

ಹುಬ್ಬಳ್ಳಿ: ಎರಡೂವರೆ ದಶಕಗಳಿಂದ ಪ್ರಯಾಣಿಕರ ಸಾರಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿರುವ ನಾಡಿನ ಪ್ರತಿಷ್ಠಿತ ವಿಜಯಾನಂದ ಟ್ರಾವಲ್ಸ್ನ ಚಾಲಕರು, ಪ್ರಯಾಣಿಕರೊಬ್ಬರು ಬಸ್ ಇಳಿಯುವಾಗ ಮರೆತುಹೋಗಿದ್ದ ನಗದು ಹಾಗೂ ಲ್ಯಾಪ್ಟಾಪ್ ಕಂಪ್ಯೂಟರ್ ಇದ್ದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೃಷ್ಣ ಧನ್ವಂತ್ರಿ ಎಂಬ ಪ್ರಯಾಣಿಕ ಬೆಳಗಾವಿಯಿಂದ ಬರೋಡಾಕ್ಕೆ ಪ್ರಯಾಣಿಸಿದ್ದರು. ಬರೋಡಾದಲ್ಲಿ ಇಳಿಯುವಾಗ ಬ್ಯಾಗ್ ಮರೆತು ಹೋಗಿದ್ದರು. ಈ ಬ್ಯಾಗಿನಲ್ಲಿ 55 ಸಾವಿರ ನಗದು ಹಾಗೂ ಬೆಲೆ ಬಾಳುವ ಲ್ಯಾಪ್ಟಾಪ್ ಇತ್ತು.
ಇದನ್ನು ಗಮನಿಸಿದ ಬಸ್ ಚಾಲಕರಾದ ಐ.ಎಂ. ಫಣಿಬಂದ ಹಾಗೂ ಉಮೇಶ ಸಂಕಪಾಲ ತಕ್ಷಣ ಸಂಸ್ಥೆಯ ಪ್ರಧಾನ ಕಚೇರಿಯನ್ನು ಸಂರ್ಪಸಿ ವಿಷಯ ತಿಳಿಸಿದರು. ಬಳಿಕ, ಹಣ ಮತ್ತು ಲ್ಯಾಪ್ಟಾಪ್ ಹೊಂದಿದ್ದ ಬ್ಯಾಗನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ.
ವಿಆರ್ಎಲ್ ಟ್ರಾವಲ್ಸ್ ಬಸ್ ಚಾಲಕರ ಪ್ರಾಮಾಣಿಕತೆಯನ್ನು ಕೊಂಡಾಡಿರುವ ಪ್ರಯಾಣಿಕ ಕೃಷ್ಣ ಧನ್ವಂತ್ರಿ ಈ ಚಾಲಕರಿಗೆ ಮತ್ತು ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದ್ದು, ಫೇಸ್ಬುಕ್ನಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.
ವಿಆರ್ಎಲ್ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವವರು ಮರೆತು ಹೋಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಉದಾಹರಣೆಗಳು ಈ ಹಿಂದೆಯೂ ಸಾಕಷ್ಟು ಬಾರಿ ನಡೆದಿವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಪ್ರಭು ಸಾಲಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗೆ ನಗದು ಬಹುಮಾನ
ಪ್ರಯಾಣಿಕರ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸುವುದನ್ನು, ಪ್ರಾಮಾಣಿಕ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಬ್ಬರೂ ಚಾಲಕರಿಗೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ನಗದು ಬಹುಮಾನ ಘೊಷಿಸಿದ್ದಾರೆ.
ನಾನು ಜಾಸ್ತಿ ಲಗೇಜ್ ತೆಗೆದುಕೊಂಡು ಬಂದಿದ್ದೆ. ಬಸ್ ಇಳಿಯುವಾಗ ಕ್ಯಾಷ್ಬ್ಯಾಗ್ ಮತ್ತು ಲ್ಯಾಪ್ಟಾಪ್ ಬಿಟ್ಟಿರುವುದು ನಂತರ ಗಮನಕ್ಕೆ ಬಂದಿತು. ಆತಂಕಗೊಂಡು, ಕೂಡಲೇ ವಿಆರ್ಎಲ್ ಕಚೇರಿಯಿಂದ ಚಾಲಕರ ಮೊಬೈಲ್ ಪೋನ್ ನಂಬರ್ ಪಡೆದುಕೊಂಡು ಕರೆ ಮಾಡಿದಾಗ, ಬ್ಯಾಗ್ ಅನ್ನು ಸಂಸ್ಥೆಯ ಅಹಮದಾಬಾದ್ ಕಚೇರಿಗೆ ತಲುಪಿಸುತ್ತಿರುವುದಾಗಿ ತಿಳಿಸಿದರು. ಅತ್ಯಂತ ಪ್ರಾಮಾಣಿಕವಾಗಿ ನನ್ನ ವಸ್ತುಗಳನ್ನು ಮರಳಿಸಿದ್ದಾರೆ. ಇಂಥ ಚಾಲಕರನ್ನು ಹೊಂದಿರುವ ಕನ್ನಡಿಗರ ಹೆಮ್ಮೆಯ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಎಂ.ಡಿ. ಆನಂದ ಸಂಕೇಶ್ವರ ಅವರಿಗೆ ಅಭಿನಂದನೆಗಳು. | ಕೃಷ್ಣ ಧನ್ವಂತರಿ ಪ್ರಯಾಣಿಕ