More

    ಕಾಳಿಂಗ ಸರ್ಪ, ಇರಲಿ ಎಚ್ಚರ: ಮಾರ್ಚ್‌ನಿಂದ ಜೂನ್‌ವರೆಗೆ ಹೆಚ್ಚು ಓಡಾಟ

    ಹರಿಪ್ರಸಾದ್ ನಂದಳಿಕೆ ಕಾರ್ಕಳ
    ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಮಾರ್ಚ್‌ನಿಂದ ಜೂನ್‌ವರೆಗೆ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಾಣಸಿಗುವುದು ಸಾಮಾನ್ಯವಾಗಿದೆ. ಕಾಡು ಪ್ರದೇಶ, ಮನೆ, ದನದ ಹಟ್ಟಿ ಹೀಗೆ ನಾನಾ ಕಡೆಗಳಲ್ಲಿ ಕಣ್ಣಿಗೆ ಗೋಚರಿಸುವ ಮೂಲಕ ಜನ ಸಾಮಾನ್ಯರಿಗೆ ಭೀತಿಯನ್ನು ಹುಟ್ಟಿಸುತ್ತವೆ.

    ಕಾಳಿಂಗ ಸರ್ಪ ಬಲು ಅಪಾಯಕಾರಿ

    ಕಾಳಿಂಗ ಸರ್ಪಗಳು ತೀವ್ರ ಸ್ವರೂಪದ ವಿಷ ಹೊಂದಿರುವ ಹಾವುಗಳಾಗಿದ್ದು, ಬಲು ಅಪಾಯಕಾರಿಯಾಗಿದೆ. ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಿಂದ ಜೂನ್ ಮೊದಲ ವಾರದವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು, ಇದಕ್ಕೂ ಮುಂಚೆ ಆಹಾರ ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ಸಂತಾನೋತ್ಪತ್ತಿಗೆ ಸಿದ್ಧ ಎಂದು ಲೈಂಗಿಕ ಸಂಕೇತವಾದ (ಸೆಕ್ಸ್ ೆರಮೋನ್) ರಾಸಾಯನಿಕ ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತಪಡಿಸುತ್ತದೆ. ಈ ರಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ. ಹೀಗಾಗಿ ಮಾರ್ಚ್ ತಿಂಗಳಿಂದ ಜೂನ್ ತಿಂಗಳ ವರೆಗೂ ಕಾಡು ಪ್ರದೇಶದಿಂದ ನಾಡು ಪ್ರದೇಶಕ್ಕೆ ಕಾಳಿಂಗ ಸರ್ಪಗಳು ಸಂಚಾರ ನಡೆಸುತ್ತವೆ.ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ವಿಷಕಾರಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

    ಕಾರ್ಕಳ ತಾಲೂಕಿನ ಶಿರ್ಲಾಲು, ಕೆರ್ವಾಶೆ, ಹೊಸ್ಮಾರು, ಈದು ಅಜೆಕಾರು, ಮಾಳ, ಮುಡಾರು, ಬಜಗೋಳಿ, ಹೆಬ್ರಿ ತಾಲೂಕಿನ ಅಂಡಾರು, ಮುನಿಯಾಲು, ಮುದ್ರಾಡಿ, ಅಲ್ಬಾಡಿ, ಚಾರ, ಹೆಬ್ರಿ, ಕುಚ್ಚೂರು, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ, ಆಗುಂಬೆ, ಕುಂದಾಪುರ ತಾಲೂಕು, ಬೆಳ್ತಂಗಡಿ ತಾಲೂಕಿನ ಭಾಗಗಳಲ್ಲಿ ಮಾರ್ಚ್ ತಿಂಗಳ ಮೊದಲ ವಾರದಿಂದ ಜೂನ್ ತಿಂಗಳವರೆಗೆ ಕಾಳಿಂಗ ಸರ್ಪಗಳ ಓಡಾಡ ಇದ್ದು, ಜನರ ಕಣ್ಣಿಗೆ ಆಗಾಗ ಕಾಣಿಸುತ್ತದೆ.

    8 ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ

    ಕಾಳಿಂಗ ಹೆಣ್ಣು ಹಾವುಗಳು 5 ಕಿ.ಮೀ. ಸೀಮಾ ವ್ಯಾಪ್ತಿಯಲ್ಲಿ ಬದುಕುತ್ತವೆ. ಗಂಡು ಕಾಳಿಂಗಗಳು 8 ಕಿ.ಮೀ. ವ್ಯಾಪ್ತಿಯ ಸೀಮಾ ವಲಯದಲ್ಲಿ ವಾಸಿಸಬಲ್ಲವು. ಆದರೆ ಬೆದೆಯ ಕಾಲದಲ್ಲಿ ಗಂಡು ಹಾವು ಸುಮಾರು 12 ಕಿ.ಮೀ. ದೂರದ ವರೆಗೂ ಕ್ರಮಿಸಿ ಮೂಲ ನೆಲೆಗೆ ವಾಪಸಾಗಬಲ್ಲವು. ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು, ಗಂಡು ಕಾಳಿಂಗ 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ಸಂಚರಿಸುವಾಗ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ ಬಿಡುಗಡೆಗೊಳಿಸುತ್ತಾ ಸಾಗುತ್ತವೆ. ಈ ರಾಸಾಯನಿಕ 11 ದಿನಗಳ ವರೆಗೂ ಕ್ರಿಯಾಶೀಲವಾಗಿರಬಲ್ಲದು.

    ಮಿಲನಕ್ಕೆ ಒಪ್ಪದ ಹೆಣ್ಣು ಗಂಡಿಗೆ ಆಹಾರ

    ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆಯ ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ ಉರಗ ಸಂರಕ್ಷರನ್ನು ಕರೆಯಿಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ಬೆದೆಯ ಕಾಲ ವರ್ಷ ಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ, ಅದಕ್ಕೆ ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು. ಇಲ್ಲವೆ ಮಿಲನಕ್ಕೆ ಒಪ್ಪದ ಹೆಣ್ಣು ಹಾವು ಗಂಡಿಗೆ ಆಹಾರವಾಗಬಹುದು ಎನ್ನುವುದು ಉರಗ ತಜ್ಞರ ಅಭಿಪ್ರಾಯ.

    ಜಾಗೃತಿ, ಸುರಕ್ಷತೆ ಮುಖ್ಯ

    ಕಾಳಿಂಗ ಹಾವುಗಳು ಕಟ್ಟಿಗೆ, ಮನೆಯೊಳಗೆ ಬಂದರೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಉರಗ ತಜ್ಞರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಸ್ವಲ್ಪ ದೂರ ಬಿಡಬೇಕು. ಹಾವು ಹಿಡಿಯುವುದು ಅಪಾಯಕಾರಿ. ಸುರಕ್ಷಾ ವಿಧಾನಗಳು ಅತಿ ಮುಖ್ಯ. ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬಾರದು. ಹಾವು ಹಿಡಿಯಲು ಉರಗ ತಜ್ಞರ ನೆರವನ್ನು ಪಡೆಯಬೇಕು. ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ. ಬೆದೆಗೆ ಬಂದ ಹೆಣ್ಣು ಕಾಳಿಂಗಕ್ಕಾಗಿ ನಾಲ್ಕೈದು ಗಂಡು ಕಾಳಿಂಗ ಹಾವುಗಳು ಹಂಬಲಿಸುತ್ತವೆ. ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡು ಬಂದಾಗ ಭಯ ಪಡದೆ ಜಾಗೃತೆ ವಹಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಮುಖ್ಯವಾಗಿದೆ.

    ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಪರಿಣತಿ ಹೊಂದದೆ ಹಾವುಗಳನ್ನು ಹಿಡಿಯಲು ಪ್ರಯತ್ನಿಸುವುದು ತುಂಬಾನೇ ಅಪಾಯಕಾರಿ. ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಹಾವುಗಳು 2-3 ದಿನ ಅಲ್ಲಿದ್ದು, ನಂತರ ಹೊರಟು ಹೋಗುತ್ತವೆ. ಸೆರೆ ಹಿಡಿದು ದೂರ ಬಿಡುವ ಸಾಹಸ ಮಾಡಬಾರದು. -ನಾಗರಾಜ್ ಬೆಳ್ಳೂರು, ಉರಗ ತಜ್ಞರು

    ಗೂಡು ಕಟ್ಟಿ ಮೊಟ್ಟೆಯಿಟ್ಟು ಜನ್ಮ ನೀಡುವ ಅಪರೂಪದ ಹಾವುಗಳು. ಕಾಳಿಂಗ ಸರ್ಪಗಳನ್ನು ಹಿಡಿಯಲು ಪ್ರಯತ್ನಿಸಬೇಡಿ. ವಿಷಕಾರಿ ಹಾವುಗಳೇ ಕಾಳಿಂಗದ ಮುಖ್ಯ ಆಹಾರ. ಇಲಿ, ಹೆಗ್ಗಣಗಳು ಮನೆಯೊಳಗೆ ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ. ಕಾಳಿಂಗ ಸರ್ಪಗಳು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಾರ್ಚ್‌ನಿಂದ ಜೂನ್ ತಿಂಗಳ ವರೆಗೆ ಮಿಲನ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ಹೆಚ್ಚಾಗಿ ಜನರ ಕಣ್ಣಿಗೆ ಗೋಚರಿಸುತ್ತವೆ. -ಅಜಯ್ ಗಿರಿ, ಉರಗ ತಜ್ಞ, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts