

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕೆ ತಲುಪಿದ್ದು, ರಾಜಕೀಯ ಮುಖಂಡರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ರಾಜ್ಯದ ದಕ್ಷಿಣ 24 ಪರಗಣದಲ್ಲಿ ತಮ್ಮ ಸಾರ್ವಜನಿಕ ರ‍್ಯಾಲಿಯಲ್ಲಿ ವೇದಿಕೆಯ ಮೇಲೆ ಹಲವು ಮಹಿಳೆಯರೊಂದಿಗೆ ನೃತ್ಯ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದ ರ‍್ಯಾಲಿ ಮುಕ್ತಾಯವಾಗುತ್ತಿದ್ದಂತೆ, ಅವರು ವೇದಿಕೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಾಂಪ್ರದಾಯಿಕ ಗೀತೆಗೆ ನೃತ್ಯ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಮಹಿಳೆಯರೊಂದಿಗೆ ನಿಂತು ಕಾಲು ಕುಣಿಸುತ್ತಾ, ಅವರ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಂತರ ಅವರು ವೇದಿಕೆಯಿಂದ ಕೆಳಗಿಳಿದು, ನೃತ್ಯ ಮಾಡಲು ತನ್ನನ್ನು ಹುರಿದುಂಬಿಸಿದ ಜನರತ್ತ ಕೈ ಬೀಸಿದರು.
ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಲೋಕಸಭೆ ಚುನಾವಣೆಗೆ 72 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷವು ರಾಜ್ಯದಲ್ಲಿ ಪ್ರಬಲ ಮತ್ತು ಪ್ರಮುಖ ಪ್ರಚಾರವನ್ನು ನಡೆಸುತ್ತಿದೆ. ಜೂನ್ 1 ರಂದು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಸೇರಿದಂತೆ ಒಂಬತ್ತು ಸ್ಥಾನಗಳು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ.