ವಿವೇಚಿಸಿ ಮತದಾನ ಮಾಡಿ, ಯೋಗ್ಯರನ್ನು ಆಯ್ಕೆ ಮಾಡಿ

Mukhyamantri Chandru
Published on

ಬೆಂಗಳೂರು: ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ರಾಷ್ಟ್ರವು ಸದೃಢ ಪ್ರಜಾಪ್ರಭುತ್ವವಾಗಿ ಹೊರಹೊಮ್ಮುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.

ರಾಷ್ಟ್ರದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು.

ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ವಿಶ್ವಕ್ಕೆ ಸರ್ವರೂ ಸಮಾನರು ಎಂಬ ಸಂದೇಶ ರವಾನೆಯಾಗುತ್ತದೆ. ಈ ಬಾರಿಯಾದರೂ ಅಂತಹ ವಿವೇಚನೆಯನ್ನು ಬೆಳೆಸಿಕೊಂಡು ಮತದಾನ ಮಾಡಬೇಕು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಬದ್ಧರಾಗೋಣ ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಕಟ್ಟಕಡೆಯ ಮನುಷ್ಯನಿಗೆ ಸಿಗಬೇಕಿತ್ತು. ಆದರೆ ಆತನ ಪರಿಸ್ಥಿತಿ ಅತಂತ್ರವಾಗಿದೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಚಾರ, ಅನ್ಯಾಯಗಳನ್ನು ನೋಡುತ್ತಿದ್ದರೆ ನಮಗೆ ಈ ಸ್ವಾತಂತ್ರ್ಯ ಬೇಕಿತ್ತೆ ಎಂದೆನಿಸಿ ಬಹಳ ದುಃಖವಾಗುತ್ತದೆ ಎಂದರು.

ಮಹಾತ್ಮ ಗಾಂಧಿ ಅವರು ದೇಶಾದ್ಯಂತ ತುಂಡು ಬಟ್ಟೆಯಲ್ಲಿ, ಕಾಲಿಗೆ ಚಪ್ಪಲಿಯಿಲ್ಲದೆ ಅಲೆದಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಆ ಶ್ರಮಕ್ಕೆ ನಾವೆಷ್ಟು ಬೆಲೆ ಕೊಡುತ್ತಿದ್ದೇವೆ ಎಂದು ಎಲ್ಲರು ತಮ್ಮಲ್ಲೇ ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಉಪಾಧ್ಯಕ್ಷರಾದ ಮೋಹನ್ ದಾಸರಿ, ವಿಜಯ್ ಶರ್ಮಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲ ಸ್ವಾಮಿ, ಸಾಂಸ್ಕೃತಿಕ ಘಟಕದ ರಾಜ್ಯಾಧ್ಯಕ್ಷೆ ಸುಷ್ಮಾ ವೀರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net