

ಮುಂಬೈ: ವಾಸಿಮ್ ಅಕ್ರಮ್(Wasim Akram) ಶುಭಮನ್ ಗಿಲ್(Shubman Gill) ಅವರನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿ ಮಾತನಾಡಿರುವುದು ಗಿಲ್ಗೆ ಹೆಮ್ಮೆಯ ಸಂಗತಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್(Salman Butt) ಹೇಳಿದ್ದಾರೆ.
ಇತ್ತೀಚಿನ ಎಲ್ಲಾ ಕ್ರಿಕೆಟ್ ಫಾರ್ಮೆಟ್ಗಳಲ್ಲಿ ಶುಭಮನ್ ಗಿಲ್ ನೀಡಿರುವ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳನ್ನು ಒಳಗೊಂಡಂತೆ ಕ್ರಿಕೆಟ್ ದಿಗ್ಗಜರ ಗಮನವನ್ನು ಸೆಳೆಯುತ್ತಿದೆ. ಓಡಿಐ, ಟೆಸ್ಟ್, ಟಿ-20 ಸೇರಿದಂತೆ ಎಲ್ಲಾ ಫಾರ್ಮೆಟ್ಗಳಲ್ಲಿ ಉತ್ತಮ ಪ್ರದರ್ಶನವನ್ನು ಗಿಲ್ ದಾಖಲಿಸಿದ್ದಾರೆ. ಈ ವರ್ಷದಲ್ಲಿ ನಡೆದ 50 ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ತದನಂತರ ಐಪಿಎಲ್(IPL) ಲೀಗ್ನಲ್ಲಿಯೂ ಕೂಡ ಶತಕಗಳ ಸರದಾರನಾಗಿ ಮಿಂಚಿದ ಶುಭಮನ್ ಗಿಲ್, 17 ಪಂದ್ಯಗಳನ್ನು ಆಡಿ 890 ರನ್ ಗಳಿಸುವ ಮುಖೇನ 2023ರ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಪಟ್ಟ ಅಲಂಕರಿಸಿದರು.
ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿಯನ್ನು ಮೆಚ್ಚಿ ಮಾತನಾಡುತ್ತಿರುವ ಕ್ರಿಕೆಟ್ ದಿಗ್ಗಜ್ಜರ ಪೈಕಿ, ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ವಾಸಿಮ್ ಅಕ್ರಮ್ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. "ನಾನು ಶುಭಮನ್ ಗಿಲ್ಗೆ ಟ್ವಿ-20 ಫಾರ್ಮೆಟ್ನಲ್ಲಿ ಬೋಲಿಂಗ್ ಮಾಡುವುದು ಏಕದಿನ ಪಂದ್ಯದಲ್ಲಿ ಮೊದಲ 10 ಓವರ್ಗಳನ್ನು ಸಚಿನ್ ತೆಂಡೂಲ್ಕರ್(Sachin Tendulkar) ಅವರಿಗೆ ಮಾಡಿದಂತೆ"ಎಂದು ವಾಸಿಮ್ ಅಕ್ರಮ್ ಹೇಳಿದರು.
ವಾಸಿಮ್ ಅಕ್ರಮ್ ಅವರ ಈ ಹೇಳಿಕೆಯನ್ನು ಬೆಂಬಲಿಸಿದ ಕ್ರಿಕೆಟಿಗ ಸಲ್ಮಾನ್ ಬಟ್, "ವಾಸಿಮ್ ಬೈ ಅವರು ಶುಭಮನ್ ಗಿಲ್ ಅವರನ್ನು ಸಚಿನ್ ಅವರಿಗೆ ಹೋಲಿಸಿ ಹೊಗಳಿರುವುದು ನಿಜಕ್ಕೂ ಗಿಲ್ ಅವರಿಗೆ ಹೆಮ್ಮೆಯ ಸಂಗತಿ. ಶುಭಮನ್ ಗಿಲ್ ಈ ಎಲ್ಲಾ ಹೇಳಿಕೆಗಳಿಗೆ ಅರ್ಹರಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಶುಭಮನ್ ಅವರ ಬ್ಯಾಟಿಂಗ್ ಪ್ರದರ್ಶನ ಅತ್ಯುತ್ತಮವಾಗಿದೆ. ಮುಂಬರುವ ಎಲ್ಲಾ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ಕೊಡಲಿದ್ದಾರೆ"ಎಂದು ಸಲ್ಮಾನ್ ಅವರು ಹೇಳಿದ್ದಾರೆ.