More

    ಮತಗಟ್ಟೆಗೆ ಬಣ್ಣದ ಚಿತ್ತಾರ

    -ಸಂದೀಪ್ ಸಾಲ್ಯಾನ್ ಬಂಟ್ವಾಳ

    ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ 9 ಮತಗಟ್ಟೆಗಳಲ್ಲಿ ಬಣ್ಣದ ಚಿತ್ತಾರಗಳು ಪಡಿಮೂಡುತ್ತಿವೆ. ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಉದ್ದೇಶದಿಂದ 9 ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಿದ್ದು, ಚಿತ್ರಕಲಾ ಶಿಕ್ಷಕರ ತಂಡ ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸಿ ಹೊಸ ಲುಕ್ ನೀಡುತ್ತಿದ್ದಾರೆ.

    ಮತಗಟ್ಟೆಗಳಲ್ಲಿ ಚಿತ್ರ ಬಿಡಿಸುವ ಕಾರ್ಯ ಮಾ.23ರಂದು ಆರಂಭಗೊಂಡಿದ್ದು, ಮುಂದಿನ 10-15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 13 ಚಿತ್ರಕಲಾ ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದ್ದು, ಶಿಕ್ಷಕರು ಮೂರು ತಂಡಗಳಾಗಿ ಚಿತ್ತಾರಗಳನ್ನು ಬಿಡಿಸಲಿದ್ದಾರೆ. ಒಟ್ಟು 5 ವಿಷಯಗಳಲ್ಲಿ ಚಿತ್ರ ಬಿಡಿಸಲಾಗುವುದು.

    5 ವಿಷಯಗಳಲ್ಲಿ ವಿಭಾಗ

    ಕಳೆದ ಬಾರಿಯಂತೆ ಈ ಬಾರಿಯೂ ವಿವಿಧ ಚಿತ್ತಾರಗಳು ಮತಗಟ್ಟೆ ಗೋಡೆಗಳನ್ನು ಅಲಂಕರಿಸಲಿವೆ. ಒಟ್ಟು 5 ವಿಷಯಗಳಲ್ಲಿ ಮತಗಟ್ಟೆಗಳನ್ನು ವಿಭಾಗಿಸಲಾಗಿದ್ದು, ಆಯಾಯ ವಿಷಯಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಸಾಂಪ್ರದಾಯಿಕ ಮತಗಟ್ಟೆ(ಯಕ್ಷಗಾನ)ಯಾಗಿ ಮಂಚಿ ಕುಕ್ಕಾಜೆ ಗ್ರಾಪಂ ಕಚೇರಿ, ಅಂಗವಿಕಲರ ನಿರ್ವಹಣೆಯ ಮತಗಟ್ಟೆಯಾಗಿ ಬೋಳಂತೂರು ಸರ್ಕಾರಿ ಹಿ.ಪ್ರಾ.ಶಾಲೆ, ಸಖಿ ಮತಗಟ್ಟೆಗಳಾಗಿ ಕಡಂಬು ಸರ್ಕಾರಿ ಹಿ.ಪ್ರಾ ಶಾಲೆ, ಬಡಗಕಜೆಕಾರು ಮಾಡಪಲ್ಕೆ ಸರ್ಕಾರಿ ಹಿ.ಪ್ರಾ ಶಾಲೆ, ನರಿಕೊಂಬು ಬೋಳಂತೂರು ಸರ್ಕಾರಿ ಹಿ.ಪ್ರಾ ಶಾಲೆ, ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗ, ಸಿದ್ದಕಟ್ಟೆ ಸೇಂಟ್ ಪ್ಯಾಟ್ರಿಕ್ ಅನುದಾನಿತ ಹಿ.ಪ್ರಾ ಶಾಲೆ, ಯುವಜನ ನಿರ್ವಹಣೆಯ ಮತಗಟ್ಟೆಗಳಾಗಿ ಲೊರೆಟ್ಟೊ ಅನುದಾನಿತ ಹಿ.ಪ್ರಾ ಶಾಲೆ, ಧ್ಯೇಯ ಆಧಾರಿತ ಮತಗಟ್ಟೆಗಳಾಗಿ ಮೂರ್ಜೆ ಸರ್ಕಾರಿ ಹಿ.ಪ್ರಾ ಶಾಲೆ ಗಮನ ಸೆಳೆಯಲಿದೆ.

