ಅಜಲಡ್ಕ ಕೆರೆಯಲ್ಲಿ ಜಲಸಿರಿ!

Ism_Ajaladka Lake
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾವಾಂತರ

ಬೇಸಿಗೆ ಕಾಲದಲ್ಲಿ ಬಿಸಿಲ ತಾಪಮಾನ ಹೆಚ್ಚುತ್ತಾ ಸಾಗುತ್ತಿದ್ದಂತೆಯೇ ಕೆರೆ, ಬಾವಿ, ತೋಡುಗಳಲ್ಲಿನ ನೀರು ಬತ್ತಿ ಹೋಗುವುದು, ನದಿಗಳಲ್ಲಿ ಜಲಮಟ್ಟ ದಿನದಿಂದ ದಿನಕ್ಕೆ ಇಳಿಮುಖವಾಗುವುದು ಸಹಜ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನ ಮಾಡಲಾಗಿರುವ ಒಳಮೊಗ್ರು ಗ್ರಾಮದ ಅಜಲಡ್ಕ ಕೆರೆಯಲ್ಲಿ ಈಗಲೂ ನೀರು ತುಂಬಿಕೊಂಡು ಜಲಸಂಪತ್ಭರಿತವಾಗಿದೆ.

ರಾಜ್ಯದಲ್ಲಿ ಒಟ್ಟು 804 ಕೆರೆಗಳನ್ನು ಅಭಿವೃದ್ಧಿ

ನೀರು ಇಂಗಿಸುವಿಕೆ ಕಾರ್ಯದ ಮೂಲಕ ನೀರಿನ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಲಕ್ಷಾಮ ಎದುರಾಗುವ ಅಪಾಯವಿದೆ ಎಂದು ಎಚ್ಚರಿಸುತ್ತಾ ನೀರಿನ ಸಂರಕ್ಷಣೆ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಆ ಭಾಗದ ರೈತಾಪಿ ವರ್ಗದ ಸಹಕಾರ ಪಡೆದುಕೊಂಡು ನಿರ್ಲಕ್ಷಿತ ಪುರಾತನ ಕೆರೆಗಳ ಪುನಶ್ಚೇತನ ಕಾರ್ಯ ನಡೆಸುತ್ತಿದೆ. ಆ ಭಾಗದ ರೈತಾಪಿ ವರ್ಗಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಯೋಜನೆಯ ವತಿಯಿಂದ ಈ ಕಾರ್ಯ ನಡೆಯುತ್ತಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಪುತ್ತೂರು ತಾಲೂಕು ವ್ಯಾಪ್ತಿಯ ಒಳಮೊಗ್ರು ಗ್ರಾಮದ ಅಜಲಡ್ಕ, ಅರಿಯಡ್ಕ ಗ್ರಾಮದ ಕೌಡಿಚ್ಚಾರು, ಬನ್ನೂರು ಗ್ರಾಮದ ಸೇಡಿಯಾಪು ಮತ್ತು ಉಪ್ಪಿನಂಗಡಿಯ 4 ಕೆರೆಗಳು ಸೇರಿದಂತೆ ಈಗಾಗಲೇ ರಾಜ್ಯದಲ್ಲಿ ಒಟ್ಟು 804 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಒಳಮೊಗ್ರು ಗ್ರಾಮ ಪಂಚಾಯಿತಿ ಮತ್ತು ಅಜಲಡ್ಕ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಅಜಲಡ್ಕದಲ್ಲಿ ಅಭಿವೃದ್ಧಿಪಡಿಸಲಾದ ‘ನಮ್ಮೂರ ನಮ್ಮ ಕೆರೆ’ ಪ್ರಸ್ತುತ ಕಡು ಬಿಸಿಲ ತಾಪವಾನದ ನಡುವೆಯೂ ನೀರಿನಿಂದ ತುಂಬಿಕೊಂಡಿದೆ. ಸುಮಾರು 4.40 ಲಕ್ಷ ರೂ. ವೆಚ್ಚದಲ್ಲಿ ಸುಮಾರು 1.71 ಎಕರೆ ವಿಸ್ತೀರ್ಣದ ಈ ಕೆರೆಯ ಅಭಿವೃದ್ಧಿ ಕಾರ್ಯ ನಡೆದಿದೆ. ಧರ್ಮಸ್ಥಳ ಯೋಜನೆಯಿಂದ 3.20 ಲಕ್ಷ ರೂ. ಮತ್ತು ಒಳಮೊಗ್ರು ಗ್ರಾ.ಪಂ.ನಿಂದ 1.20 ಲಕ್ಷ ರೂ. ವಿನಿಯೋಗಿಸಲಾಗಿದೆ. ಮಳೆಗಾಲದಲ್ಲಿ ಕೆರೆಯಲ್ಲಿ ಪೂರ್ತಿ ನೀರು ತುಂಬುತ್ತಿದ್ದು, ವರ್ಷ ಪೂರ್ತಿ ಕೆರೆಯಲ್ಲಿ ನೀರು ತುಂಬಿಕೊಂಡಿರುವುದು ಈ ಭಾಗದ ಜನತೆಗೆ ವಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಪಾಲಿಗೆ ವರದಾನವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಆಯಾ ಭಾಗದ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ರೈತಾಪಿ ಜನರ ಸಹಕಾರ ಪಡೆದುಕೊಂಡು ಈಗಾಗಲೇ ತಾಲೂಕಿನಲ್ಲಿ 4 ಕೆರೆಗಳ ಅಭಿವೃದ್ಧಿಪಡಿಸಲಾಗಿದೆ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವುದು, ಮಳೆಗಾಲದಲ್ಲಿ ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶದೊಂದಿಗೆ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕೆರೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಶಶಿಧರ್ ಎಂ.ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ. ಅಜಲಡ್ಕ ಕೆರೆಯ ಸಂರಕ್ಷಣೆ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದೆ. ಸದ್ಯಕ್ಕೆ ಕೆರೆಯು ವ್ಯವಸ್ಥಿತ ರೀತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದಲ್ಲಿ ಕೆರೆಯ ಹೂಳೆತ್ತುವುದು, ತಡೆಗೋಡೆ ನಿರ್ವಾಣ, ಕೆರೆ ಸುತ್ತ ಗಿಡ ನಾಟಿ ಇತ್ಯಾದಿ ಕಾರ್ಯಗಳನ್ನು ಮಾಡಲು ಅವಕಾಶವಿದೆ. ಕೆರೆ, ಬಾವಿಗಳ ಸಂರಕ್ಷಣೆಯ ವಿಷಯದಲ್ಲಿ ಗ್ರಾಮಸ್ಥರು ಕೂಡ ಜವಾಬ್ದಾರಿ ತೆಗೆದುಕೊಳ್ಳುವುದು ಅತಿಅಗತ್ಯ. ತ್ರಿವೇಣಿ ಪಲ್ಲತ್ತಾರು, ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net