ನವದೆಹಲಿ: ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ನೂರಾರು ಜನರ ಕನಸಿನ ಜತೆಗೆ ಬದುಕಿನ ಭರವಸೆಗಳೂ ಧರೆಗುರುಳಿದೆ. ಭೂಕುಸಿತದಲ್ಲಿ ಜೀವ ಕಳೆದುಕೊಂಡವರೇನೋ ಇಲ್ಲಿನ ಯಾತ್ರೆ ಮುಗಿಸಿ ಹೊರಟಿದ್ದಾರೆ. ಆದರೆ, ಪ್ರಕೃತಿಯ ಮುನಿಸಿಗೆ ಎದೆಯೊಡ್ಡಿ ಜೀವ ಉಳಿಸಿಕೊಂಡವರು ಮುಂದಿನ ಜೀವನ ಯಾತ್ರೆ ಸಾಗಿಸುವುದು ಹೇಗೆ ಎನ್ನುವ ಯಕ್ಷ ಪ್ರಶ್ನೆಗಳಿಗೆ ಇದೀಗ ಉತ್ತರವಿಲ್ಲದೆ ಕಂಗಾಲಾಗಿದ್ದಾರೆ.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೇ ಬದುಕಿನ ಬಂಡಿ ಸಾಗಿಸಲು, ಹೊಟ್ಟೆಹೊರೆಯಲು ಆಸರೆಯಾಗಿದ್ದ ದಾರಿಗಳೂ ಮುಚ್ಚಿ ಹೋಗಿ, ಮುಂದೇನು ಎನ್ನುವ ಪ್ರಶ್ನೆ ಮಾತ್ರ ಅವರ ಎದುರಿಗೆ ಉಳಿದಿದೆ. ಭೂ ಕುಸಿತದಲ್ಲಿ ಬದುಕುಳಿದವರ ಇಂತಹ ದಾರುಣ ಕತೆ-ವ್ಯಥೆಗಳು ಈಗ ಒಂದೊಂದೆ ತೆರೆದುಕೊಳ್ಳುತ್ತಿವೆ.
ಸಿರಾಜುದ್ದೀನ್ ಒಬ್ಬ ಆಟೋ ಚಾಲಕ. ತಾನು ಆಟೋ ಓಡಿಸಿ ದುಡಿದ ಹಣದಿಂದ ಸಂಸಾರ ಸಾಗಿಸುತ್ತಿದ್ದವನು. ಆದರೀಗ ಅವನ ಮನೆ ಮತ್ತು ಬದುಕಿನ ಆಸರೆಯಾಗಿದ್ದ ಆಟೋ ರಿಕ್ಷಾ ಕೇವಲ ನೆನಪಿನಲ್ಲಿ ಮಾತ್ರ ಉಳಿದಿದೆ. ತಮ್ಮ ಕಣ್ಣೆದುರೇ ಮನೆ ಧರಾಶಾಯಿಯಾಗುವುದನ್ನು ಕಂಡಿರುವ ಸಿರಾಜುದ್ದೀನ್ನ ಕುಟುಂಬ ಇನ್ನು ಬದುಕು ಸಾಗಿಸುವುದು ಹೇಗೆ ಎಂದು ಪರಿತಪಿಸುತ್ತಿದೆ.
ಗುರುವಾರ ಮುಂಜಾನೆಯ ಹೊತ್ತಿಗೆ ಮನೆಯ ಹೊರಗಿನಿಂದ ಜೋರಾದ ಶಬ್ದ ಕೇಳಿಸಿತು. ಬಾಗಿಲು ತೆರೆದು ನೋಡಿದರೆ ಪ್ರವಾಹದ ನೀರು ನಮ್ಮ ಮನೆಯ ಕಡೆಗೆ ನುಗ್ಗಿಬರುತ್ತಿತ್ತು. ಆಗಲೇ ಎಲ್ಲರನ್ನು ಎಚ್ಚರಿಸಿ ಮನೆಯ ಹಿಂಭಾಗದ ಎತ್ತರದ ಗುಡ್ದ ಪ್ರದೇಶಕ್ಕೆ ಓಡಿಹೋಗಿ ಜೀವ ಉಳಿಸಿಕೊಂಡೆವು. ದೊಡ್ದ ದೊಡ್ದ ಬಂಡೆಕಲ್ಲುಗಳು, ಮರಗಳು ನಮ್ಮ ಮನೆ ಮೇಲುರುಳುತ್ತಿರುವುದನ್ನು ಅಲ್ಲಿಂದ ಅಸಹಾಯಕರಾಗಿ ನೋಡಿದೆವು. ನನ್ನ ಆಟೋ ರಿಕ್ಷಾ ಕೂಡ ಭೂಮಿ ಪಾಲಾಗಿದೆ. ಭವಿಷ್ಯದ ದಾರಿ ತಿಳಿಯದಾಗಿದೆ ಎಂದು ಸಿರಾಜುದ್ದೀನ್ ದುಃಖ ತೋಡಿಕೊಂಡಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಆಗಿರುವ ಗಣೇಶನ ಕುಟುಂಬದ ನೋವಿನ ಕತೆ ಇನ್ನೊಂದು ರೀತಿಯದ್ದು. ರಾತ್ರಿ ಕೆಲಸ ಮುಗಿಸಿ ತಡವಾಗಿ ಬಂದ ಗಣೇಶ್ ಪ್ರವಾಹದ ಪರಿಸ್ಥಿತಿ ಕಂಡು ಒಂದು ಕ್ಷಣವೂ ತಡಮಾಡದೆ, ತನ್ನ ಪತ್ನಿಯನ್ನು ನಿದ್ರೆಯಿಂದ ಎಬ್ಬಿಸಿ ಎತ್ತರದ ಪ್ರದೇಶಕ್ಕೆ ಹೋಗಿ ಆಶ್ರಯ ಪಡೆದಿದ್ದಾರೆ. ಆದರೆ ಅವರ ತಂಗಿಯ ಕುಟುಂಬ ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದೆ.
ನಾವು ಮನೆಯಿಂದ ಹೊರಬರುತ್ತಿದ್ದಂತೆಯೇ ನನ್ನ ತಂಗಿಯ ಮನೆ ಪ್ರವಾಹಕ್ಕೆ ಸಿಲುಕಿ ಕುಸಿಯುತ್ತಿರುವುದನ್ನು ಕಂಡೆವು. ನಾವು ಜೀವ ಉಳಿಸಿಕೊಳ್ಳಲು ಓಡುತ್ತಿದ್ದಂತೆಯೇ ನಮ್ಮ ಮನೆಯೂ ಕಣ್ಣೆದುರೇ ಕೊಚ್ಚಿಕೊಂಡು ಹೋಯಿತು ಎಂದು ಗಣೇಶ ಕಣ್ಣೀರು ಸುರಿಸಿದ್ದಾರೆ. ಭೂಕುಸಿತವಾದ ಪ್ರದೇಶದಲ್ಲಿ ತಂದೆಯೊಬ್ಬ ತನ್ನ ಮಗಳಿಗಾಗಿ ನಡೆಸಿದ ಹುಡುಕಾಟವಂತೂ ಹೃದಯ ಕಲಕುವಂತಿದೆ. ನನ್ನ ಮಗಳನ್ನು ಪತ್ತೆ ಹಚ್ಚುವಲ್ಲಿಯವರೆಗೆ ಅವಳು ಸತ್ತಿದ್ದಾಳೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಮಗಳು ನನ್ನಿಂದ ದೂರಕ್ಕೆ ಯಾವುದೋ ಊರಿಗೆ ಓದಲು ಹೋಗಿದ್ದಾಳೆ ಎಂದು ಅಂದುಕೊಳ್ಳುತ್ತೇನೆ ಹೊರತು, ಅವಳ ಸಾವನ್ನು ನಾನು ಒಪ್ಪುವುದಿಲ್ಲ ಎಂದು ಮಗಳ ಹುಡುಕಾಟ ಮುಂದುವರಿಸಿರುವ ತಂದೆಯೊಬ್ಬನ ಎದೆಭಾರದ ಮಾತಿಗೆ ಸ್ಥಳದಲ್ಲಿದ್ದವರು ಕಣ್ಣೀರಾಗಿದ್ದಾರೆ.
ಇದೇ ರೀತಿಯ ಹಲವು ಕಣ್ಣೀರ ಕತೆಗಳು ದುರಂತ ಸ್ಥಳದಿಂದ ಹೊರಬರುತ್ತಿವೆ. ಪ್ರವಾಹ, ಭೂಕುಸಿತಕ್ಕೆ ಸಿಲುಕಿ ಉಳಿದವರ ಕಣ್ಮುಂದೆ ಭವಿಷ್ಯದ ಪ್ರಶ್ನೆ ದೊಡ್ಡದಾಗಿ ನಿಂತಿದೆ. (ಏಜೆನ್ಸೀಸ್)
ವಯನಾಡು ಭೂಕುಸಿತ: ಸಾವಿನ ಸಂಖ್ಯೆ 358ಕ್ಕೆ ಏರಿಕೆ, ಬದುಕುಳಿದವರ ಶೋಧಕ್ಕೆ ರಾಡಾರ್ ಬಳಕೆ
ವಯನಾಡು ದುರಂತ: ಹೆತ್ತವರಿಲ್ಲದೆ ಕಣ್ಣೀರಿಡುತ್ತಿರುವ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾದ ಮುಸ್ಲಿಂ ದಂಪತಿ