗಳು, ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್, ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಾಕ್ಷ್ಯಾಧಾರಿತ ನೀತಿಗಳಿಗೆ ಒತ್ತು

ಕಾರ್ಯಕ್ರಮದ ಕೊನೆಯಲ್ಲಿ ಎನ್‌ಎಫ್‌ಪಿಆರ್‌ಸಿ ನಿರ್ದೇಶಕ ಮಂಡಳಿ ಸದಸ್ಯ ಡಾ. ಅಭಿನವ್ ಪ್ರಕಾಶ್ ವಂದಿಸಿದರು. ಭವಿಷ್ಯದಲ್ಲಿಯೂ ಜನಪ್ರತಿನಿಧಿಗಳಿಗಾಗಿ ನೀತಿ ಸಂವಾದ, ಸಂಶೋಧನೆ ಆಧಾರಿತ ಅಧ್ಯಯನ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಭಾಗವಹಿಸಿದ್ದ ಜನಪ್ರತಿನಿಧಿಗಳು ಇಂತಹ ಪಕ್ಷಾತೀತ, ಜ್ಞಾನಾಧಾರಿತ ವೇದಿಕೆಗಳು ಉತ್ತಮ ನೀತಿ ರೂಪಣೆ ಹಾಗೂ ಆಡಳಿತ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net