    ತಂಡ ರಚನೆ

    ಸ್ವೀಪ್ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯ ನಡೆಯಲಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ ತಾಲೂಕಿನ ಸ್ವೀಪ್ ಮುಖ್ಯಸ್ಥರಾಗಿದ್ದಾರೆ. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಮಾರ್ಗದರ್ಶನದಲ್ಲಿ ಶಿಕ್ಷಕರು ಈ ಕಾರ್ಯ ನಿರ್ವಹಿಸಲಿದ್ದಾರೆ. ಮೊದಲನೇ ತಂಡದಲ್ಲಿ ಶಿಕ್ಷಕ ವಿಠಲ ನಾಯಕ್ ನೋಡಲ್ ಅಧಿಕಾರಿಯಾಗಿದ್ದು, ಸಜಿಪ ಸರ್ಕಾರಿ ಪ.ಪೂ ಕಾಲೇಜಿನ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ತಾರಾನಾಥ ಕೈರಂಗಳ, ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಅಮೀನಾ ಶೇಖ್, ಕುರ್ನಾಡು ಸರ್ಕಾರಿ ಪ.ಪೂ. ಕಾಲೇಜು ಶಿಕ್ಷಕ ಸತೀಶ ಹಾಗೂ ಮೊಂಟೆಪದವು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ರೂಪಾ ಸಾವಕ್ಕನವರ ತಂಡದಲ್ಲಿದ್ದಾರೆ.

    2ನೇ ತಂಡದಲ್ಲಿ ಮಹೇಶ್ ಕುಮಾರ್ ನೋಡಲ್ ಅಧಿಕಾರಿಯಾಗಿದ್ದು, ಚಿತ್ರಕಲಾ ಶಿಕ್ಷಕರಾದ ಪೆರ್ನೆ ಶ್ರೀ ರಾಮಚಂದ್ರ ಪ್ರೌಢಶಾಲೆ ಶಿಕ್ಷಕ ಚೆನ್ನಕೇಶವ ಡಿ.ಆರ್., ಪೊಳಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮುರಳೀಧರ ಆಚಾರ್ ಎನ್., ಕೊಯಿಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಧನಂಜಯ ಕೆ., ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ನಳಿನಾಕ್ಷಿ ತಂಡದಲ್ಲಿದ್ದಾರೆ. 3ನೇ ತಂಡದಲ್ಲಿ ಸುರೇಖಾ ಯಳವಾರ ನೋಡಲ್ ಅಧಿಕಾರಿಯಾಗಿದ್ದು, ಚಿತ್ರಕಲಾ ಶಿಕ್ಷಕರಾದ ವಾಮದಪದವು ಸ.ಪ.ಪೂ.ಕಾಲೇಜಿನ ಶಿಕ್ಷಕ ಮುರಳೀಕೃಷ್ಣ ರಾವ್, ವಿಟ್ಲ ಸರ್ಕಾರಿ ಪ್ರೌಢಶಾಲೆ(ಆರ್‌ಎಂಎಸ್‌ಎ) ಶಿಕ್ಷಕ ಉಮೇಶ್ ಎಸ್.ಜೆ., ಕಡೇಶ್ವಾಲ್ಯ ಸರ್ಕಾರಿ ಪ್ರೌಢಶಾಲೆಯ ಸತ್ಯಶಂಕರ್ ಹಾಗೂ ವಿಟ್ಲ ಸರ್ಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಉದಯ ತಂಡದಲ್ಲಿದ್ದಾರೆ.

    ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 9 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಿ ಚಿತ್ರಗಳನ್ನು ಬಿಡಿಸುವ ಕಾರ್ಯ ನಡೆಯಲಿದೆ. ಅದರಲ್ಲಿ 5 ಸಖಿ ಮತಗಟ್ಟೆಗಳು ಹಾಗೂ 4 ಮತಗಟ್ಟೆಗಳನ್ನು ಇತರ ವಿಷಯದ ಆಧಾರದಲ್ಲಿ ಆಯ್ಕೆ ಮಾಡಿ ಚಿತ್ರ ಬಿಡಿಸುವ ಕಾರ್ಯ ಆರಂಭಗೊಂಡಿದೆ.
    -ರಾಹುಲ್ ಕಾಂಬ್ಳೆ
    ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ತಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts