ಗಾಜಿನ ಬಾಟಲಿ ಬಿಟ್ಟು ಪ್ಲಾಸ್ಟಿಕ್ ಬಾಟಲಿಯಲ್ಲಿ ಮದ್ಯ ಇಡುವುದು ಸುರಕ್ಷಿತವೇ? ತಜ್ಞರ ಎಚ್ಚರಿಕೆ!

 Alcoho lStorage
Alcoho lStorage
Published on

ಪ್ರಮುಖ ಮುಖ್ಯಾಂಶಗಳು

  • ಗಾಜಿನ ಬಾಟಲಿ ಬಿಟ್ಟು ಪ್ಲಾಸ್ಟಿಕ್‌ನಲ್ಲಿ ಮದ್ಯ ಇಟ್ಟರೆ ಏನಾಗುತ್ತದೆ?
  • ಪ್ಲಾಸ್ಟಿಕ್ ಪಾತ್ರೆಯಲ್ಲಿ ಮದ್ಯ ಸಂಗ್ರಹಿಸಬೇಡಿ; ತಜ್ಞರು ಹೇಳುವ ಕಾರಣಗಳೇನು?
  • ಮದ್ಯದ ಗುಣಮಟ್ಟ ಕಾಪಾಡಬೇಕೆ? ಗಾಜಿನ ಬಾಟಲಿಯೇ ಉತ್ತಮ ಆಯ್ಕೆ ಎನ್ನುತ್ತಾರೆ ತಜ್ಞರು
ನವದೆಹಲಿ: ಪ್ರಯಾಣ ಅಥವಾ ಅನುಕೂಲಕ್ಕಾಗಿ ಅನೇಕರು ಮದ್ಯವನ್ನು ಗಾಜಿನ ಬಾಟಲಿಯಿಂದ ಪ್ಲಾಸ್ಟಿಕ್ ಬಾಟಲಿಗೆ ವರ್ಗಾಯಿಸಿ ಸಂಗ್ರಹಿಸುತ್ತಾರೆ. ಆದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ದೀರ್ಘಕಾಲ ಮದ್ಯ(Alcoho lStorage) ಇಡುವುದರಿಂದ ಅದರ ಗುಣಮಟ್ಟ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ತಜ್ಞರ ಪ್ರಕಾರ, ಪ್ಲಾಸ್ಟಿಕ್ ಬಾಟಲಿ ತಕ್ಷಣವೇ ಹಾಳಾಗುವುದಿಲ್ಲ ಅಥವಾ ಮದ್ಯವು ಅದರಲ್ಲಿ ರಂಧ್ರ ಮಾಡುವುದಿಲ್ಲ. ಆದರೆ ಹಲವು ತಿಂಗಳು ಅಥವಾ ವರ್ಷಗಳ ಕಾಲ ಪ್ಲಾಸ್ಟಿಕ್ ಪಾತ್ರೆಯಲ್ಲಿ ಮದ್ಯ ಸಂಗ್ರಹಿಸಿದರೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಏಕೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ?

ಮದ್ಯದಲ್ಲಿರುವ ಆಲ್ಕೋಹಾಲ್ ಒಂದು ರೀತಿಯ ದ್ರಾವಕವಾಗಿದೆ. ಅಂದರೆ ಅದು ಕೆಲವು ವಸ್ತುಗಳೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುವ ಗುಣ ಹೊಂದಿದೆ. ಇದರಿಂದಾಗಿ ಮದ್ಯವನ್ನು ದೀರ್ಘಕಾಲ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸುವುದನ್ನು ತಜ್ಞರು ಶಿಫಾರಸು ಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಪ್ಲಾಸ್ಟಿಕ್ ಲಭ್ಯವಿದ್ದರೂ, ಬಹುತೇಕ ತಜ್ಞರು ದೀರ್ಘಾವಧಿಯ ಶೇಖರಣೆಗೆ ಗಾಜಿನ ಬಾಟಲಿಯೇ ಸುರಕ್ಷಿತ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮದ್ಯದ ರುಚಿ ಮತ್ತು ಪರಿಮಳದ ಮೇಲೂ ಪರಿಣಾಮ

