More

    14 ಲೋಕಸಭಾ ಕ್ಷೇತ್ರಗಳಿಗೆ ಮತದಾನ; 2.88 ಕೋಟಿ ಮತದಾರರಿಗೆ ಮತದಾನದ ಹಕ್ಕು

    ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

    ಮೊದಲ ಹಂತದಲ್ಲಿ 1,44,17,530 ಪುರುಷ, 1,43,87,585 ಮಹಿಳೆಯರು, 211 ಇತರೆ ಹಾಗೂ ಸೇವಾ ಮತದಾರರು ಸೇರಿದಂತೆ ಒಟ್ಟು 2,88,19,342 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ 30,602 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

    ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಎಪಿಕ್‌ಕಾರ್ಡ್ ಇಲ್ಲದಿದ್ದರೆ 12 ಪರ್ಯಾಯ ದಾಖಲೆಗಳಲ್ಲೊಂದನ್ನು ತೋರಿಸಿ ಮತದಾನ ಮಾಡಬಹುದು.
    * ಆಧಾರ್ ಕಾರ್ಡ್
    *ನರೇಗಾ ಜಾಬ್ ಕಾರ್ಡ್
    *ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು
    *ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
    *ಚಾಲನಾ ಪರವಾನಗಿ
    *ಪಾನ್ ಕಾರ್ಡ್
    *ಎನ್‌ಪಿಆರ್ ಅಡಿ ಆರ್‌ಜಿಐ ನೀಡಿದ ಸ್ಮಾರ್ಟ್‌ಕಾರ್ಡ್
    *ಭಾರತೀಯ ಪಾಸ್‌ಪೋರ್ಟ್
    *ಭಾವಚಿತ್ರವಿರುವ ಪಿಂಚಣಿ ದಾಖಲೆ
    *ಕೇಂದ್ರ, ರಾಜ್ಯ ಸರ್ಕಾರ, ಪಿಎಸ್‌ಯು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ
    *ಎಂಪಿ/ಎಂಎಲ್‌ಎ/ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
    * ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ಅಂಗವೈಕಲ್ಯದ ಐಡಿ ಕಾರ್ಡ್

    ಈ ಚುನಾವಣೆಯಲ್ಲಿ ಅಳಿಸಲಾಗದ ಶಾಯಿಯನ್ನು ಮತದಾರರ ಎಡಗೈ ತೋರು ಬೆರಳಿಗೆ ಹಚ್ಚಲಾಗುತ್ತದೆ.

    ಮತದಾನದ ಸಮಯ
    ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಸಂಜೆ 6ರ ನಂತರ ಮತಗಟ್ಟೆಗೆ ಬರುವವರಿಗೆ ಮತದಾನಕ್ಕೆ ಅವಕಾಶ ದೊರೆಯುವುದಿಲ್ಲ. ಅದಕ್ಕೂ ಮೊದಲೇ ಬಂದು ಸರತಿಯಲ್ಲಿ ನಿಂತಿದ್ದರೆ ಅವಕಾಶ ನೀಡಲಾಗುತ್ತದೆ.

    *ಮತದಾನ ನಡೆಯುವ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.

    *ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 65 ಕಂಪನಿ ಅರೆಸೇನಾ ಪಡೆ, 50 ಸಾವಿರ ಸಿವಿಲ್ ಪೊಲೀಸ್ ಬಳಕೆ ಮಾಡುತ್ತಿದ್ದು, 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, 19,701 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮಾಡಲಾಗುತ್ತದೆ. 5ಸಾವಿರ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

    ಕ್ಯೂಆರ್ ಕೋಡ್ ವೋಟರ್ ಸ್ಲಿಪ್
    ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಅದನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ.

    ನಿಮ್ಮ ಮತಗಟ್ಟೆ ತಿಳಿಯಿರಿ, ಸ್ಪರ್ಧಿಸಿರುವ ಅಭ್ಯರ್ಥಿಗಳು, ಚುನಾವಣಾ ವೇಳಾಪಟ್ಟಿ, ಪಾರ್ಕಿಂಗ್ ಸ್ಥಿತಿ, ಸರದಿ ಸ್ಥಿತಿ, ಹಿಂದಿನ ಚುನಾವಣಾ ವಿವರ, ಅಧಿಕಾರಿಗಳ ಪಟ್ಟಿ, ಸಮೀಪದ ಪೊಲೀಸ್ ಠಾಣೆ, ಆರೋಗ್ಯ ಸವಲತ್ತು ಸೇರಿದಂತೆ ಮತದಾರರಿಗೆ ಹಲವು ಮಾಹಿತಿಗಳು ಚುನಾವಣಾ ಆಪ್‌ನಲ್ಲಿ ದೊರೆಯಲಿವೆ.

    ಮುಖ್ಯಾಂಶಗಳು:
    ಒಟ್ಟು ಅಭ್ಯರ್ಥಿಗಳು -247
    ಪುರುಷರು -226
    ಮಹಿಳೆಯರು -21
    ಒಟ್ಟು ಲೋಕಸಭಾ ಕ್ಷೇತ್ರಗಳು-14
    ಕಾಂಗ್ರೆಸ್ ಅಭ್ಯರ್ಥಿಗಳು-14
    ಬಿಜೆಪಿ- 11
    ಜೆಡಿಎಸ್-3
    ಒಟ್ಟು ಮತದಾರರು: 2,88,19,342
    ಪುರುಷರು- 1,44,17,530
    ಮಹಿಳೆಯರು 1,43,87,585
    ತೃತೀಯ ಲಿಂಗಿಗಳು- 3,067
    ಸೇವಾ ಮತದಾರರು 11,160
    ಯುವ ಮತದಾರರು(18-19) 5,99,444
    ದಿವ್ಯಾಂಗ ಮತದಾರರು 2,76, 042
    85 ವರ್ಷ ಮೇಲ್ಪಟ್ಟವರು 3,40,856
    ಸಾಗರೋತ್ತರ ಮತದಾರರು- 2,849

    ಮತದಾನ ನಡೆಯುವ ಕ್ಷೇತ್ರಗಳು:
    ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ( ಎಸ್ಸಿ ಮೀಸಲು ಕ್ಷೇತ್ರ), ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ (ಎಸ್ಸಿ ಮೀಸಲು ಕ್ಷೇತ್ರ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ(ಎಸ್ಸಿ ಮೀಸಲು ಕ್ಷೇತ್ರ)

    ಜಿದ್ದಾಜಿದ್ದಿನ ಕ್ಷೇತ್ರಗಳು:
    *ಬೆಂಗಳೂರು ಗ್ರಾಮಾಂತರ
    *ಮಂಡ್ಯ
    *ಮೈಸೂರು-ಕೊಡಗು
    *ಚಾಮರಾಜನಗರ
    *ಹಾಸನ

    ಅಖಾಡಕ್ಕಿಳಿದಿರುವ ಪ್ರಮುಖರು
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಾ.ಸಿ.ಎನ್.ಮಂಜುನಾಥ್, ಸಂಸದ ಡಿ.ಕೆ. ಸುರೇಶ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಪ್ರಜ್ವಲ್ ರೇವಣ್ಣ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಡಾ. ಕೆ.ಸುಧಾಕರ್, ಗೋವಿಂದ ಕಾರಜೋಳ, ಮುದ್ದಹನುಮೇಗೌಡ, ಕೋಟಾ ಶ್ರೀನಿವಾಸ ಪೂಜಾರಿ, ಜಯಪ್ರಕಾಶ್ ಹೆಗಡೆ, ರಾಜೀವ್ ಗೌಡ, ತೇಜಸ್ವಿ ಸೂರ್ಯ, ಸೌಮ್ಯ ರೆಡ್ಡಿ, ಪ್ರಜ್ವಲ್ ರೇವಣ್ಣ, ಶ್ರೇಯಸ್ ಪಟೇಲ್ ಮತ್ತಿತರರು.

    ಮತಗಟ್ಟೆ ಆವರಣದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್‌ಗಳನ್ನು ಇಡಲು ವಿಶೇಷ ವ್ಯವಸ್ಥೆ ಇರುತ್ತದೆ.

    14 ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ತೆರಳಿದ್ದಾರೆ. ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ ಸಮಾವೇಶಗೊಂಡು ನಿಗದಿಪಡಿಸಿದ ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಇತರ ಸಾಮಗ್ರಿಗಳೊಂದಿಗೆ ತೆರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts