More

    ಬತ್ತುತ್ತಿದೆ ಅಂತರ್ಜಲ ಮಟ್ಟ

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಕಳೆದೊಂದು ವಾರದಿಂದ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾದರೆ, ಹಲವೆಡೆ ಮಳೆ ಇಲ್ಲದೆ ಧಗೆ ಏರುತ್ತಿದೆ. ಕೃಷಿ ತೋಟಗಳಿಗೆ ನೀರು ಪೂರೈಸಲು ಸಾಧ್ಯವಾಗದೆ ಹಳದಿ ಬಣ್ಣಕ್ಕೆ ತಿರುಗಿದೆ.

    ಏಪ್ರಿಲ್- ಮೇ ತಿಂಗಳ ಬಿರು ಬಿಸಿಲಿನಲ್ಲಿ ಇದ್ದೇವೋ ಎನ್ನುವಂಥ ಅನುಭವ ಮಾರ್ಚ್‌ನಲ್ಲಿಯೇ ಕಾಣಲಾರಂಭಿಸಿದೆ. ಮುಂದಿನ ಎರಡು ತಿಂಗಳು ಹೇಗೋ ಎನ್ನುವ ಭಯ ಕರಾವಳಿ ಜನರನ್ನು ಕಾಡುತ್ತಿದೆ.

    ಸಾಮಾನ್ಯವಾಗಿ ಶಿವರಾತ್ರಿವರೆಗೆ ಚಳಿ ಎನ್ನುವ ಮಾತು ಹಿಂದಿನ ಕಾಲದಿಂದಲೂ ಈ ಭಾಗದಲ್ಲಿ ಕೇಳಿಕೊಂಡು ಬಂದಿರುವ ವಾಸ್ತವ ಸತ್ಯ. ಆದರೆ ಈ ವರ್ಷದ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಬೆರಳೆಣಿಕೆಯಷ್ಟು ದಿನವಷ್ಟೇ ಚಳಿ ಹೊರತುಪಡಿಸಿದರೆ ಉಳಿದದ್ದೆಲ್ಲ ಸೆಖೆಯ ಅನುಭವ.

    ನೀರಿನ ಕೊರತೆ

    ಸುಮಾರು ನಾಲ್ಕು ದಶಕಗಳ ಹಿಂದೆ ಕರಾವಳಿ ಮಲೆನಾಡು ಕೃಷಿಕರು ಗದ್ದೆಯಲ್ಲಿ ವ್ಯಾಪಕವಾಗಿ ಭತ್ತ ಬೆಳೆಯುತ್ತಿದ್ದರು. ಈ ಭಾಗದ ಪ್ರಮುಖ ಆಹಾರ ಬೆಳೆಯಾದ ಭತ್ತವನ್ನು ಬಹಿಷ್ಕರಿಸಿ ವಾಣಿಜ್ಯ ಬೆಳೆಗೆ ಕೃಷಿಕ ಮುಖ ಮಾಡಿದ್ದೇ ನೀರಿನ ಕೊರತೆಗೆ ಪ್ರಮುಖ ಕಾರಣ ಎನ್ನುವ ಕೂಗು ಕೇಳಿಬರುತ್ತಿದೆ. ಹಿಂದೆ ಗದ್ದೆ ನಾಟಿ ಮಾಡುವಾಗ ವರ್ಷದ ಒಂಬತ್ತರಿಂದ ಹತ್ತು ತಿಂಗಳು ನೀರನ್ನು ಗದ್ದೆಗೆ ಹರಿಸಿ ಗದ್ದೆಯಲ್ಲಿ ನೀರನ್ನು ಶೇಖರಿಸುವ ಪದ್ಧತಿ ಇತ್ತು. ಅದು ಅಂತರ್ಜಲ ಮಟ್ಟ ಹೆಚ್ಚಿಸುತ್ತಿತ್ತು.

    ವಾಣಿಜ್ಯ ಬೆಳೆಯತ್ತ ಒಲವು

    ಇಂದು ಆಹಾರ ಬೆಳೆ ಬೆಳೆಯುವುದು ಕಡಿಮೆಯಾಗಿ ವಾಣಿಜ್ಯ ಬೆಳೆಗೆ ಕೃಷಿಕ ಮುಖ ಮಾಡಿದ ಪರಿಣಾಮ ಗದ್ದೆಯಲ್ಲಿ ನೀರು ನಿಲ್ಲುವ ಪ್ರಕ್ರಿಯೆ ಕುಂಠಿತವಾಗಿ ತಿಂಗಳುಗಳ ಕಾಲ ಅಂತರ್ಜಲ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ. ಭೂಮಿ ಸಾಕಷ್ಟು ನೀರನ್ನು ತನ್ನ ಒಡಲಲ್ಲಿ ಹೀರಿಕೊಂಡು ಗದ್ದೆಯಲ್ಲಿ ನೀರನ್ನು ಉಳಿಸಿಕೊಳ್ಳುತ್ತಿತ್ತು. ಆದರಿಂದ ಕೃಷಿ ಭೂಮಿ ಫಲಪ್ರದವಾಗಿ ಅಂತರ್ಜಲ ಮಟ್ಟ ಹೆಚ್ಚಿಸಿಕೊಂಡಿತ್ತು. ಆದರೆ ಈ ಹೀರಿಕೊಳ್ಳುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು ನೀರಿನ ಆಭಾವಕ್ಕೆ ಪ್ರಮುಖ ಕಾರಣವಾಗಿದೆ.

