ನಾವು ಗಾಜಾವನ್ನು ಹಮಾಸ್‌ನಿಂದ ಮುಕ್ತಗೊಳಿಸಲಿದ್ದೇವೆ: ಇಸ್ರೇಲ್ ಪ್ರಧಾನಿ| Benjamin Netanyahu

Benjamin Netanyahu
Published on

Benjamin Netanyahu: ಇಸ್ರೇಲ್ ಗಾಜಾವನ್ನು ಆಕ್ರಮಿಸಿಕೊಳ್ಳುವ ಗುರಿಯನ್ನು ಹೊಂದಿಲ್ಲ. ಬದಲಿಗೆ, ಹಮಾಸ್‌ನಿಂದ ಮುಕ್ತಗೊಳಿಸಿ ಮತ್ತು ಶಾಂತಿಯುತ ನಾಗರಿಕ ಸರ್ಕಾರವನ್ನು ಸ್ಥಾಪಿಸುವುದನ್ನು ಬೆಂಬಲಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಕಚೇರಿಯು, ಈ ಘೋಷಣೆಯು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ನಾವು ಗಾಜಾವನ್ನು ಆಕ್ರಮಿಸಿಕೊಳ್ಳುವುದಿಲ್ಲ. ನಾವು ಗಾಜಾವನ್ನು ಹಮಾಸ್‌ನಿಂದ ಮುಕ್ತಗೊಳಿಸಲಿದ್ದೇವೆ ಎಂದು ನೆತನ್ಯಾಹು ಹೇಳಿದರು.

ಗಾಜಾವನ್ನು ಸೇನಾ ಮುಕ್ತಗೊಳಿಸಲಾಗುವುದು ಮತ್ತು ಶಾಂತಿಯುತ ನಾಗರಿಕ ಆಡಳಿತವನ್ನು ಸ್ಥಾಪಿಸಲಾಗುವುದು. ಇದು ಪ್ಯಾಲೆಸ್ಟೀನಿಯನ್ ಪ್ರಾಧಿಕಾರವಲ್ಲ, ಹಮಾಸ್ ಅಲ್ಲ, ಮತ್ತು ಯಾವುದೇ ಭಯೋತ್ಪಾದಕ ಸಂಘಟನೆಯಲ್ಲ. ಇದು ನಮ್ಮ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಗಾಜಾ ಇಸ್ರೇಲ್‌ಗೆ ಬೆದರಿಕೆಯನ್ನುಂಟು ಮಾಡುವುದಿಲ್ಲ ಎಂದು ಖಚಿತಪಡಿಸುತ್ತದೆ. ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತುಗಳನ್ನು ಸ್ಥಗಿತಗೊಳಿಸುವ ಜರ್ಮನಿಯ ನಿರ್ಧಾರದ ಬಗ್ಗೆ ನೆತನ್ಯಾಹು ನಿರಾಶೆಯನ್ನು ವ್ಯಕ್ತಪಡಿಸಿದರು.

ಯಹೂದಿ ಜನರ ವಿರುದ್ಧ ಅತ್ಯಂತ ಭಯಾನಕ ದಾಳಿ ನಡೆಸಿದ ಹಮಾಸ್ ವಿರುದ್ಧ ಇಸ್ರೇಲ್‌ನ ನ್ಯಾಯಯುತ ಯುದ್ಧವನ್ನು ಬೆಂಬಲಿಸುವ ಬದಲು, ಜರ್ಮನಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ನಿರ್ಬಂಧಿಸುವ ಮೂಲಕ ಹಮಾಸ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಇಸ್ರೇಲ್​ ಪ್ರಧಾನಿ ಕಚೇರಿ ತಿಳಿಸಿದೆ.

ಇಸ್ರೇಲ್‌ನ ಇತ್ತೀಚಿನ ಕ್ರಮಗಳುನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಕಷ್ಟಕರವಾಗಿದೆ ಎಂದು ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಹೇಳಿದ್ದಾರೆ. ಕಳೆದ ತಿಂಗಳು, ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ ಸುಮಾರು 75 ಪ್ರತಿಶತವನ್ನು ನಿಯಂತ್ರಿಸುತ್ತದೆ ಎಂದು ಹೇಳಿಕೊಂಡಿದೆ. ಇಸ್ರೇಲ್ ಈ ಹಿಂದೆ 1967 ರಿಂದ 2005ರ ತನಕ ಗಾಜಾವನ್ನು ಆಕ್ರಮಿಸಿಕೊಂಡಿತ್ತು.

ಗಾಜಾ ನಗರದ ನಿಯಂತ್ರಣವನ್ನು ತೆಗೆದುಕೊಳ್ಳುವ ಹೊಸ ಮಿಲಿಟರಿ ಯೋಜನೆಗೆ ಇಸ್ರೇಲ್‌ನ ಭದ್ರತಾ ಸಂಪುಟ ಅನುಮೋದನೆ ನೀಡಿದ ನಂತರ ಹೆಚ್ಚುತ್ತಿರುವ ಟೀಕೆಗಳ ಮಧ್ಯೆ ನೆತನ್ಯಾಹು ಅವರ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net