More

    ರಸ್ತೆ ಬದಿ ಕಸದ ರಾಶಿಗೆ ಮುಕ್ತಿ : ಸಜೀಪಮುನ್ನೂರು ಗ್ರಾಪಂನಿಂದ ತೆರವು ಕಾರ್ಯ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ಸಜೀಪಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಬದಿ ರಾಶಿ ಬಿದ್ದಿದ ಕಸಕ್ಕೆ ಶುಕ್ರವಾರ ಮುಕ್ತಿ ಸಿಕ್ಕಿದೆ. ಇಲ್ಲಿನ ಮಾರ್ನಬೈಲು ಬಳಿ ರಸ್ತೆಯ ಇಳಿಜಾರಿನಲ್ಲಿ ರಸ್ತೆಯ ಅಂಚನ್ನು ಆಕ್ರಮಿಸಿಕೊಂಡಿದ್ದ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಸಜೀಪಮುನ್ನೂರು ಗ್ರಾ.ಪಂ. ಜೆಸಿಬಿ ಮೂಲಕ ತೆರವುಮಾಡಿ ಪರಿಸರ ಸ್ವಚ್ಛಗೊಳಿಸಿತು.

    ವಿಜಯವಾಣಿ ಮೇ 7ರಂದು ಬಂಟ್ವಾಳದಲ್ಲಿ ತ್ಯಾಜ್ಯ ವಿಲೇವಾರಿ ಅಸಮರ್ಪಕ ಎನ್ನುವ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ದ.ಕ. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಂದಿನ ಐದು ದಿನದೊಳಗಾಗಿ ಕಸ ತೆರವುಗೊಳಿಸಿ ವರದಿ ನೀಡುವಂತೆ ಸಜೀಪಮುನ್ನೂರು ಗ್ರಾ.ಪಂ.ಗೆ ಆದೇಶ ಹೊರಡಿಸಿದ್ದರ ಅನ್ವಯ ಈಗ ಪರಿಸರ ಸ್ವಚ್ಛಗೊಂಡಿದೆ.

    ಮಾರ್ನಬೈಲುವಿನಲ್ಲಿ ಕಸ ರಾಶಿ ಬೀಳುತ್ತಿದ್ದ ಈ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಮಾರಣ ಗುಳಿಗ ದೈವದ ಕಟ್ಟೆಯಿದೆ. ಇದೇ ಪರಿಸರದಲ್ಲಿ ಸಂಚಾರಿ ಪೊಲೀಸ್ ಠಾಣೆಯಿದೆ. ಇಳಿಜಾರು ಪ್ರದೇಶದ ಕೆಳಭಾಗದಲ್ಲಿ ವಾಸ್ತವ್ಯವಿರುವ ಅನೇಕ ಮನೆಗಳಿವೆ. ಆದರೆ ಇದ್ಯಾವುದನ್ನು ಗಮನಿಸದೆ ಕಸ ಎಸೆಯುವವರು ನಿರಂತರವಾಗಿ ಇಲ್ಲಿ ಕಸ ಎಸೆಯುತ್ತಿದ್ದಾರೆ. ಇದೇ ಪ್ರದೇಶದ ಆಸುಪಾಸಿನಲ್ಲಿ ಸಜೀಪಮುನ್ನೂರು ಗ್ರಾ.ಪಂ. ಕಸ ಎಸೆಯಬಾರದು, ಕಸ ಎಸೆದವರಿಗೆ ದಂಡ ವಿಧಿಸುವುದಾಗಿ ಸೂಚನಾ ಫಲಕ ಹಾಕಿದ್ದಾರೆ. ಆದರೆ ಸೂಚನೆ ಫಲಕಕ್ಕೆ ಮಾತ್ರ ಸೀಮಿತವಾಗಿ ಕಸ ಎಸೆಯುವರಿಗೆ ದಂಡ ವಿಧಿಸದ ಕಾರಣ ನಿತ್ಯ ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬೀಳುವಂತಾಗಿದೆ. ಇನ್ನು ಮುಂದೆಯಾದರೂ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿದರೆ ಮಾತ್ರ ಕಸ ಎಸೆಯುವವರಿಗೆ ಕಡಿವಾಣ ಬೀಳಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.

    ಸಜೀಪಮೂಡದಲ್ಲೂ ಸ್ವಚ್ಛತೆ

    ಸಜೀಪಮೂಡ ಗ್ರಾ.ಪಂ.ವ್ಯಾಪ್ತಿಯಲ್ಲೂ ಕೂಡ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ನೇತೃತ್ವದಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಂದೂರಿನ ಮಾಚಿದೇವ ಸಭಾಂಗಣದ ಬಳಿಯ ರಸ್ತೆಯ ತಿರುವಿನಲ್ಲಿ ಕಸದ ರಾಶಿ ಇತ್ತು. ಪಂಚಾಯಿತಿ ಮುತುವರ್ಜಿಯಲ್ಲಿ ಕಸವನ್ನು ತೆರವುಗೊಳಿಸಲಾಗಿದೆ. ಅದೇ ರೀತಿ ಕುಕ್ಕಿಪ್ಪಾಡಿ, ಕರಿಯಂಗಳ, ಕೆದಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಚಚ್ಛತಾ ಕಾರ್ಯ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts