Web Exclusive | ಅರಣ್ಯ ರಕ್ಷಣೆಗೆ ಶಕ್ತಿ ತುಂಬಿದ ನೇಮಕಾತಿ...

Web X
ಧಾರವಾಡದ ಗುಂಗರಗಟ್ಟಿಯ ರಾಜ್ಯ ಅರಣ್ಯ ಅಕಾಡೆಮಿಯಲ್ಲಿ ವೃತ್ತಿ ಬುನಾದಿ ತರಬೇತಿ ಮುಗಿಸಿದ 9ನೇ ಉಪ ವಲಯ ಅರಣ್ಯಾಧಿಕಾರಿಗಳ ತಂಡ.
Published on

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಸಸ್ಯ ಸಂಪತ್ತು, ವನ್ಯಜೀವಿಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆಯನ್ನು ಕಾಡುತ್ತಿರುವ ಸಿಬ್ಬಂದಿ ಕೊರತೆಗೆ ಉಪವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರರ ನೇಮಕಾತಿ (ಡಿವೈಆರ್​ಎಫ್​ಒ) ಟಾನಿಕ್ ನೀಡಿದೆ.

ಅರಣ್ಯ ಇಲಾಖೆ 273 ಡಿವೈಆರ್​ಎಫ್​ಒಗಳನ್ನು ನೇಮಕಾತಿ ಮಾಡಿಕೊಂಡು ಇತ್ತೀಚೆಗಷ್ಟೆ ವೃತ್ತಿ ಬುನಾದಿ ತರಬೇತಿ ನೀಡಿ ಕರ್ತವ್ಯಕ್ಕಿಳಿಸಿದೆ. ಇಲಾಖೆಯಲ್ಲಿ ಸುಮಾರು 2,734 ಹುದ್ದೆಗಳಲ್ಲಿದ್ದ ಹಲವರು ನಿವೃತ್ತಿ ಹೊಂದಿದ ಪರಿಣಾಮ ಉಂಟಾಗಿದ್ದ ಸಿಬ್ಬಂದಿ ಕೊರತೆಯನ್ನು ಈ ನೇಮಕಾತಿ ಪ್ರಕ್ರಿಯೆ ನೀಗಿಸಿದೆ.

2019ರ ಜೂ.7ರಂದು 210 ಡಿವೈಆರ್​ಎಫ್​ಒಗಳು ನೇರ ನೇಮಕಾತಿಯಾಗಿ ವೃತ್ತಗಳಿಗೆ ಹಾಜರಾಗಿದ್ದರು. ಇವರಿಗೆ ಜೂ.10ರಿಂದ 2020ರ ಅ.15ರವರೆಗೆ ಧಾರವಾಡದ ಗುಂಗರಗಟ್ಟಿಯ ರಾಜ್ಯ ಅರಣ್ಯ ಅಕಾಡೆಮಿ ಮತ್ತು ಇಲವಾಲದಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ವೃತ್ತಿ ಬುನಾದಿ ತರಬೇತಿ ನೀಡಲಾಗಿದೆ. ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿರುವ 63 ಡಿವೈಆರ್​ಎಫ್​ಒಗಳಿಗೆ ಮಡಿಕೇರಿಯ ಅರಣ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ.

ನೂತನವಾಗಿ ಆಯ್ಕೆಯಾಗಿರುವವರು ಬೆಳಗಾವಿ-13, ಬಳ್ಳಾರಿ-1, ಬೆಂಗಳೂರು-18, ಕೆನರಾ(ಶಿರಸಿ)-75, ಚಾಮರಾಜನಗರ-30, ಚಿಕ್ಕಮಗಳೂರು-14, ಧಾರವಾಡ-8, ಹಾಸನ-12, ಕಲಬುರುಗಿ-1, ಕೊಡಗು- 28, ಮಂಗಳೂರು-15, ಮೈಸೂರು- 23, ಶಿವಮೊಗ್ಗ-35 ಅಭ್ಯರ್ಥಿಗಳು ಜಿಲ್ಲೆಗಳ ವಲಯ ಅರಣ್ಯಗಳಿಗೆ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದಾರೆ. ಅರಣ್ಯ ರಕ್ಷಣೆ, ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸಲು ಶುರು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿರುವ ಕಳ್ಳಬೇಟೆ ಪ್ರಕರಣಗಳನ್ನು ಮಟ್ಟ ಹಾಕಲು ಡಿವೈಆರ್​ಎಫ್​ಒ ನೇಮಕಾತಿ ಬಲ ತುಂಬಿದೆ. ಚಾಮರಾಜನಗರಕ್ಕೆ ನೇಮಕವಾಗಿರುವ 30 ಅಧಿಕಾರಿಗಳನ್ನು ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ತಡೆಯಲು ಅರಣ್ಯ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.

ನೇರ ನೇಮಕಾತಿಗೆ ವಿರೋಧ

ಡಿವೈಆರ್​ಎಫ್​ಒಗಳ ನೇರ ನೇಮಕಾತಿ ವಿರುದ್ಧ ಅಪಸ್ವರ ಎದ್ದಿದೆ. ನೇಮಕಾತಿ ನಿಯಮ ಪ್ರಕಾರ ಖಾಲಿ ಹುದ್ದೆಗಳನ್ನು 50:50 ನೇರ ಮತ್ತು ಬಡ್ತಿ ಆಧಾರದ ಮೇಲೆ ತುಂಬೇಕಾಗಿದೆ. ಆದರೆ ಈ ಬಾರಿ ಡಿವೈಆರ್​ಎಫ್​ಒಗಳ ನೇಮಕಾತಿಯಲ್ಲಿ ಈ ನಿಯಮವನ್ನು ಪಾಲನೆ ಮಾಡಿಲ್ಲ. ಹಿರಿತನದ ಆಧಾರದ ಮೇಲೆ ಮುಂಬಡ್ತಿ ಪಡೆದು ಡಿವೈಆರ್​ಎಫ್​ಒಗಳಾಗಬೇಕಾಗಿದ್ದ ಅರಣ್ಯ ರಕ್ಷಕರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಡಿವೈಆರ್​ಎಫ್​ಒಗಳ ಹೊಸ ನೇಮಕಾತಿ ಅರಣ್ಯ ಇಲಾಖೆಯ ಉತ್ಸಾಹ ಹೆಚ್ಚಿಸಿದೆ. ಅರಣ್ಯ ರಕ್ಷಣೆಗೆ ಸಿಬ್ಬಂದಿ ನೇಮಕ ಉತ್ತಮವಾಗಿ ನೆರವಾಗಲಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ, ಕಳ್ಳಬೇಟೆ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಬಹುದು.| ಸಂಜಯ್ ಮೋಹನ್ ಪಿಸಿಸಿಎಫ್, ಅರಣ್ಯ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net