ವಿಸ್ಕಿ ಸೇರಿದಂತೆ ಪ್ರೀಮಿಯಂ ಮದ್ಯ ಸೇವಿಸುವವರಿಗೆ ಅದರ ರುಚಿ ಮತ್ತು ಪರಿಮಳ ಅತ್ಯಂತ ಮುಖ್ಯವಾಗಿರುತ್ತದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ದೀರ್ಘಕಾಲ ಮದ್ಯ ಸಂಗ್ರಹಿಸಿದರೆ ಅದರ ಮೂಲ ರುಚಿ ಮತ್ತು ಪರಿಮಳದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ದುಬಾರಿ ಮತ್ತು ಉನ್ನತ ಗುಣಮಟ್ಟದ ಮದ್ಯಗಳನ್ನು ಸಾಮಾನ್ಯವಾಗಿ ಗಾಜಿನ ಬಾಟಲಿಗಳಲ್ಲಿಯೇ ಮಾರಾಟ ಮಾಡಲಾಗುತ್ತದೆ. ಗಾಜಿನ ಬಾಟಲಿ ಮದ್ಯದ ಮೂಲ ಗುಣಗಳನ್ನು ಹೆಚ್ಚು ಕಾಲ ಕಾಪಾಡುತ್ತದೆ. ಆದರೆ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ಮದ್ಯ ಕ್ರಮೇಣ ತನ್ನ ಮೂಲ ಪರಿಮಳವನ್ನು ಕಳೆದುಕೊಳ್ಳಬಹುದು.

ಆರೋಗ್ಯದ ಮೇಲೂ ಇರಬಹುದು ಪರಿಣಾಮ

ಪ್ಲಾಸ್ಟಿಕ್‌ನಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಮದ್ಯದೊಳಗೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವೂ ತಜ್ಞರಲ್ಲಿ ಇದೆ. ಈ ಕುರಿತು ಹೆಚ್ಚಿನ ಸಂಶೋಧನೆಗಳು ಇನ್ನೂ ನಡೆಯುತ್ತಿದ್ದರೂ, ಪ್ಲಾಸ್ಟಿಕ್‌ನಲ್ಲಿ ದೀರ್ಘಕಾಲ ಸಂಗ್ರಹಿಸಿದ ಪಾನೀಯಗಳಲ್ಲಿ ರಾಸಾಯನಿಕ ಸೋರಿಕೆಯ ಅಪಾಯ ಹೆಚ್ಚಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಪ್ಯಾಕೇಜಿಂಗ್ ಸಂಶೋಧನೆ ಮತ್ತು ಪರೀಕ್ಷಾ ಕೇಂದ್ರದ ವರದಿಗಳ ಪ್ರಕಾರ, ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ಕೆಲವು ರಾಸಾಯನಿಕಗಳು ದೇಹಕ್ಕೆ ಸೇರಿದರೆ ತಲೆತಿರುಗುವಿಕೆ, ತಲೆನೋವು, ಹೊಟ್ಟೆ ಅಸ್ವಸ್ಥತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಗಾಜಿನ ಬಾಟಲಿಯೇ ಸುರಕ್ಷಿತ ಆಯ್ಕೆ

ತಜ್ಞರ ಪ್ರಕಾರ, ಗಾಜು ರಾಸಾಯನಿಕವಾಗಿ ಸ್ಥಿರ ವಸ್ತುವಾಗಿದ್ದು, ಮದ್ಯದೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಇದೇ ಕಾರಣಕ್ಕೆ ವೈನ್ ಮತ್ತು ಇತರ ಪ್ರೀಮಿಯಂ ಮದ್ಯ ಉತ್ಪನ್ನಗಳನ್ನು ಗಾಜಿನ ಬಾಟಲಿಗಳಲ್ಲಿಯೇ ಪ್ಯಾಕ್ ಮಾಡಲಾಗುತ್ತದೆ.ಮದ್ಯದ ಗುಣಮಟ್ಟ, ರುಚಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪ್ಲಾಸ್ಟಿಕ್ ಬದಲಿಗೆ ಗಾಜಿನ ಬಾಟಲಿಗಳನ್ನು ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net