24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ; ಬಾಂಬ್‌ ಬೆದರಿಕೆ ಸಂದೇಶ; Bomb Threat

Untitled design
Published on

ಕಾರಾವಾರ; ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಕಣ್ಣನ್​ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್​ ಸಂದೇಶವನ್ನು ಕಳುಹಿಸಲಾಗಿದೆ.

ಮೊದಲ ಇ-ಮೇಲ್​ ಸಂದೇಶದಲ್ಲಿ ‘ವಿ ವಿಲ್​ ಪ್ಲಾಂಟ್​ ಬಾಂಬ್​ ಇನ್​ ಭಟ್ಕಳ್​ ಟೌನ್​’ ಎಂದು ಸಂದೇಶ ಕಳುಹಿಸಲಾಗಿದೆ. ನಂತರ ‘ಆಲ್​ ದ ಬಾಂಬ್​ ವಿಲ್​ ಬ್ಲಾಸ್ಟ್​ ಇನ್​​ 24 ಹಾರ್ಸ್​’ ಎಂದು ಸಂದೇಶ ಕಳುಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತ ಹೈ ಅಲರ್ಟ್‌ನಲ್ಲಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.

ನಿನ್ನೆ (ಜು.10) ಬೆಳಗ್ಗೆ 10.30ಕ್ಕೆ ಈ ಇ-ಮೇಲ್​ ಸಂದೇಶ ಬಂದಿದ್ದು, kannnannandik@gmail.com ನಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಗೆ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. ಎರಡು ಬಾರಿ ಈ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿದೆ.

ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪಿಎಸ್​ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಬಾಂಬ್ ನಿಷ್ಕ್ರಿಯ ದಳವು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳದಲ್ಲಿ ತಪಾಸಣೆ ಆರಂಭಿಸಿದ್ದಾರೆ. ಇದಲ್ಲದೇ, ಡ್ರೋನ್ ಕ್ಯಾಮೆರಾ ಮೂಲಕವೂ ಕಣ್ಗಾವಲಿಟ್ಟು ತಪಾಸಣೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಭಟ್ಕಳ ನಗರ ಸ್ಫೋಟಿಸುವ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದು, ತಪಾಸಣೆ ಕೈಗೊಂಡಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net