ಬೆಂಗಳೂರು: ಬೇಸಿಗೆ ಬಂದರೆ ಸಾಕು, ಜನರ ಊಟದ ತಟ್ಟೆಯಲ್ಲಿ ಸೌತೆಕಾಯಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಸಲಾಡ್, ರೈತಾ ಅಥವಾ ನೇರವಾಗಿ ತಿನ್ನುವ ಆಹಾರವಾಗಿ(Cucumber Tips ) ಸೌತೆಕಾಯಿ ಹೆಚ್ಚು ಜನಪ್ರಿಯವಾಗಿದೆ. ದೇಹವನ್ನು ತಂಪಾಗಿಡುವುದು, ನೀರಿನಾಂಶ ಕಾಪಾಡುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು ಇದರ ಪ್ರಮುಖ ಗುಣಗಳು. ಆದರೆ ಮಾರುಕಟ್ಟೆಯಿಂದ ತಂದ ಸೌತೆಕಾಯಿ ಕೆಲವೊಮ್ಮೆ ಕಹಿಯಾಗಿದ್ದು, ಊಟದ ರುಚಿಯನ್ನೇ ಹಾಳು ಮಾಡುತ್ತದೆ.
ಇಂತಹ ಸಂದರ್ಭಗಳಲ್ಲಿ ಸೌತೆಕಾಯಿಯನ್ನು ಕತ್ತರಿಸಿ ರುಚಿ ನೋಡುವ ಮುನ್ನವೇ ಅದು ಕಹಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಉಪಯುಕ್ತ. ಕೆಲವು ಸರಳ ವಿಧಾನಗಳ ಮೂಲಕ ಉತ್ತಮ ಸೌತೆಕಾಯಿಯನ್ನು ಆಯ್ಕೆ ಮಾಡಬಹುದು.
ಬಣ್ಣ ನೋಡಿ ಸೌತೆಕಾಯಿ ಆಯ್ಕೆ ಮಾಡಿ
ತಾಜಾ ಮತ್ತು ರುಚಿಯಾದ ಸೌತೆಕಾಯಿ ಸಾಮಾನ್ಯವಾಗಿ ತಿಳಿ ಹಸಿರು ಬಣ್ಣದಲ್ಲಿರುತ್ತದೆ. ಅದರ ಮೇಲ್ಮೈ ಹೊಳೆಯುತ್ತಿರುತ್ತದೆ. ಸೌತೆಕಾಯಿ ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗಿದ್ದರೆ ಅದು ಹಳೆಯದಾಗಿರಬಹುದು ಅಥವಾ ಕಹಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಸಿಪ್ಪೆಯ ಮೇಲಿನ ಗೆರೆಗಳನ್ನೂ ಗಮನಿಸಿ
ಉತ್ತಮ ಗುಣಮಟ್ಟದ ಸೌತೆಕಾಯಿಯ ಸಿಪ್ಪೆಯ ಮೇಲೆ ಸ್ಪಷ್ಟವಾದ ಕಡು ಹಸಿರು ಗೆರೆಗಳು ಕಂಡುಬರುತ್ತವೆ. ಸಿಪ್ಪೆ ತುಂಬಾ ಒರಟಾಗಿದ್ದರೆ, ಮಚ್ಚೆಗಳು ಹೆಚ್ಚಿದ್ದರೆ ಅಥವಾ ಗೆರೆಗಳು ಸ್ಪಷ್ಟವಾಗಿರದಿದ್ದರೆ ಅದು ಕಹಿಯಾಗಿರುವ ಸಾಧ್ಯತೆ ಇರುತ್ತದೆ.
