

ಇಂಡಿ: ಲೋಕಸಭಾ ಚುನಾವಣೆ ಸಂಬಂಧ ಮತದಾನ ಜಾಗೃತಿಗೆ ಈ ಬಾರಿ ಆರೋಗ್ಯ ಇಲಾಖೆ ಕೈಜೋಡಿಸಿದ್ದು ರೋಗಿಗಳಿಗೆ ನೀಡುವ ಚೀಟಿಗಳ ಮೇಲೂ ಮತ ಜಾಗೃತಿ ಮೂಡಿಸುತ್ತಿದೆ.
ಅಂಚೆ ಇಲಾಖೆ ಪ್ರತಿ ಪೋಸ್ಟ್ನಲ್ಲಿಯೂ ಮತಜಾಗೃತಿ ಮೂಡಿಸುತ್ತಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರಿಗೆ ಬರುವ ಪತ್ರಗಳ ಮೇಲೆ ಚುನಾವಣೆ ಪರ್ವ ದೇಶದ ಗರ್ವ ಎಂದು ಮೊಹರು (ಸೀಲ್) ಹಾಕಲಾಗುತ್ತಿದೆ. ಇನ್ನೊಂದೆಡೆ ಅಂಚೆ ಕಚೇರಿಯಲ್ಲಿ ಸಿಗುವ ಕವರ್ಗಳಲ್ಲಿಯೂ ಸಹ ಮತದಾನ ಜಾಗೃತಿ ಮೂಡಿಸುವ ಬರಹಗಳನ್ನು ಹಾಕಲಾಗಿದೆ.
ನಿತ್ಯ 500ಕ್ಕೂ ಹೆಚ್ಚು ಪೋಸ್ಟ್ಗಳು ಮತ ಜಾಗೃತಿ ಮೂಡಿಸುತ್ತಿವೆ. ಮತದಾನ ದಿನದವರೆಗೂ ಈ ರೀತಿ ಮತಜಾಗೃತಿ ಮೂಡಿಸಲು ಅಂಚೆ ಇಲಾಖೆ ಮುಂದಾಗಿದೆ.
ಈ ಬಾರಿ ವೈಯಕ್ತಿಕ ಹಾಗೂ ಸರ್ಕಾರಿ, ಖಾಸಗಿ ಕಚೇರಿಗಳು, ಬ್ಯಾಂಕ್ಗಳು ಸೇರಿದಂತೆ ಎಲ್ಲ ಪೋಸ್ಟ್ಗಳ ಮಾದರಿಗಳಲ್ಲಿಯೂ ಮತಜಾಗೃತಿ ಮೂಡಿಸುತ್ತಿರುವುದು ವಿಶೇಷ.
ಪ್ರತಿ ಮನೆಗೆ ಹಾಲು ಸರಬರಾಜು ಮಾಡುವ ಕೆಎಂಎ್ ಇದೀಗ ಮತದಾನದ ಮಹತ್ವ ಸಾರುವ ಮೂಲಕ ಪ್ರಜಾಪ್ರಭುತ್ವದ ನತೆ ತಿಳಿಸುತ್ತಿದೆ. ಕೆಎಸ್ಆರ್ಟಿಸಿ ಬಸ್ ಟಿಕೆಟ್ಗಳ ಮೇಲೂ ಮತ ಜಾಗೃತಿ ಮೂಡಿಸಲಾಗುತ್ತಿದೆ. ನರೇಗಾ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿಯೂ ಜಿಲ್ಲಾ ಪಂಚಾಯಿತಿ ಕೂಡ ಮತಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕೂಲಿಕಾರರ ಬಳಿ ಜಾಗೃತಿ ಗೀತೆ ಹಾಡುವುದು, ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಮತಜಾಗೃತಿ ಮೂಡಿಸಲಾಗುತ್ತಿದೆ.