More

    ಬಡವರ ಜೀವನಕ್ಕೆ ಗೃಹಲಕ್ಷ್ಮಿ ಯೋಜನೆ ಸಹಕಾರಿ

    ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿಯೋಜನೆ ಬಡಜನರ ಜೀವನಕ್ಕೆ ಸಹಕಾರಿಯಾಗಿದ್ದು, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
     ತಾಲೂಕಿನ ಅಣಬೂರು, ಹನುಮಂತಾಪುರ, ತರಳಬಾಳು ಕೇಂದ್ರ, ಹಿರೇಮಲ್ಲನಹೊಳೆ, ಮುಸ್ಟೂರು, ಕಲ್ಲೇದೇವರಪುರ, ದೊಣ್ಣೆಹಳ್ಳಿ, ತೋರಣಗಟ್ಟೆ, ಬಿದರಕೆರೆ, ಬಿಸ್ತುವಳ್ಳಿ ಗ್ರಾಮಗಳಲ್ಲಿ ಗುರುವಾರ ಪ್ರಚಾರ ನಡೆಸಿ, ಮಾತನಾಡಿದರು.
     ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರಿಂದ ಸಾವಿರಾರು ಹೆಣ್ಣುಮಕ್ಕಳು ತಮ್ಮ ಮನೆಗಳಿಗೆ ಟಿ.ವಿ., ಪ್ರಿಜ್, ವಾಷಿಂಗ್ ಮೆಷಿನ್, ಬಂಗಾರ ಖರೀದಿಸಿದ್ದಾರೆ. ಜಗಳೂರು ಕ್ಷೇತ್ರದಲ್ಲಿ ಮಾರ್ಚ್ ಅಂತ್ಯಕ್ಕೆ ಸುಮಾರು 98 ಕೋಟಿ ರೂ.ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
     ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಂಬರ್1 ಸ್ಥಾನ ಪಡೆದ ವಿದ್ಯಾರ್ಥಿಯೂ ತನ್ನ ವಿದ್ಯಾಭ್ಯಾಸಕ್ಕೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿರುವುದನ್ನು ಸ್ಮರಿಸಿದ ಅವರು, ಇಂತಹ ಹತ್ತು ಹಲವು ಕಾರ್ಯಕ್ರಮ ರೂಪಿಸಿದ ಕೀರ್ತಿಗೆ ಕಾಂಗ್ರೆಸ್ ಪಕ್ಷ ಭಾಜನವಾಗಿದೆ ಎಂದರು.
     ಜಗಳೂರು ಮತ್ತು ಹರಪನಹಳ್ಳಿ ಜೋಡಿ ತಾಲೂಕುಗಳಾಗಿದ್ದು, ಎರಡೂ ತಾಲೂಕುಗಳ ಅಭಿವೃದ್ಧಿ ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲಾಗುವುದು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
     ಜಗಳೂರು ತಾಲೂಕಿನಲ್ಲಿ ಬರ ಪ್ರದೇಶ ಇತ್ತೇ ಎಂಬಂತೆ ನೀರಾವರಿ ಪ್ರದೇಶ ಮಾಡಲು ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು 22 ಕೆರೆ ಮತ್ತು 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಕೆಲಸ ಮಾಡಿದ್ದು, ಇನ್ನು ಹೆಚ್ಚಿನ ಕೆಲಸ ಮಾಡಲು ಈಗಾಗಲೇ ರೂಪುರೇಷೆ ತಯಾರಿಸಲಾಗಿದೆ ಎಂದು ತಿಳಿಸಿದರು.
     ಜಗಳೂರು ತಾಲೂಕಿನ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜತೆಗೆ ಪ್ರತಿ ಮನೆ, ಮನೆಗೂ ನೀರು ಸರಬರಾಜು ಮಾಡಲಾಗುವುದು. ತಾಲೂಕು ಹಿಂದುಳಿದ ಪ್ರದೇಶವೆಂದು ನಂಜುಂಡಪ್ಪ ವರದಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
     ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಗುರುಸಿದ್ದನ ಗೌಡ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹಮದ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕೆ.ಪಿ. ಪಾಲಯ್ಯ, ಮುಖಂಡರಾದ ಡಾ.ಟಿ.ಜಿ. ರವಿಕುಮಾರ್, ಕಲ್ಲೇಶ್ ರಾಜ್ ಪಾಟೀಲ್, ಸುರೇಶ್ ಗೌಡ್ರು, ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts