ಶಾರ್ಟ್ ಸ್ಕರ್ಟ್ ಧರಿಸಿ, ಪ್ರಚೋದನಕಾರಿಯಾಗಿ ಡ್ಯಾನ್ಸ್ ಮಾಡುವುದು ಅಶ್ಲೀಲವಲ್ಲ: ಬಾಂಬೆ ಹೈಕೋರ್ಟ್

Court (2)
Published on

ನವದೆಹಲಿ: ಮಹಿಳೆಯರು ಶಾರ್ಟ್​ ಸ್ಕರ್ಟ್​ ಧರಿಸಿ ನೃತ್ಯ ಮಾಡುವುದು ಆಶ್ಲೀಲತೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬ್​ ಹೈಕೋರ್ಟ್​ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್​​​ ವಾಲ್ಮೀಕಿ ಮೆಂಗಸ್​​​ ಹಾಗೂ ಜಸ್ಟೀಸ್​​ ವಿನಯ್​​ ಜೋಶಿ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿದೆ.

ಕಳೆದ 2023ರ ಮೇ 31ರಂದು ನಾಗುರ ಜಿಲ್ಲೆಯ ಪ್ಯಾರಡೈಸ್ ರೆಸಾರ್ಟ್ ವಾಟರ್ ಪಾರ್ಕ್ ತಿರ್ಕುರಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಹಿಳೆಯರು ಶಾರ್ಟ್ ಸ್ಕರ್ಟ್‌ಗಳಲ್ಲಿ ನೃತ್ಯ ಮಾಡುತ್ತಿದ್ದರು. ಮಹಿಳೆಯರು ನೃತ್ಯ ಮಾಡುವಾಗ ಪುರುಷರು ಅವರ ಮೇಲೆ ಹಣವನ್ನು ಸುರಿಯುತ್ತಿದ್ದರು. ಈ ಸಂಬಂಧ ಮಹಿಳೆಯರ ವಿರುದ್ಧ ಮಹಾರಾಷ್ಟ್ರ ನಿಷೇಧ ಕಾಯ್ದೆ 1949ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡಿದ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಐವರು ಮಹಿಳೆಯರು ಬಾಂಬೆ ಹೈಕೋರ್ಟ್ ನಾಗುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲ ಅಕ್ಷಯ್ ನಾಯ್ ವಾದ ಮಂಡಿಸಿ: ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 24ರ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ನೃತ್ಯದಿಂದಾಗಿ ಬೇರೆಯವರಿಗೆ ಸಮಸ್ಯೆ ಉಂಟಾದ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ ಮಹಿಳೆಯರ ನೃತ್ಯ ಅಶ್ಲೀಲ ಎಂದು ಹೇಳಲಾಗದು ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಡೊಯಿಫೋಡ್ ವಾದ ಮಂಡಿಸಿ: ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ. ನೃತ್ಯದ ಬಗ್ಗೆ ಜನರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಿದರು.  ವಾದ - ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಮಹತ್ತರವಾದ ತೀರ್ಪು ನೀಡಿದೆ.

ಕೋರ್ಟ್​​ ಹೇಳಿದ್ದೇನು?: ಮಹಿಳೆಯರು ಶಾರ್ಟ್‌ ಸ್ಕರ್ಟ್‌ಗಳಲ್ಲಿ ನೃತ್ಯ ಮಾಡುವುದು ಅಶ್ಲೀಲತೆ ಮತ್ತು ಅನೈತಿಕತೆಗೆ ಸಮಾನವಲ್ಲ. ಸೆನ್ಸಾರ್‌ಶಿಪ್‌ನಲ್ಲಿ ಪಾಸಾದ ಚಲನಚಿತ್ರಗಳಲ್ಲಿ ತುಂಡು ಉಡುಗೆ ಬಳಕೆಯನ್ನು ಕಾಣಬಹುದು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಇಂತಹ ಉಡುಪುಗಳನ್ನು ನೋಡಬಹುದಾಗಿದೆ. ಇಂತಹ ಘಟನೆಗಳನ್ನು ಪ್ರಗತಿಪರ ಚಿಂತನೆಯಿಂದ ನೋಡುವಂತೆ ಪೊಲೀಸರಿಗೆ ನ್ಯಾಯಾಲಯ ಸಲಹೆ ನೀಡಿತು. ಜತೆಗೆ ಅರ್ಜಿದಾರರ ವಿರುದ್ಧ ಸಲ್ಲಿಸಲಾದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net