ವಿಜಯವಾಣಿ ಸುದ್ದಿಜಾಲ ಗುರುಪುರ
ಕುಪ್ಪೆಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕೊಂದರ ಪಕ್ಕದಿಂದ ಹಾದು ಹೋಗಿರುವ ಪರಂಬೋಕು ತೋಡಿನ ತ್ಯಾಜ್ಯದಿಂದ ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಟ್ರೋಲ್ ಪಂಪ್ ಹಿಂಭಾಗದ ನಿವಾಸಿ ವಿನೋದ್ ಸಲ್ಡಾನ ಅವರ ಕೃಷಿ ಭೂಮಿ ನಾಮಾವಶೇಷವಾಗಿದೆ. ಮಳೆಗಾಲದಲ್ಲಂತೂ ಕೃಷಿ ಭೂಮಿ ತೋಡಿನ ತ್ಯಾಜ್ಯಗಳಿಂದ ಆವೃತವಾಗಿ ಇವರ ಪಾಡು ಹೇಳತೀರದು.
ಮಳೆಗಾಲದಲ್ಲಿ ತೋಡು ತುಂಬಿ ಹರಿದಾಗ ಪ್ಲಾಸ್ಟಿಕ್ ತ್ಯಾಜ್ಯವೆಲ್ಲ ಸಲ್ಡಾನ ಕೃಷಿಭೂಮಿ ಸೇರುತ್ತದೆ. ತೋಡಿನಲ್ಲಿ ಕುಪ್ಪೆಪದವು ಪೇಟೆಯ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ರಾಶಿಯಾಗಿ ಹರಿದು ಬರುತ್ತದೆ. ತೋಡು ಉಕ್ಕೇರಿದಾಗ ಮಳೆ ನೀರಿನೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಕೃಷಿ ಭೂಮಿಗೆ ಹರಿದು ಕೃಷಿ ಸಂಪೂರ್ಣ ನಾಶವಾಗುತ್ತದೆ. ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಕೃಷಿಗಾಗಿ ವರ್ಷಂಪ್ರತಿ ವ್ಯಯಿಸಿದ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಾರೆ.
ಗ್ರಾಮಕರಣಿಕರಿಂದ ಪೊಳ್ಳು ಭರವಸೆ: ಹಿಂದಿನ ಮಳೆಗಾಲದಲ್ಲಿ ಉಂಟಾಗಿದ್ದ ನಷ್ಟದ ಬಗ್ಗೆ ದೂರು ನೀಡಿದಾಗ, ಕಂದಾಯ ಇಲಾಖೆಯ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಫೋಟೊ ತೆಗೆದುಕೊಂಡಿದ್ದಲ್ಲದೆ, ನಿಮ್ಮ ಖಾತೆಗೆ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಹೇಳಿ ತೆರಳಿದ್ದರು. ಆದರೆ ದರೆ ಈವರೆಗೆ ಪರಿಹಾರ ಜಮೆಯಾಗಿಲ್ಲ ಎಂದು ಸಲ್ಡಾನ ದೂರುತ್ತಾರೆ.
ದೂರು ನೀಡಿದರೂ ಗೋಳು ಕೇಳೋರಿಲ್ಲ!
ಕುಪ್ಪೆಪದವು ಪೇಟೆಯ ತ್ಯಾಜ್ಯ ತೋಡಿನಲ್ಲಿ ಹರಿದು ಹೋಗದಂತೆ ಗೇಟ್ ಅಳವಡಿಸಲಾಗಿದ್ದರೂ, ಗೇಟ್ ಭರ್ತಿಯಾದಾಗ ತ್ಯಾಜ್ಯವು ಗೇಟ್‌ನ ಮೇಲಿಂದ ಹರಿಯುತ್ತದೆ. ಇಷ್ಟಲ್ಲದೆ, ಸ್ಥಳೀಯ ಕೇಲವರುಗೇಟ್‌ನ ಪಕ್ಕದಲ್ಲಿ ಅಗೆದು ದಾರಿ ವಾಡಿದ್ದಾರೆ. ಮನೆಗಳು, ಅಂಗಡಿಗಳು ಮತ್ತು ವಸತಿ ಸಮುಚ್ಛಯಗಳ ತ್ಯಾಜ್ಯವನ್ನು ಇದೇ ತೋಡಿಗೆ ಎಸೆಯಲಾಗುತ್ತದೆ. ಮಳೆಗಾಲದಲ್ಲಿ ತೋಡಿನ ತುಂಬೆಲ್ಲ ಹೂಳು ಮತ್ತು ತ್ಯಾಜ್ಯ ತುಂಬಿರುತ್ತದೆ. ಬೇಸಗೆಯಲ್ಲಿ ತೋಡು ಹಾಗೂ ಸುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಗುಡ್ಡೆಯಂತೆ ಬಿದ್ದುರುತ್ತದೆ. ಜೋರಾಗಿ ಮಳೆ ಬಂದು ತೋಡು ಉಕ್ಕೇರಿದಾಗ ಈ ತ್ಯಾಜ್ಯ ರಾಶಿ ಸಮೀಪದ ವಿನೋದ್ ಸಲ್ಡಾನ ಅವರ ಕೃಷಿಭೂಮಿಯನ್ನು ಸೇರುತ್ತವೆ. ತೋಡಿನಲ್ಲಿ ತುಂಬಿರುವ ಹೂಳು ಮತ್ತು ತ್ಯಾಜ್ಯ ವಿಲೇವಾರಿ ಮಾ ಡುವಂತೆ ಸಂಬಂಧಪಟ್ಟವರಿಗೆ ದೂರಿದರೂ ಸ್ಪಂದನೆ ಶೂನ್ಯವಾಗಿದೆ.

ಕೆಲವು ವರ್ಷದಿಂದ ಈ ಸಮಸ್ಯೆ ಆಗುತ್ತಿದ್ದು, ಈ ಬಗ್ಗೆ ದೂರಿದೂ ಕುಪ್ಪೆಪದವು ಪಂಚಾಯಿತಿಯಾಗಲೀ ಮುತ್ತೂರು ಪಂಚಾಯಿತಿಯಾಗಲೀ ಸೂಕ್ತ ಕ್ರಮ ಜರುಗಿಸಿಲ್ಲ. ಕೃಷಿಕರ ಬಗ್ಗೆ ಎರಡೂ ಪಂಚಾಯಿತಿ ಆಡಳಿತಕ್ಕ್ಕೆ ಕಿಂಚಿತ್ತೂ ಆಸಕ್ತಿ ಇದ್ದಂತಿಲ್ಲ. ಪ್ರತಿ ಮಳೆಗಾಲಕ್ಕೆ ನನ್ನ ಕೃಷಿ ನಾಶವಾಗುತ್ತಿದೆ. ಮುಂದಿನ ಮಳೆಗಾಲಕ್ಕೆ ಮುಂಚಿತವಾಗಿ ಎರಡೂ ಪಂಚಾಯಿತಿಗಳಿಂದ ಕೃಷಿಭೂಮಿ ಉಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕೆಲಸವಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ.
ವಿನೋದ್ ಸಲ್ಡಾನ, ಸಂತ್ರಸ್ತ ಕೃಷಿಕ
https://www.vijayavani.net/mescom-meeting-3