123 ವರ್ಷ ಬಳಿಕ ಅಕ್ಟೋಬರ್​ನಲ್ಲಿ ಬೆಚ್ಚಗಿನ ವಾತಾವರಣ:ದೇಶದ ಕೆಲ ರಾಜ್ಯದಲ್ಲಿ ಅಧಿಕ ಉಷ್ಣಾಂಶ

bisilu
Published on

ಬೆಂಗಳೂರು: ದೇಶದಲ್ಲಿ 2024ರ ಅಕ್ಟೋಬರ್​ನಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್​ಗಢದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ವರದಿಯಾಗಿದೆ.ಈ ಮೂಲಕ 1951ರ ಅಕ್ಟೋಬರ್​ನಲ್ಲಿ ವರದಿಯಾಗಿದ್ದ ತಾಪಮಾನ ದಾಖಲೆಯನ್ನು ಮುರಿದಿದೆ.

1901ರ ಅಕ್ಟೋಬರ್​ನಲ್ಲಿ ದೇಶದಲ್ಲಿ ಅತಿ ಹೆಚ್ಚು ತಾಪಮಾನ ವರದಿಯಾಗಿತ್ತು.123 ವರ್ಷ ಬಳಿಕ ದೇಶದಲ್ಲಿ ಅಕ್ಟೋಬರ್​ನಲ್ಲಿ ಅತಿ ಉಷ್ಣಾಂಶ ಕಂಡುಬಂದಿದೆ. ಇದಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು. ಪ್ರಸಕ್ತ ತಿಂಗಳ ಎರಡು ವಾರವರೆಗೆ ದೇಶದ ಕೆಲ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈ ಬಾರಿ ನೈಋತ್ಯ ಮಾನ್ಸೂನ್​( ಮುಂಗಾರು) ತಡವಾಗಿ ವಾಪಸ್​ ಪಡೆದಿರುವುದು ಸೇರಿ ಇತರೆ ಕಾರಣಗಳಿಂದ ಕೆಲ ರಾಜ್ಯಗಳಲ್ಲಿ ಅಕ್ಟೋಬರ್​ನಲ್ಲಿ ತಾಪಮಾನ ಜಾಸ್ತಿಯಾಗಿದೆ.ಅಲ್ಲದೆ, ದೇಶದ ಈಶಾನ್ಯ, ಮಧ್ಯ ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಚ್ಚಗಿನ ವಾತಾವರಣ ಇರಲಿದೆ. ಬಳಿಕ ಕ್ರಮೇಣವಾಗಿ ಉಷ್ಣಾಂಶ ಇಳಿಕೆಯಾಗಲಿದೆ. ಪ್ರಸಕ್ತ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್​ನಲ್ಲಿ "ಲಾ-ನಿನಾ' ಆರಂಭವಾದರೆ ಈ ಬಾರಿ ತೀವ್ರ ಚಳಿ ಕಾಣಿಸಿಕೊಳ್ಳಲಿದೆ. ಆದರೆ, ಲಾ&ನಿನಾ ಈವರೆಗೆ ಆರಂಭವಾಗಿಲ್ಲ.

ಇತ್ತೀಚಿನ ಜಾಗತಿಕ ತಾಪಮಾನ ಮೂನ್ಸೂಚನೆ ಮೇರೆಗೆ ಡಿಸೆಂಬರ್​ನಲ್ಲಿ "ಲಾ ನಿನಾ' ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಚಳಿಗಾಲದ ಸ್ವರೂಪ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಸಂಶೋಧನೆಯಲ್ಲಿ ತೊಡಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net