    water problem 2
    ಗದ್ದೆಯಲ್ಲಿ ನೀರು ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪದ್ಧತಿ.

    ಬದಲಾದ ಜೀವನ ಶೈಲಿ

    ಹಿಂದಿನ ಕಾಲದಲ್ಲಿ ಹಳ್ಳ-ಹೊಳೆಗಳಲ್ಲಿ ಕಲ್ಲಿನಿಂದ ಕಟ್ಟಿದ ಒಡ್ಡುಗಳ ನಿರ್ಮಾಣದಿಂದ ನೀರು ಶೇಖರಣೆಯಾಗುತ್ತಿತ್ತು. ಒಡ್ಡುಗಳ ಕೆಳಗೆ ಹೂಳು ತೆಗೆಯದೆ ಇರುವುದರಿಂದ ನೀರು ಶೇಖರಣೆಗೆ ಆಧಾರವಾಗಿ ಇರುತ್ತಿತ್ತು. ಇದರಿಂದ ನೀರಿನ ಮಟ್ಟ ಏರುತ್ತಿತ್ತು. ಈ ನೀರಿನ ಒಡ್ಡುಗಳ ಬದಲಿಗೆ ಚೆಕ್‌ಡ್ಯಾಂ ನಿರ್ಮಾಣವಾಗಿ ನೀರು ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಚೆಕ್ ಡ್ಯಾಂಗಳಲ್ಲಿ ಎರಡು ಹಲಗೆ ಜೋಡಿಸಿ ಮಧ್ಯೆ ಮಣ್ಣು ತುಂಬಿಸದೆ, ಒಂದೇ ಹಲಗೆ ಜೋಡಿಸುವುದರಿಂದ ನೀರಾವರಿಗಾಗಿ ನೀರು ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಚೆಕ್‌ಡ್ಯಾಂಗಳ ಕೆಳಗೆ ಹೂಳನ್ನು ಎತ್ತಿ ಟ್ರೆಂಚ್ ರಚಿಸುವುದರಿಂದ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಚೆಕ್ ಡ್ಯಾಂಗಳ ಮೇಲ್ಗಡೆ ಹೂಳು ತುಂಬಿದ್ದು ಅದನ್ನು ತೆಗೆಯದೆ ಇರುವುದಿಂದಲೂ ನೀರು ಸಂಗ್ರಹ ವ್ಯಾಪ್ತಿ ಕಡಿಮೆಯಾಗುತ್ತದೆ.

    ಅಭಿವೃದ್ಧಿಯ ಕೆಲಸಗಳಲ್ಲಿ ರಸ್ತೆ ನಿರ್ಮಾಣಗಳು ನಡೆಯುವಾಗ ಮರಗಳನ್ನು ಕಡಿಯುವುದು, ಎತ್ತರದ ಗುಡ್ಡಗಳನ್ನು ಜರಿದು ಸಮತಟ್ಟು ಮಾಡುವುದು, ನೀರಿಗಾಗಿ ಅತಿ ಆಳದವರೆಗೆ ಕೊಳವೆ ಬಾವಿ ಕೊರೆಯುವುದರಿಂದ ಭೂಮಿ ಸಮತೋಲನ ತಪ್ಪಿ ಜಲಕ್ಷಾಮ, ಭೂಕಂಪನಗಳು ಸಂಭವಿಸುವುದು ಸಹಜ. ಪಾರಂಪರಿಕ ಕೃಷಿಯನ್ನು ಬದಿಗೊತ್ತಿ ಆಧುನಿಕ ಕೃಷಿಗೆ ದಾಪುಕಾಲು ಹಾಕಿದುದು, ಸಾವಯವ ಕೃಷಿಯ ಒಲವು ಕಡಿಮೆಯಾದದ್ದು ಪ್ರಕೃತಿ ವೈಪರಿತ್ಯಕ್ಕೆ ಕಾರಣ.
    -ಯೋಗೀಶ ದಾಮಲೆ
    ಅನುಭವಿ ಕೃಷಿಕರು, ಶಿಶಿಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts