

ಹೊನ್ನಾಳಿ: ದೇಶದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದರೆ ಪ್ರತಿಯೊಬ್ಬ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ಕುಮಾರ್ ಹೇಳಿದರು.
ಮತದಾರರ ದಿನದ ಅಂಗವಾಗಿ ನಗರದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದೆಂದು ಹೆಮ್ಮೆ ಪಡುವ ಜತೆಗೆ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಚಲಾಯಿಸಿ ಚುನಾವಣೆಗಳಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಯುವಕರು ಜಾತಿ, ಜನಾಂಗಕ್ಕೆ ಜೋತು ಬೀಳದೆ ಪ್ರಾಮಾಣಿಕ ಹಾಗೂ ನಿಷ್ಠುರ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ದೇಶ, ರಾಜ್ಯ, ತಾಲೂಕು ಹಾಗೂ ಗ್ರಾಮ ಅಭಿವೃದ್ಧಿಯಾಗುತ್ತವೆ. ಇಲ್ಲದಿದ್ದರೆ ಸ್ವಜನ ಪಕ್ಷಪಾತ ತಾಂಡವವಾಡುತ್ತದೆ, ಇದಕ್ಕೆ ಮತದಾರರು ಅವಕಾಶ ನೀಡಬಾರದು ಎಂದರು.
ಕಡ್ಡಾಯ ಮತದಾನ ಅತ್ಯಗತ್ಯ ; ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಶೇಕಡಾವಾರು ಮತದಾನ ಕುಸಿಯುತ್ತಿದೆ. ಇದು ಆತಂಕದ ವಿಚಾರ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿದರೆ ಮಾತ್ರ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯ ಎಂದು ಹೇಳಿದರು.
ಜಾತಿ, ಜನಾಂಗ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಪೊಲೀಸ್ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪಿಎಸೈಗಳಾದ ಸೈಪುದ್ದೀನ್, ನಿರ್ಮಲಾ, ಎಎಸ್ಐ ಹರೀಶ್ ಇತರರು ಇದ್ದರು.