ಗೂಡಂಗಡಿ ವ್ಯಾಪಾರಿ ಮಗ ಕೆನೋಯಿಂಗ್ ಸ್ಟಾರ್

blank

ಧನಂಜಯ ಎಸ್. ಹಕಾರಿ ದಾವಣಗೆರೆ: ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಎನ್ನುವುದಕ್ಕೆ ಬೆಣ್ಣೆನಗರಿಯ ಜಾಲಿನಗರ ನಿವಾಸಿ ದಾದಾಪೀರ್ ಅವರೇ ತಾಜಾ ಉದಾಹರಣೆ. ವಾಟರ್ ಸ್ಪೋರ್ಟ್ಸ್​ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕಳೆದ ವರ್ಷವಷ್ಟೇ ಏಷ್ಯನ್ ಗೇಮ್ಸ್​ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

blank

ದಾದಾಪೀರ್ 11 ನೇ ವಯಸ್ಸಿನಲ್ಲಿ ವಾಟರ್ ಸ್ಪೋರ್ಟ್ಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ತರಬೇತುದಾರ ಶಬ್ಬೀರ್ ಅವರ ಗರಡಿಯಲ್ಲಿ ಪಳಗಿದ ದಾದಾಪೀರ್, ಆರಂಭದಲ್ಲಿ ಕೊಂಡಜ್ಜಿ ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಕಯಾಕಿಂಗ್ ಕ್ರೀಡೆ ಬಗ್ಗೆ ತಿಳಿದುಕೊಂಡರು. ಕೆನೋಯಿ ಸ್ಲಾಲಮ್ ಒಲಿಂಪಿಕ್ ಮಟ್ಟದ ಸ್ಪರ್ಧೆಯಾಗಿದ್ದರಿಂದ ಅತ್ತ ವಾಲಿದರು. ಕಳೆದ 10 ವರ್ಷಗಳಿಂದ ವಾಟರ್ ಸ್ಪೋರ್ಟ್ಸ್​ನಲ್ಲಿ ಬೆವರಿಳಿಸುತ್ತಿರುವ ದಾದಾಪೀರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎನ್ನುವ ಆಶಯ ಹೊಂದಿದ್ದಾರೆ.

2019ರಲ್ಲಿ ಮಧ್ಯ ಪ್ರದೇಶದಲ್ಲಿ ರಾಷ್ಟ್ರೀಯ ಕೆನೋಯಿ ಸ್ಲಾಲಮ್ ಮತ್ತು ಕಯಾಕಿಂಗ್ ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅದೇ ವರ್ಷ ಕೇರಳದ ಮಲಬಾರ್ ರಿವರ್ ಫೆಸ್ಟಿವಲ್​ನಲ್ಲಿ 18 ವರ್ಷದೊಳಗಿನ ಕೆನೋಯಿ ಸ್ಲಾಲಮ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಪ್ರತಿ ವರ್ಷ ರಾಷ್ಟ್ರೀಯ ಕಯಾಕಿಂಗ್ ಟೂರ್ನಿಗಳಲ್ಲಿ ದಾದಾಪೀರ್ ಪದಕ ಗೆದ್ದಿದ್ದಾರೆ. 2023ರ ಮಾರ್ಚ್​ನಲ್ಲಿ ಥಾಯ್ಲೆಂಡ್​ನಲ್ಲಿ ನಡೆದ ಏಷ್ಯನ್ ಚಾಂಪಿಯನ್​ಶಿಪ್​ನ ಕೆನೋಯಿ ಸ್ಲಾಲಮ್ ಮತ್ತು ಕಯಾಕಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರು.

ವಿವಿ ಸಾಗರದಲ್ಲಿ ತಯಾರಿ: ಮುಂದಿನ ಫೆಬ್ರವರಿಯಲ್ಲಿ ಉತ್ತರಾಖಂಡ್​ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕೆನೋಯಿ ಸ್ಲಾಲಮ್ ಮತ್ತು ಕಯಾಕಿಂಗ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದು, ಪದಕ ಜಯಿಸುವ ವಿಶ್ವಾಸವಿದೆ. ಕಳೆದ ನವೆಂಬರ್​ನಿಂದಲೇ ಹಿರಿಯೂರಿನ ವಾಣಿವಿಲಾಸ ಸಾಗರದಲ್ಲಿ ಅಭ್ಯಾಸ ಆರಂಭಿಸಲಾಗಿದೆ.

