ಸೋಮನಾಳ (ಕೊಪ್ಪಳ): ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕುಟುಂಬದ ಸದಸ್ಯರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾನುವಾರ ಸಾಂತ್ವನ ಹೇಳಿದರು.
ಇದನ್ನೂ ಓದಿ: ವಕ್ಫ್ ಬೋರ್ಡ್ ಅಧಿಕಾರಕ್ಕೆ ಬ್ರೇಕ್ ಹಾಕಲು ಸಿದ್ಧತೆ, ಕಾಯಿದೆ ಬದಲಿಸುತ್ತಾ ಮೋದಿ ಸರ್ಕಾರ?
ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದ ಪರಶುರಾಮ್ ಮನೆಗೆ ಅವರು ಭೇಟಿ ನೀಡಿ, ಪರಶುರಾಮ್ ತಂದೆ ಜನಕಮುನಿ ಹಾಗೂ ಸಹೋದರನಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಪರಶುರಾಮ್ ಬಾಲ್ಯ, ವಿದ್ಯಾಭ್ಯಾಸ, ಕೆಲಸದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ನಿಮ್ಮೊಂದಿಗೆ ನಾವಿದ್ದೇವೆ, ಎದೆಗುಂದಬೇಡಿ. ನಾನು ಗೃಹ ಇಲಾಖೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ವರ್ಷದವರೆಗೆ ವರ್ಗಾವಣೆ ಮಾಡುವಂತಿಲ್ಲ. ಹಣ ಹಾಗೂ ಒತ್ತಡ ಹಾಕಿ ವರ್ಗಾವಣೆ ಮಾಡಿದ್ದು ಸರಿಯಲ್ಲ. ವಿಷಯ ತಿಳಿದೇ ನಾನು ಇಲ್ಲಿಗೆ ಬಂದಿರುವೆ. ನೀವು ಘಟನೆ ವಿವರ ಕೊಡಿ. ನಾನು ನಿಮ್ಮ ಜೊತೆ ಇರುವೆ. ಅನ್ಯಾಯ ಸಹಿಸಲ್ಲ. ಇಷ್ಟಕ್ಕೆ ಬಿಡಲ್ಲ. ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ಅಲ್ಲಿವರೆಗೂ ಸುಮ್ಮನಿರಲ್ಲ ಎಂದು ಪರಶುರಾಮ್ ಕುಟುಂಬಕ್ಕೆ ಧೈರ್ಯ ತುಂಬಿದರು.
ಅಸ್ಪೃಶ್ಯತೆ ಆಚರಣೆ ಅಂಬೇಡ್ಕರ್ ಗೆ ಮಾಡಿದ ಅವಮಾನ. ಇದು ಸರಿಯಲ್ಲ. ನಾನು ಸಚಿವನಾಗಿದ್ದಾಗ ಹಲವರು ದಲಿತ ಸಮುದಾಯ ಅಧಿಕಾರಿಗಳಿದ್ದರು. ಜಾತಿ ಮುಖ್ಯ ಅಲ್ಲ. ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುವೆ ಎಂದು ಭರವಸೆ ನೀಡಿದರು.
ಮೃತ ಪಿಎಸ್ಐ ಪರಶುರಾಮ್ ಪತ್ನಿ ತವರುಮನೆ ರಾಯಚೂರಿನಲ್ಲಿದ್ದು, ಅವರ ತಂದೆಗೆ ಕರೆ ಮಾಡಿದ ಅಶೋಕ್ ಸಾಂತ್ವಾನ ಹೇಳಿದರು. ನನಗೆ ವಿಷಯ ತಿಳಿದ ತಕ್ಷಣ ಮೈಸೂರಿನಿಂದ ಸೋಮನಾಳ ಗ್ರಾಮಕ್ಕೆ ಬಂದಿರುವೆ. ನೀವು ಅಲ್ಲಿರುವುದು ಗೊತ್ತಾಗಲಿಲ್ಲ. ತೊಂದರೆ ಇಲ್ಲ. ನಿಮಗೆ ನ್ಯಾಯ ಸಿಗುವವರೆಗೆ ನಿಮ್ಮ ಜೊತೆಗಿರುವೆ ಎಂದರು.
ಈ ವೇಳೆ ಘಟನೆ ಕುರಿತು ವಿವರಿಸಿದ ಪರಶುರಾಮ್ ಸಹೋದರ, ಯಾದಗಿರಿಗೆ ಹೋಗಿ 7 ತಿಂಗಳಾಗಿದ್ದು, ಅದರಲ್ಲಿ ನಾಲ್ಕು ತಿಂಗಳು ಚುನಾವಣಾ ಕರ್ತವ್ಯಕ್ಕೆ ಹಾಕಿದ್ದರು. ಗೆಜೆಟೆಡ್ ಅಧಕಾರಿಯಾಗಬೇಕೆಂದು ಕನಸು ಕಂಡಿದ್ದ. ಸಾಕಷ್ಟು ಪ್ರಯತ್ನ ನಡೆಸಿದ್ದ, ಹಲವು ಉದ್ಯೋಗ ಅರಸಿ ಬಂದಿದ್ದವು. ಆದರೆ ಆತ ದೊಡ್ಡ ಕನಸು ಕಂಡಿದ್ದ. ನಾವು ಬಡವರಾದ ಕಾರಣ ಸೌಲಭ್ಯ ಕಲ್ಪಿಸಲು ಆಗಲಿಲ್ಲ ಎಂದರು.
