

ಕೊಲಂಬೊ: ಜುಲೈ 26ರಿಂದ ಭಾರತದ ವಿರುದ್ಧ ಆರಂಭವಾಗಲಿರುವ ಏಕದಿನ ಹಾಗೂ ಟಿ20 ಸರಣಿಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಶಾಕ್ ಎದುರಾಗಿದ್ದು, ನಾಯಕತ್ವದಿಂದ ಸ್ಪಿನ್ನರ್ ವನಿಂದು ಹಸರಂಗಾ ಕೆಳಗಿಳಿದಿದ್ದಾರೆ. ಭಾರತದ ವಿರುದ್ಧದ ಸರಣಿಗೂ ಮುನ್ನ ಸ್ಪಿನ್ನರ್ನ ಈ ನಿರ್ಧಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ.
ಇತ್ತೀಚಿಗೆ ಮುಕ್ತಾಯಗೊಂಡ 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಶ್ರೀಲಂಕಾ ಕ್ರಿಕೆಟ್ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಪ್ರವೇಶಿಸದೆ ನಿರ್ಗಮಿಸಿತ್ತು. ಈ ಹಿನ್ನೆಲೆಯಲ್ಲಿ ವನಿಂದು ಹಸರಂಗಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾ ಕ್ರಿಕೆಟ್ ಆಟಗಾರನಾಗಿ ನನ್ನ ಅತ್ಯುತ್ತಮ ಸೇವೆಯನ್ನು ಹೊಂದಿರುತ್ತದೆ. ನಾನು ಯಾವಾಗಲೂ ನನ್ನ ತಂಡ ಮತ್ತು ನಾಯಕತ್ವವನ್ನು ಬೆಂಬಲಿಸಿ ನಿಲ್ಲುತ್ತೇನೆ ಎಂದು ವನಿಂದು ಹಸರಂಗಾ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಸಲ್ಲಿಸಲಾಗಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವನಿಂದು ಹಸರಂಗಾ ನಾಯಕನಾಗಿ ತಂಡವನ್ನು 10 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.