ಅಪ್ಪ ಬೀದಿಬದಿ ವ್ಯಾಪಾರಿ: ದಾದಾಪೀರ್ ಅವರ ತಂದೆ ಗೂಡಂಗಡಿ ವ್ಯಾಪಾರಿಯಾಗಿದ್ದು, ದಾವಣಗೆರೆಯ ಬಾಪೂಜಿ ಆಸ್ಪತ್ರೆ ಎದುರಿನ ಬೀದಿಬದಿಯಲ್ಲಿ ಫುಡ್ ಕ್ಯಾಂಟೀನ್ ನಡೆಸುತ್ತಿದ್ದಾರೆ. ಮಗನ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ದಾದಾಪೀರ್ ಅವರ ಖರ್ಚು ವೆಚ್ಚ ಎಲ್ಲವನ್ನು ಕ್ರೀಡಾ ಇಲಾಖೆಯಲ್ಲಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ನೋಡಿಕೊಳ್ಳುತ್ತಿದೆ.

ಕೆನೋಯಿ ಸ್ಲಾಲಮ್ ಎಂದರೇನು?: ಕೆನೋಯಿ ಸ್ಲಾಲಮ್ ಸ್ಪರ್ಧೆ ಹರಿಯುವ ನದಿಯಲ್ಲಿ ಮುನ್ನುಗ್ಗುವುದಾಗಿದೆ. ಅಪ್ ಸ್ಟೀಮ್ 7 ಹಾಗೂ ಡೌನ್ ಸ್ಟೀಮ್ 20 ಗೇಟ್​ಗಳನ್ನು ಹಾಕಲಾಗುತ್ತದೆ. 27 ಗೇಟ್​ಗಳನ್ನು ಸ್ಪರ್ಧಿಯು ಮುಟ್ಟದೇ ದಾಟಬೇಕಾಗಿರುತ್ತದೆ. ಅತಿ ಕಡಿಮೆ ಸಮಯದಲ್ಲಿ ಈ ಎಲ್ಲ ಗೇಟ್​ಗಳನ್ನು ಯಶಸ್ವಿಯಾಗಿ ದಾಟುವ ಸ್ಪರ್ಧಿ ವಿಜೇತರಾಗುತ್ತಾರೆ.

ಹರಿಯುವ ನದಿಯಲ್ಲಿ ಅಭ್ಯಾಸ: ಕೆನೋಯಿ ಸ್ಲಾಲಮ್ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಹರಿಯುವ ನದಿಗಳನ್ನು ಹುಡುಕಬೇಕು. ರಾಷ್ಟ್ರೀಯ ಚಾಂಪಿಯನ್​ಶಿಪ್​ಗಳು ಇದ್ದಾಗ ರಾಜ್ಯದ ಸ್ಪರ್ಧಿಗಳು ದಾಂಡೇಲಿಯಲ್ಲಿ ಹರಿಯುವ ನದಿಯಲ್ಲಿ ಅಭ್ಯಾಸ ನಡೆಸುತ್ತಾರೆ.

ವಿದೇಶದಲ್ಲಿ ಕೆನೋಯಿ ಸ್ಲಾಲಮ್ ಕ್ರೀಡೆಗೆ ಕೃತಕ ಟ್ರ್ಯಾಕ್​ಗಳನ್ನು ನಿರ್ವಿುಸಲಾಗಿದೆ. ಈ ತರಹದ ಕಾಲುವೆಗಳು ಭಾರತದಲ್ಲಿ ಇಲ್ಲ. ಹೀಗಾಗಿ ಇಲ್ಲಿನ ಸ್ಪರ್ಧಿಗಳು ಹರಿಯುವ ನದಿಯಲ್ಲಿಯೇ ಅಭ್ಯಾಸ ನಡೆಸುತ್ತಾರೆ.

ರಾಜ್ಯ ರೆಸ್ಕ್ಯೂ ತಂಡದ ಸದಸ್ಯ: ರಾಜ್ಯದಲ್ಲಿ ಎಲ್ಲಿಯಾದರೂ ಪ್ರವಾಹ, ಜಲಪ್ರಳಯದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ರೆಸ್ಕ್ಯೂ ತಂಡದಲ್ಲಿ ದಾದಾಪೀರ್ ಸದಸ್ಯರಾಗಿದ್ದಾರೆ. 2019 ರಲ್ಲಿ ಮಡಿಕೇರಿಯಲ್ಲಿ ಫ್ಲಡ್ ಬಂದ ಸಂದರ್ಭದಲ್ಲಿ ದಾದಾಪೀರ್ ಅವರಿದ್ದ ತಂಡ ಕಾರ್ಯನಿರ್ವಹಿಸಿತ್ತು. ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಇತರ ಸ್ಥಳಗಳಲ್ಲಿ ರೆಸ್ಕ್ಯೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಜಿಲ್ಲಾಡಳಿತ ಸವಲತ್ತು ನೀಡಲಿ: ದಾವಣಗೆರೆ ಹಾಗೂ ಸುತ್ತ-ಮುತ್ತಲಿನ ಕೆನೋಯಿ ಸ್ಲಾಲಮ್ ಕ್ರೀಡೆಯ ಸ್ಪರ್ಧಿಗಳು ಅಭ್ಯಾಸಕ್ಕಾಗಿ ವಿವಿ ಸಾಗರ ಹಾಗೂ ದಾಂಡೇಲಿಯನ್ನು ಅವಲಂಬಿಸಬೇಕಿದೆ. ಹೀಗಾಗಿ ಕುಂದುವಾಡ ಅಥವಾ ಕೊಂಡಜ್ಜಿ ಕೆರೆಗಳಲ್ಲಿ ಅಭ್ಯಾಸ ಮಾಡಲು ಜಿಲ್ಲಾಡಳಿತ ಸವಲತ್ತುಗಳನ್ನು ಒದಗಿಸಿ ಅವಕಾಶ ಕಲ್ಪಿಸಿದರೆ ಉತ್ತಮ ಪ್ರದರ್ಶನ ನೀಡಬಹುದಾಗಿದೆ.

ದಾದಾಪೀರ್ ಕೆನೋಯಿಂಗ್ ಸ್ಪರ್ಧೆಯಲ್ಲಿ ಭರವಸೆ ಹುಟ್ಟಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪದಕ ಜಯಿಸುವ ವಿಶ್ವಾಸವಿದೆ.

| ಶಬ್ಬೀರ್, ತರಬೇತುದಾರ

ಮೊದಲಿಗೆ ದಾದಾಪೀರ್ ಕಯಾಕಿಂಗ್ ಸ್ಪರ್ಧೆಯಲ್ಲಿದ್ದರು. ಕೆನೋಯಿಂಗ್ ಸ್ಪರ್ಧೆಗೆ ಸಜ್ಜುಗೊಳಿಸಿ ಎಂದು ತರಬೇತುದಾರ ಶಬ್ಬೀರ್ ಗೆ ಸೂಚಿಸಲಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ದಾದಾಪೀರ್ ಭರವಸೆ ಮೂಡಿಸಿದ್ದಾರೆ.

| ದೀಲಿಪ್ ಕುಮಾರ್, ರಾಜ್ಯ ಕಯಾಕಿಂಗ್ ಸಂಸ್ಥೆ ಕಾರ್ಯದರ್ಶಿ

Share This Article

ನಿಮ್ಮ ದೇಹವನ್ನು ಸ್ಲಿಮ್ ಮಾಡುವ 6 ಪ್ರಾಣಿಗಳು: ಪ್ರತಿದಿನ ಈ ರೀತಿ ಮಾಡಿದ್ರೆ ರಿಸಲ್ಟ್​ ಗ್ಯಾರಂಟಿ! Body Slim

Body Slim : ಈಗಿನ ಪೀಳಿಗೆಯ ಮಂದಿ ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ.…

ಈ 3 ರಾಶಿಯವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ… ಏಕೆ ಗೊತ್ತಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದಾಗುವ ಉಪಯೋಗವೇನು?: ನಿಮಗಾಗಿ ಹೆಲ್ತಿ ಮಾಹಿತಿ | Health Tips

ಅನೇಕ ಆಹಾರಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದು ಗೊತ್ತೆ ಇದೆ. ಕರಿಬೇವಿನ ಎಲೆಯನ್ನು ಬಳಸುವುದರಿಂದ ಚಟ್ನಿ ಅಥವಾ…