ನಾವೇನು ದಲಿತರಾಗಿದ್ದೇ ತಪ್ಪಾ? ನಮಗೆ ಬದುಕುವ ಹಕ್ಕು ಇಲ್ಲವಾ?
ಕೊನೆಗೆ ಪಿಎಸ್ಐ ಆಗಿ ಆಯ್ಕೆ ಆದ. ಸಮಾಜಕ್ಕೆ ಕೊಡುಗೆ ಕೊಡಬೇಕೆಂದುಕೊಂಡಿದ್ದ. ಆದರೆ, ನಮಗೆ ಅನ್ಯಾಯ ಆಗಿದೆ. ಆತನ ಮೇಲೆ ಕುಟುಂಬ ಅವಲಂಬಿತವಾಗಿತ್ತು. ಶಾಸಕ ಚೆನ್ನಾರಡ್ಡಿ ಹಾಗೂ ಅವರ ಕುಟುಂಬದವರು ಸಾಕಷ್ಟು ತೊಂದ್ರೆ ಕೊಟ್ಟರು. ತಮ್ಮ ಏರಿಯಾದಲ್ಲಿ ದಲಿತರು ಇರಬಾರದು ಎಂದು ಕಿರುಕುಳ ಕೊಟ್ಟರು. ನಾವೇನು ದಲಿತರಾಗಿದ್ದೇ ತಪ್ಪಾ? ನಮಗೆ ಬದುಕುವ ಹಕ್ಕು ಇಲ್ಲವಾ ಎಂದು ಪ್ರಶ್ನಿಸಿದರು.
ನಮ್ಮದು ಬಡ ಕುಟುಂಬ. ನನ್ನ ತಮ್ಮ ಮೃತನಾದ ಮೇಲೂ ಅಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಸೊಸೆ ಗರ್ಭಿಣಿ. ದೂರು ನೀಡಿದರೂ 16 ಗಂಟೆ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಜನರು ಪ್ರತಿಭಟನೆ ಮಾಡಿದರೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು ನನಗೆ ಸಾಕಷ್ಟು ನೋವಾಗಿದೆ ಎಂದು ದುಃಖ ತೋಡಿಕೊಂಡರು.
ಪಿಎಸ್ಐ ಹುದ್ದೆಯನ್ನೇ ನೀಡಿ: ನಮ್ಮ ಕುಟುಂಬಕ್ಕೆ ಸಾಕಷ್ಟು ಅನ್ಯಾಯವಾಗಿದೆ. ನನ್ನ ತಮ್ಮ ಇಷ್ಟಪಟ್ಟು ಪಿಎಸ್ಐ ಆಗಿದ್ದರು. ಹೀಗಾಗಿ ಪರಶುರಾಮ್ ಹೆಂಡತಿಗೆ ಪಿಎಸ್ಐ ಹುದ್ದೆಯನ್ನೇ ನೀಡಬೇಕು ಎಂದು ಪರಶುರಾಮ್ ಕುಟುಂಬದವರು ಒತ್ತಾಯಿಸಿದರು.
ಬಿಜೆಪಿ, ಗ್ರಾಮಸ್ಥರಿಂದ ಮನವಿ ಸಲ್ಲಿಕೆ: ಪರಶುರಾಮ್ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಕೊಪ್ಪಳ ಬಿಜೆಪಿ ಪಕ್ಷ ಹಾಗೂ ಸೋಮನಾಳ ಗ್ರಾಮಸ್ಥರು ಅಶೋಕ್ ಅವರಿಗೆ ಮನವಿ ಸಲ್ಲಿಸಿದರು. ಪರಶುರಾಮ್ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು 50 ಲಕ್ಷ ರೂ. ಪರಿಹಾರ ಕೊಡಬೇಕು. ಪರಶುರಾಮ್ ಮಗನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜು ನಾಯಕ, ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಂಸದ ಶಿವರಾಮಗೌಡ, ಜೆಡಿಎಸ್ ನಾಯಕರಾದ ಸಿ.ವಿ.ಚಂದ್ರಶೇಖರ, ರಾಜು ನಾಯಕ ಇತರರು ಇದ್ದರು.
‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್ಲೋಡ್ ಮಾಡಲು ಅಮಿತ್ ಷಾ ಮನವಿ