

| ವಾದಿರಾಜ ವ್ಯಾಸಮುದ್ರ ಕಲಬುರಗಿ
ಹೈದರಾಬಾದ್-ಕರ್ನಾಟಕ ಸಮಗ್ರ ಇತಿಹಾಸ ಅಧ್ಯಯನಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪೀಠ ಆರಂಭಿಸಲು ನಿರ್ಧರಿಸಲಾಗಿದೆ. ಪೀಠ ಸ್ಥಾಪನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಸಮಿತಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಪೀಠ ಸಹಕಾರಿಯಾಗಲಿದೆ.
ಹಿಂದಿನ ಹೈದರಾಬಾದ್-ಕರ್ನಾಟಕದ (ಈಗಿನ ಕಲ್ಯಾಣ ಕರ್ನಾಟಕ) ಇತಿಹಾಸವನ್ನು ಸಂಗ್ರಹಿಸಿ ಲಿಖಿತ ರೂಪದಲ್ಲಿ ಹೊರ ತರಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಹೈ-ಕ ಇತಿಹಾಸ ಅಧ್ಯಯನ ಸಮಿತಿಯನ್ನು ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆಯಲ್ಲಿ ರಚಿಸಿದ್ದರು. ಇದಕ್ಕೆ ಹೋರಾಟಗಾರ ಲಕ್ಷ್ಮಣ ದಸ್ತಿಯವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಇದರಲ್ಲಿ ಒಟ್ಟು 15 ಸದಸ್ಯರಿದ್ದಾರೆ. ಸಧ್ಯಕ್ಕೆ ಸಮಿತಿ ಇಲ್ಲಿಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಆವರಣದಲ್ಲಿರುವ ಪ್ರಾದೇಶಿಕ ಅಧ್ಯಯನ ಕೇಂದ್ರದಲ್ಲಿ ಕಚೇರಿ ಆರಂಭಿಸಿದೆ.
ಮುಂದಿನ ಪೀಳಿಗೆಗೆ ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಭಾಗದ ಇತಿಹಾಸದ ಸಂಪೂರ್ಣ ಪರಿಚಯ ಮಾಡಿ ಕೊಡುವ ಹಿನ್ನೆಲೆಯಲ್ಲಿ ಎಲ್ಲ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಪ್ರತಿ ಪದವಿ ಕಾಲೇಜುಗಳಲ್ಲಿ ಇದನ್ನೇ ಒಂದು ವಿಷಯವನ್ನಾಗಿ ಮಾಡುವ ಇಚ್ಛೆ ಹೊಂದಲಾಗಿದೆ. ಸಾಮಾಜಿಕ ಸಾಮರಸ್ಯವನ್ನು ಇತಿಹಾಸ ಹೊಂದಿರಬೇಕೆಂಬ ನಿಟ್ಟಿನಲ್ಲಿ ಶ್ರಮ ವಹಿಸಲಾಗುತ್ತಿದೆ.
ಜ್ಞಾನಾರ್ಜನೆ ಕೇಂದ್ರವಾಗಿರುವ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಇದರದೇ ಅಧ್ಯಯನ ಪೀಠವಿದ್ದರೆ ಅದರಡಿ ಸಂಗ್ರಹಣಾ ಕಾರ್ಯವನ್ನು ಕೈಕೊಂಡು ನಮ್ಮ ಇತಿಹಾಸದ ಶ್ರೀಮಂತಿಕೆಯನ್ನು ನಾಡಿಗೆ ಪರಿಚಯಿಸುವುದಕ್ಕಾಗಿ ಅಧ್ಯಯನ ಪೀಠವನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಅಧ್ಯಯನ ಪೀಠ ಹೇಗಿರಬೇಕು ಎನ್ನುವುದರ ಕುರಿತಂತೆ ವರದಿ ಸಲ್ಲಿಸಲು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಇತಿಹಾಸ ಚಿಂತಕ ಲಕ್ಷ್ಮಣ ದಸ್ತಿ, ಗುಲ್ಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ, ಸಮಿತಿ ಸದಸ್ಯರಾದ ಡಾ.ಮಾಜಿದ ದಾಗಿ, ಡಾ.ಬಿ.ಸಿ. ಮಹಾ ಬಲೇಶ್ವರಪ್ಪ ಅವರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ.
ಯಡಿಯೂರಪ್ಪನವರು ಇತಿಹಾಸ ಸಂಗ್ರಹಣಾ ಸಮಿತಿಗೆ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾಗಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಡಾ. ಶರಣಪ್ರಕಾಶ ಪಾಟೀಲ್ ಅವರು, ಈ ಸಮಿತಿಗೆ ಖಾಸಗಿ ವ್ಯಕ್ತಿಗಳು ಅಧ್ಯಕ್ಷರಾಗಿದ್ದರೆ ಕೆಲಸಗಳು ತ್ವರಿತವಾಗಿ ಆಗುವುದಿಲ್ಲವೆಂಬ ನಿರ್ಧಾರಕ್ಕೆ ಬಂದು ಪ್ರಾದೇಶಿಕ ಆಯುಕ್ತರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಿದರು. ಸಮಿತಿಗೆ ಲಕ್ಷ್ಮಣ ದಸ್ತಿ ಸದಸ್ಯ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ.
‘ಪ್ರಾಚೀನ ಇತಿಹಾಸ’, ’ಮಧ್ಯಕಾಲಿನ ಇತಿಹಾಸ’ ಮತ್ತು ‘ಆಧುನಿಕ ಇತಿಹಾಸ’ ಹೀಗೆ 3 ಭಾಗಗಳ ಆಯಾ ಕಾಲದ ವಿಸõತ ಇತಿಹಾಸದ ಸಂಪುಟ ರಚಿಸಲು ಈ ಹಿಂದೆಯೇ ನಿರ್ಣಯ ಕೈಕೊಳ್ಳಲಾಗಿತ್ತು. ಸಂಪುಟ ರಚನೆಗೆ ಅಗತ್ಯ ಮೂಲಸೌಕರ್ಯ, ಆಕಾರಗಳ ಸಂಗ್ರಹಣೆಗೆ ಹಾಗೂ ಕ್ಷೇತ್ರ ಕಾರ್ಯಕ್ಕೆ ಬೇಕಾದ ಹಣಕಾಸು ಹಾಗೂ ಸಿಬ್ಬಂದಿ ನೆರವು ನೀಡುವುದಾಗಿ ಭರವಸೆ ಇಸಾಮದಿಯವರು ಈಗಾಗಲೇ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಬೀದರ್ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಿಭಾಗ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸ್ಥಳೀಯ ಎಲ್ಲ ಕ್ಷೇತ್ರದ ವಿಷಯಗಳ ಅಧ್ಯಯನಕ್ಕೆ ಪೂರಕವಾಗಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲು ಇಸಾಮದಿ ಈಗಾಗಲೇ ಸೂಚಿಸಿದ್ದಾರೆ.
ಸಮಿತಿ ಉದ್ದೇಶ: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಸಮಗ್ರ ಇತಿಹಾಸವನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸುವುದೇ ಸಮಿತಿ ಉದ್ದೇಶವಾಗಿದೆ.
ಅವಮಾನ ಮಾಡಿದರು: ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇನೋ ಸರಿ. ಆದರೆ ಸಮಿತಿಗೆ ಮೊದಲು ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿಯವರನ್ನು ಸಮಿತಿಗೆ ಸದಸ್ಯರನ್ನಾಗಿಯಾದರೂ ಮಾಡಬೇಕಿತ್ತು. ಆದರೆ ಹಿಂದಿನ ಮಂತ್ರಿಗಳು ಇವರನ್ನೇಕೆ ಕೈ ಬಿಟ್ಟರೋ ಅರ್ಥವಾಗುತ್ತಿಲ್ಲ.