ಕೈಯಲ್ಲಿ ಹಿಡಿದು ಪರೀಕ್ಷಿಸಿ
ಸೌತೆಕಾಯಿಯನ್ನು ಖರೀದಿಸುವಾಗ ಸ್ವಲ್ಪ ಒತ್ತಿ ನೋಡಬೇಕು. ಅದು ತುಂಬಾ ಗಟ್ಟಿಯಾಗಿಯೂ ಇರಬಾರದು, ಅತಿಯಾಗಿ ಮೆತ್ತಗೆಯೂ ಇರಬಾರದು. ಮಧ್ಯಮ ಗಟ್ಟಿತನ ಹೊಂದಿರುವ ಸೌತೆಕಾಯಿ ಸಾಮಾನ್ಯವಾಗಿ ತಾಜಾ ಮತ್ತು ರುಚಿಕರವಾಗಿರುತ್ತದೆ.
ತುಂಬಾ ದೊಡ್ಡ ಅಥವಾ ಚಿಕ್ಕ ಸೌತೆಕಾಯಿಯಿಂದ ದೂರವಿರಿ
ಅತಿಯಾದ ಗಾತ್ರದ ಅಥವಾ ತುಂಬಾ ಚಿಕ್ಕ ಸೌತೆಕಾಯಿಗಳಲ್ಲಿ ಬೀಜಗಳ ಪ್ರಮಾಣ ಹೆಚ್ಚಿರಬಹುದು. ಇವುಗಳಲ್ಲಿ ಕಹಿತನವೂ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ಮಧ್ಯಮ ಗಾತ್ರದ, ನೇರವಾದ ಹಾಗೂ ತೆಳುವಾದ ಸೌತೆಕಾಯಿಯನ್ನು ಆಯ್ಕೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಕಾಂಡದ ಭಾಗವೂ ಮುಖ್ಯ
ಸೌತೆಕಾಯಿಯ ಕಾಂಡದ ಭಾಗ ಹಸಿರಾಗಿದ್ದು ತಾಜಾ ಕಂಡುಬಂದರೆ ಅದು ಹೊಸದಾಗಿದೆ ಎನ್ನಬಹುದು. ಕಾಂಡ ಒಣಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಸೌತೆಕಾಯಿ ಹಳೆಯದಾಗಿರುವ ಸಾಧ್ಯತೆ ಇರುತ್ತದೆ.
ಸೌತೆಕಾಯಿ ತಿನ್ನುವುದರಿಂದ ಏನು ಲಾಭ?
ದೇಹಕ್ಕೆ ತಂಪು ನೀಡುತ್ತದೆ
ಸೌತೆಕಾಯಿಯಲ್ಲಿ ನೀರಿನಾಂಶ ಅಧಿಕವಾಗಿರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ನಿರ್ಜಲೀಕರಣದ ಸಮಸ್ಯೆಯಿಂದ ರಕ್ಷಿಸುತ್ತದೆ.
ತೂಕ ನಿಯಂತ್ರಣಕ್ಕೆ ಸಹಕಾರಿ
ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಸೌತೆಕಾಯಿ ತಿಂದರೆ ಹೊಟ್ಟೆ ಹೆಚ್ಚು ಸಮಯ ತುಂಬಿದ ಅನುಭವವಾಗುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.
ಚರ್ಮದ ಆರೋಗ್ಯ ಸುಧಾರಣೆ
ನಿಯಮಿತವಾಗಿ ಸೌತೆಕಾಯಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ನೀರಿನಾಂಶ ದೊರೆಯುತ್ತದೆ. ಇದರಿಂದ ಚರ್ಮದಲ್ಲಿ ನೈಸರ್ಗಿಕ ಕಾಂತಿ ಮತ್ತು ತಾಜಾತನ ಉಳಿಯುತ್ತದೆ.
ಜೀರ್ಣಕ್ರಿಯೆಗೆ ನೆರವು
ಸೌತೆಕಾಯಿಯಲ್ಲಿ ಫೈಬರ್ ಅಂಶವಿದ್ದು, ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗುತ್ತದೆ.
ದೇಹದ ವಿಷಕಾರಿ ಅಂಶ ಹೊರಹಾಕಲು ಸಹಾಯ
ಸೌತೆಕಾಯಿ ದೇಹದಲ್ಲಿರುವ ಅನಗತ್ಯ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೆ ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ,(ಏಜೆನ್ಸೀಸ್).