ಹೈದರಾಬಾದ್: ಹಾಲಿ ಆವೃತ್ತಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಸೋಲಿನ ಸರಪಳಿ ಕಳಚಿ ತಂಡದ 250ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ರಜತ್ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಬಲದಿಂದ ಐಪಿಎಲ್-17ರ 9ನೇ ಲೀಗ್ ಪಂದ್ಯದಲ್ಲಿ ರನ್‌ಮಳೆ ಹರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ಎದುರು 35 ರನ್‌ಗಳಿಂದ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದ ನಡುವೆಯೂ ಫಾಫ್ ಡು ಪ್ಲೆಸಿಸ್ ಪಡೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿ ಉಳಿದಿದೆ. ಸನ್‌ರೈಸರ್ಸ್ ಸೋಲಿನೊಂದಿಗೆ ಈ ಬಾರಿ ಎಲ್ಲ ತಂಡಗಳು ತವರಿನ ಅಂಗಣದಲ್ಲಿ ಕನಿಷ್ಠ ಒಂದು ಸೋಲು ಅನುಭವಿಸಿದಂತಾಗಿದೆ.
ಆರ್‌ಜಿಐ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ, ಕೊಹ್ಲಿ-ಪಾಟೀದಾರ್ ಜತೆಯಾಟ ಹಾಗೂ ಕೊನೆಯಲ್ಲಿ ಕ್ಯಾಮರಾನ್ ಗ್ರೀನ್ (37* ರನ್, 20 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 206 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಸ್ವಪ್ನಿಲ್ ಸಿಂಗ್ (40ಕ್ಕೆ 2), ಕರ್ಣ್ ಶರ್ಮ (29ಕ್ಕೆ 2) ಸ್ಪಿನ್ ದಾಳಿಗೆ ನಲುಗಿದ ಸನ್‌ರೈಸರ್ಸ್, 8 ವಿಕೆಟ್‌ಗೆ 171 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಸ್ಪಿನ್ ದಾಳಿಗೆ ತತ್ತರ: ಮೊದಲ ಓವರ್‌ನಲ್ಲಿ ಟ್ರಾವಿಸ್ ಹೆಡ್ (1) ವಿಕೆಟ್ ಪಡೆದ ವಿಲ್ ಜಾಕ್ಸ್ ಆರ್‌ಸಿಬಿಗೆ ಯಶಸ್ಸು ತಂದರು. ಅಭಿಷೇಕ್ ಶರ್ಮ (31) ಬಿರುಸಿನ ಆರಂಭ ನೀಡಲು ಯತ್ನಿಸಿದರೂ ಆದರೆ ಯಶ್ ದಯಾಳ್ ಬ್ರೇಕ್ ಹಾಕಿದರು. ಏಡೆನ್ ಮಾರ್ಕ್ರಮ್ (7), ಹೆನ್ರಿಕ್ ಕ್ಲಾಸೆನ್ (7) ವಿಕೆಟ್ ಪಡೆದ ಸ್ವಪ್ನಿಲ್ ಸಿಂಗ್ ಆರ್‌ಸಿಬಿಗೆ ಸಂಪೂರ್ಣ ಮೇಲುಗೈ ತಂದರು. ಪವರ್ ಪ್ಲೇಯಲ್ಲಿ ಪ್ರಮುಖ 4 ವಿಕೆಟ್ ಕೈ ಚೆಲ್ಲಿದ ಸನ್‌ರೈಸರ್ಸ್ ಚೇಸಿಂಗ್‌ನಲ್ಲಿ ಪವರ್ ಕಳೆದುಕೊಂಡಿತು. 85 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಾಗ ನಾಯಕ ಪ್ಯಾಟ್ ಕಮ್ಮಿನ್ಸ್ (31) ಪ್ರತಿರೋಧಕ್ಕೆ ಕ್ಯಾಮರಾನ್ ಗ್ರೀನ್ ತಡೆಯೊಡ್ಡಿದರು. ನಿರಂತರ ವಿಕೆಟ್ ಕಬಳಿಸಿದ ಆರ್‌ಸಿಬಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಶಾಬಾಜ್ ಅಹ್ಮದ್ (40*) ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು.
ಈ ಒಂದು ಕಾರಣಕ್ಕಾಗಿ ನಾವು ಅಂದು ಚಹಲ್ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ: ಮೈಕ್ ಹೆಸ್ಸನ್