More

  ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ನೀರು, ಕುಂದಾಪುರದಲ್ಲಿ ಅವ್ಯವಸ್ಥೆ, ರೋಗರುಜಿನಗಳಿಗೆ ಆಹ್ವಾನ

  ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

  ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ಚರಂಡಿ ಸೇರದೆ ಆಸ್ಪತ್ರೆ ವಠಾರದಲ್ಲೇ ಸಂಗ್ರಹಗೊಂಡಿದ್ದು ರೋಗರುಜಿನಗಳಿಗೆ ಆಹ್ವಾನ ನೀಡುತ್ತಿದೆ. ಇದರಿಂದ ಆಸ್ಪತ್ರೆ ವಾತಾವರಣ ಕಲುಷಿತವಾಗಿದೆ. ಆಸ್ಪತ್ರೆಗೆ ಸಂಬಂಧಪಟ್ಟ ಬಟ್ಟೆ, ಬೆಡ್‌ಶೀಟ್, ತಲೆದಿಂಬು ಕವರ್ ಇತ್ಯಾದಿ ಒಗೆಯಲೆಂದು ದೋಬಿ ಘಟಕ ಇದೆ. ಇಲ್ಲಿ ನೀರು ಸರಿಯಾಗಿ ಹರಿದು ಚರಂಡಿ ಸೇರದೆ ಒಂದೇ ಕಡೆ ನಿಂತಿದೆ. ಅದೂ ಅಲ್ಲಲ್ಲಿ ಇದೆ. ಇದೇ ಪರಿಸರದಲ್ಲಿ ಈಚೆಗಷ್ಟೇ ನವೀಕರಣಗೊಂಡ ನಂದಿಕೇಶ್ವರ ದೇವಸ್ಥಾನವೂ ಇದೆ. ಈ ದೇವಾಲಯ ಕೂಡ ಆಸ್ಪತ್ರೆ ಆಡಳಿತಕ್ಕೆ ಒಳಪಟ್ಟಿದೆ. ಆಸ್ಪತ್ರೆ ವಠಾರದಲ್ಲೇ ಇರುವ ಅಪೂರ್ವ ದೇವಾಲಯವಾಗಿದೆ. ದೇವಸ್ಥಾನ ನವೀಕರಣಗೊಂಡ ಬಳಿಕ ಇಲ್ಲಿಗೆ ಭಕ್ತರ ಆಗಮನ ಹೆಚ್ಚಾಗಿದೆ. ಹಾಗೆ ಬಂದ ಭಕ್ತರಿಗೆ ಈ ಪರಿಸರದ ದುರ್ನಾತ ಬೀರುವ ತ್ಯಾಜ್ಯ ನೀರು ಸ್ವಾಗತ ಕೋರುತ್ತಿರುವುದು ವಿಷಾದನೀಯ.

  ಸೊಳ್ಳೆ ಉತ್ಪತ್ತಿ ತಾಣ

  ಆಸ್ಪತ್ರೆಗೆ ಸಂಬಂಧಪಟ್ಟ ಬಟ್ಟೆ ಒಗೆಯುವ ಪರಿಸರದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ನೀರು ನಿಂತಿದೆ. ಸರಿಯಾಗಿ ಹರಿಯುತ್ತಿಲ್ಲ. ಇದರಿಂದಾಗಿ ಅಲ್ಲೆಲ್ಲ ಪರಿಸರ ಗಲೀಜಾಗಿದೆ. ಅಲ್ಲದೆ ತ್ಯಾಜ್ಯ ನೀರು ನಿಂತ ದೆಸೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿದೆ. ಆಸ್ಪತ್ರೆ ಪರಿಸರದಲ್ಲೇ ಸೊಳ್ಳೆಗಳು ಉತ್ಪತ್ತಿಯಾದರೆ ಅದರಿಂದ ಉಂಟಾಗುವ, ಹಬ್ಬುವ ಕಾಯಿಲೆಗಳಿಗೆ ಜವಾಬ್ದಾರರು ಯಾರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಎದ್ದಿದೆ.
  ಬೇರೆಯವರಿಗೆ ಒಳ್ಳೆಯದನ್ನು ಹೇಳಬೇಕಾದ, ಗಲೀಜು ನೀರು ನಿಲ್ಲಲು ಅವಕಾಶ ಮಾಡಿಕೊಡಬೇಡಿ ಎನ್ನುವ ಆಸ್ಪತ್ರೆ ಪರಿಸರದಲ್ಲೇ ಹೀಗಾದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಪರಿಸರದ ದುರ್ನಾತ ಬೀರುವ ತ್ಯಾಜ್ಯ ನೀರು ನಿಂತ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಎಸ್‌ಟಿಪಿ ಕೆಲಸದಿಂದ ತೊಂದರೆ

