

ಶಾರ್ಜಾ: ಬೌಲಿಂಗ್ ನಿರ್ವಹಣೆ ಮತ್ತು ರಾಯುಡು ಗಾಯಗೊಂಡಿದ್ದು ತಂಡಕ್ಕೆ ಟೂರ್ನಿಯಲ್ಲಿ ಹಿನ್ನಡೆಯಾದ ಅಂಶಗಳು. ಅಲ್ಲದೆ ತಂಡ ಕಠಿಣ ಪರಿಸ್ಥಿತಿ ಎದುರಿಸಿದಾಗ ಅವಕಾಶ ಪಡೆದ ಆಟಗಾರರೂ ಉತ್ತಮ ನಿರ್ವಹಣೆ ತೋರಲಿಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಬೇಕೆಂದು ಬಯಸಿದ ಪಂದ್ಯಗಳಲ್ಲಿ ಟಾಸ್ ಜಯಿಸಲಿಲ್ಲ. ನಾವು ಮೊದಲು ಬ್ಯಾಟಿಂಗ್‌ಗೆ ಇಳಿದ ಪಂದ್ಯದ ವೇಳೆ ದಿಢೀರನೆ ಇಬ್ಬನಿ ಕಾಣಿಸಿಕೊಂಡಿತು ಎಂದು ನಾಯಕ ಎಂಎಸ್ ಧೋನಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ವೈಫಲ್ಯಕ್ಕೆ ಕಾರಣಗಳನ್ನು ನೀಡಿದ್ದಾರೆ.
ಚೆನ್ನೈ ಸೂಪರ್‌ಕಿಂಗ್ಸ್ ತಂಡ ಹಾಲಿ ಐಪಿಎಲ್‌ನಲ್ಲಿ ತನ್ನ 2ನೇ ಪಂದ್ಯದಿಂದಲೇ ಸಾಮರ್ಥ್ಯಕ್ಕೆ ತಕ್ಕ ಆಡವಾಡಲಿಲ್ಲ. ಟೂರ್ನಿಯಲ್ಲಿ ಈಗ ನಾವು ಇರುವ ಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ. ಇದು ನಮ್ಮ ವರ್ಷ ಆಗಿರಲಿಲ್ಲ ಎಂದು ಎಂಎಸ್ ಧೋನಿ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶುಕ್ರವಾರ ಎದುರಾದ 10 ವಿಕೆಟ್‌ಗಳ ಹೀನಾಯ ಸೋಲಿನ ಬಳಿಕ ಸಿಎಸ್‌ಕೆ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಹೀಗಾಗಿ ತಂಡದ ಉಳಿದ 3 ಪಂದ್ಯಗಳನ್ನು ಮುಂದಿನ ವರ್ಷದ ಟೂರ್ನಿಯ ಸಿದ್ಧತೆಗಾಗಿ ಬಳಸಿಕೊಳ್ಳುವೆವು. ಸಮರ್ಥ ಬ್ಯಾಟ್ಸ್‌ಮನ್, ಡೆತ್ ಓವರ್ ಬೌಲರ್ ಮತ್ತು ಒತ್ತಡದಲ್ಲೂ ಉತ್ತಮವಾಗಿ ಆಡುವ ಆಡುವ ಆಟಗಾರರನ್ನು ಗುರುತಿಸುವೆವು ಎಂದು ಧೋನಿ ಹೇಳಿದ್ದಾರೆ.
ಸಿಎಸ್‌ಕೆ ತಂಡವನ್ನು 100ರೊಳಗೆ ಕಟ್ಟಿಹಾಕಲು ಬಯಸಿದ್ದೆವು. ಆದರೆ ಸ್ಯಾಮ್ ಕರ‌್ರನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಒಟ್ಟಾರೆ ತಂಡದ ಸಾಂಕ ಪ್ರಯತ್ನಕ್ಕೆ ಸಿಕ್ಕ ಗೆಲುವು ಇದಾಗಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಕೈರಾನ್ ಪೊಲ್ಲಾರ್ಡ್ ಹೇಳಿದ್ದಾರೆ.
‘ಪವರ್‌ಪ್ಲೇಯಲ್ಲೇ ನಾವು ಪಂದ್ಯವನ್ನು ಬಹುತೇಕ ಸೋತಿದ್ದೆವು. ತಂಡದ ಯುವ ಆಟಗಾರರು ಅವಕಾಶ ಪಡೆದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ತಂಡದ ವೈಲ್ಯದ ನಡುವೆಯೂ ಕೆಲ ಧನಾತ್ಮಕ ಅಂಶಗಳು ದೊರೆತಿವೆ. ಸ್ಯಾಮ್ ಕರ‌್ರನ್ ಅದರಲ್ಲೊಬ್ಬರು’ ಎಂದು ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಿಎಸ್‌ಕೆ ತಂಡ ಮೊದಲ ಬಾರಿಗೆ ಪವರ್‌ಪ್ಲೇಯಲ್ಲಿ 5 ವಿಕೆಟ್ ಕಳೆದುಕೊಂಡಿತು. ಮುಂಬೈ ಇಂಡಿಯನ್ಸ್ ತಂಡ ಸಿಎಸ್‌ಕೆ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದ ಮೊದಲ ತಂಡವೆನಿಸಿತು. ಕ್ವಿಂಟನ್ ಡಿಕಾಕ್-ಇಶಾನ್ ಕಿಶನ್ ಜೋಡಿ ಮೊದಲ ವಿಕೆಟ್‌ಗೆ ಅಜೇಯ 116 ರನ್ ಜತೆಯಾಟವಾಡಿತು. ಈ ಮೂಲಕ 2018ರ ಬಳಿಕ ಮುಂಬೈ ಪರ ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿದ ಮೊದಲ ಜೋಡಿ ಎನಿಸಿತು.