  ತ್ಯಾಜ್ಯ ನೀರು ಸಂಸ್ಕರಣ ಘಟಕದ ಕೆಲಸ ನಡೆಯುತ್ತಿದೆ. ನೀರು ಸರಿಯಾಗಿ ಹೋಗುವಂತೆ ಮಾಡುವ ಕಾಮಗಾರಿ ನಡೆಯುತ್ತಿದೆ. ಸಂಸ್ಕರಿತ ನೀರು ಹಾಗೂ ತ್ಯಾಜ್ಯ ನೀರಿನಿಂದ ಸಮಸ್ಯೆ ಆಗದಂತೆ ರಾಸಾಯನಿಕ ಮೊದಲಾದವನ್ನು ಹಾಕಲಾಗುತ್ತಿದೆ. ಇದರಿಂದಾಗಿ ನೀರು ನಿಂತಿದೆ ಎನ್ನಲಾಗುತ್ತಿದೆ.


  ಚರಂಡಿ ಅವ್ಯವಸ್ಥೆ

  ಆಸ್ಪತ್ರೆ ಆವರಣ ಗೋಡೆಯ ಹೊರಗೆ ಇರುವ ಚರಂಡಿಯಲ್ಲೂ ತ್ಯಾಜ್ಯ ನೀರು ನಿಂತಿರುತ್ತದೆ. ಸರಾಗವಾಗಿ ಹರಿಯುವುದಿಲ್ಲ. ಈ ಬಗ್ಗೆ ಪುರಸಭೆ ಸರಿಯಾಗಿ ಗಮನ ನೀಡುವುದಿಲ್ಲ. ಕೆಲವು ಬಾರಿ ಖುದ್ದಾಗಿ ಪುರಸಭೆಯ ಆಡಳಿತಾಧಿಕಾರಿಯಾಗಿಯೂ ಆಗಿರುವ ಸಹಾಯಕ ಕಮಿಷನರ್ ಅವರೇ ಛಾಯಾಚಿತ್ರ ತೆಗೆದು ಮುಖ್ಯಾಧಿಕಾರಿಗೆ ಕಳುಹಿಸಿ ಶುಚಿಮಾಡಿಸಿ ಎಂದದ್ದೂ ಇದೆ. ಇನ್ನಷ್ಟು ಬಾರಿ ರೆಡ್‌ಕ್ರಾಸ್ ಸಂಸ್ಥೆಯವರು ಮನವಿ ಮಾಡಿದ್ದೂ ಇದೆ. ರೆಡ್‌ಕ್ರಾಸ್ ಸಂಸ್ಥೆಯ ಕಚೇರಿ, ರಕ್ತನಿಧಿ ಬ್ಲಡ್ ಬ್ಯಾಂಕ್ ಇಲ್ಲೇ ಇರುವ ಕಾರಣ ಈ ಆವರಣದಲ್ಲಿ ಅತಿಯಾದ ಶುಚಿತ್ವದ ಅಗತ್ಯ ಇದೆ.

  ತ್ಯಾಜ್ಯ ನೀರು ಸಂಸ್ಕರಣೆಯ ಎಸ್‌ಟಿಪಿ ಕೆಲಸ ನಡೆಯುತ್ತಿದೆ. ಇದರಿಂದಾಗಿ ತತ್ಕಾಲದಲ್ಲಿ ಸಮಸ್ಯೆ ಆಗಿರಬಹುದು. ಕೆಲಸ ಪೂರ್ಣವಾದಾಗ ಸರಿಯಾಗುತ್ತದೆ.
  -ಡಾ.ರಾಬರ್ಟ್ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಾ ವೈದ್ಯಾಧಿಕಾರಿ, ಕುಂದಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts